ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ 9ನೇ ಅಧ್ಯಾಯ ಇಲ್ಲಿದೆ…
ಅಧ್ಯಾಯ 9
ನಾರಾಯಣ ಗುರುಗಳ ಚಿಂತನೆ ಮತ್ತು ಬದುಕಿನ ಬಹುಮುಖ್ಯ ಘಟನೆಗಳನ್ನು ಪ್ರಸ್ತುತಪಡಿಸುವ ಈ ವಿನೀತ ಪ್ರಯತ್ನದ ಉಪಸಂಹಾರಕ್ಕೆ ಮುನ್ನ ಅವರ ಕೊನೆಯ ವರ್ಷಗಳಿಗೆ ಸಂಬಂಧಿಸಿದ ವೈಯಕ್ತಿಕ ನೆನಪುಗಳನ್ನು ದಾಖಲಿಸಬೇಕು ಅನ್ನಿಸುತ್ತಿದೆ. ತ್ರಿಶ್ಶೂರ್‌ನಲ್ಲಿರುವ ಗುರುಗಳೇ ಸ್ಥಾಪಿಸಿದ ಆಶ್ರಮದಲ್ಲಿ ಈ ಲೇಖಕನಿಗೆ ಅವರ ವಿದಾಯದ ಮೊದಲ ಸೂಚನೆಗಳು ಗೋಚರಿಸಿದವು. ಸಣ್ಣ ಬೇಲಿಯನ್ನು ದಾಟಿ ಆಶ್ರಮದ ಆವರಣಕ್ಕೆ ಕಾಲಿಟ್ಟ ಲೇಖಕನಿಗೆ ಕಾಣಿಸಿದ್ದು ಆಶ್ರಮದ ಕೈತೋಟಕ್ಕೆ ಮುಖಮಾಡಿ ಕುಳಿತಿದ್ದ ಗುರುಗಳು, ಅವರಂದು ವಿಶೇಷವಾದ ಒಂದು ಸ್ಥಿತಿಯಲ್ಲಿದ್ದರು. ಸಾಮಾನ್ಯ ಸಂದರ್ಭಗಳಲ್ಲಿ ಎಂಥದ್ದೇ ಮಾತುಕತೆಯಾದರೂ ಅದನ್ನು ತಾತ್ವಿಕ ವಿಚಾರಗಳ ಕಡೆಗೆ ಹೊರಳಿಸುವುದು ಅವರ ಹವ್ಯಾಸವಾಗಿತ್ತು. ಈ ಹಿಂದಿನ ಭೇಟಿಗಳಲ್ಲಿ ನಮ್ಮ ಮಾತುಕತೆಗಳು ಹೀಗೆಯೇ ಇರುತ್ತಿದ್ದವು. ತಿಂಗಳುಗಳ ಹಿಂದೆ ಅಥವಾ ವರ್ಷಗಳಿಗೂ ಮುನ್ನ ನಡೆದ ಅಪೂರ್ಣ ಚರ್ಚೆಗಳನ್ನು ನೆನಪಿಸಿಕೊಂಡು ಆ ವಿಚಾರತಂತುಗಳನ್ನು ಮರು ಜೋಡಿಸಿ ಗುರುಗಳು ಮಾತುಕತೆಯನ್ನು ಮುಂದುವರಿಸುತ್ತಿದ್ದರು. ಹಿಂದಿನ ಭೇಟಿಯಲ್ಲಿ ಗುರುಗಳೊಂದಿಗೆ ನಡೆಸಿದ ಸಂವಾದ ಈ ಲೇಖಕನಿಗಿನ್ನೂ ನೆನಪಿದೆ. ತತ್ವಶಾಸ್ತ್ರದ ಸಮಸ್ಯೆಯನ್ನು ಅವರು ಸರಳಭಾಷೆಯಲ್ಲಿ ಮಂಡಿಸಿದ್ದರು. ಒಬ್ಬ ವೈಜ್ಞಾನಿಕ ತತ್ವವೇತ್ತನಂತೆ ಅವರು ಹೇಳುತ್ತಾ ಹೋದರು:
“ಭೌತಿಕವಾದ ದ್ರವ್ಯವನ್ನು ವಿಭಜಿಸಲು ಸಾಧ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಒಂದು ಈ ತನಕವೂ ಪ್ರತಿಪಾದಿತವಾಗಿಲ್ಲ. ಯಾವುದೇ ವಸ್ತುವನ್ನು ವಿಭಜನೆ ಹಾಗೂ ಮರುವಿಭಜನೆಯ ಅನಂತ ಪ್ರಕ್ರಿಯೆಗೆ ಒಳಪಡಿಸಿದರೆ ನಾವು ‘ಶೂನ್ಯ’ವೆಂದು ಪರಿಭಾವಿಸಬಹುದಾದ ಹಂತಕ್ಕೆ ತಲುಪುತ್ತೇವೆ. ಆದರೆ ಈ ‘ಶೂನ್ಯ’ವೂ ‘ಏನೂ ಇಲ್ಲದಿರುವಿಕೆ’ಯ ಸ್ಥಿತಿಯಲ್ಲ. ಅಲ್ಲಿ ‘ಶೂನ್ಯ’ ಎಂಬುದೊಂದಿದೆ. ಇದುವೇ ಆದಿವಸ್ತು. ಇದುವೇ ದೈವ ಅಥವಾ ನೀವು ಏನು ಹೆಸರು ಕೊಟ್ಟು ಕರೆಯುತ್ತೀರೋ ಅದು. ಹೀಗೆ ಹೇಳುವುದು ಒಂದು ವಾದ”
ಎಂದು ಹೇಳಿ ಅರಕ್ಷಣ ವಿರಾಮ ಪಡೆದ ಅವರು ಮತ್ತೆ ಮಾತು ಮುಂದುವರಿಸಿದರು.
“ಇನ್ನೂ ಹಲವು ಮಾರ್ಗಗಳಲ್ಲಿ ಇದೇ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಈ ವಾದಗಳು ಬಹಳ ಸಂಕೀರ್ಣ ಮತ್ತು ಸುಲಭದಲ್ಲಿ ಒಪ್ಪಿಕೊಳ್ಳಲು ಅಸಾಧ್ಯವಾದ ಕಾರಣಗಳನ್ನು ಒಳಗೊಂಡಿವೆ ಅನ್ನಿಸಹುದು. ಆದರೆ ಈ ಜ್ಞಾನದಲ್ಲಿ ಆಶ್ಚರ್ಯಕರವಾದದ್ದೋ ನಿಗೂಢವಾದದ್ದೋ ಅಥವಾ ಕಠಿಣಕರವಾದದ್ದೋ ಆದ ಯಾವುದೂ ಇಲ್ಲ. ಇದುವೇ ವೇದಾಂತದ ಸರಳ ಸಾರ’
ಹಿಂದಿನ ಸಾರಿಯ ಅವರ ಮಾತುಗಳು ಬಹುತೇಕ ಮೇಲೆ ವಿವರಿಸಿದಂತೆ ಇತ್ತು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿತ್ತು. ಈ ಲೇಖಕ ಒಳ ಪ್ರವೇಶಿಸಿ ಗುರುಗಳ ಜೊತೆಗಿನ ಸಂಭಾಷಣೆಗಾಗಿ ಕೆಲ ನಿಮಿಷ ಕಾಯುತ್ತಾ ನಿಂತ. ಗುರುಗಳು ಕಣ್ಣುಮುಚ್ಚಿ ಮೌನವಾಗಿ ತಮ್ಮೊಳಗೇ ಲೀನರಾಗಿದ್ದರು. ಪೂಜನೀಯವಾದ ಅವರ ಮುಖದ ಮೇಲೆ ವಾರ್ಧಕ್ಯವು ತನ್ನ ಗುರುತುಗಳನ್ನು ಮೂಡಿಸಿತ್ತು. ಒಳಗಿದ್ದ ದೃಷ್ಟಿಯೊಂದು ಆ ಮುಖಕ್ಕೆ ಉತ್ಸಾಹದ ಪ್ರಭೆಯನ್ನು ಲೇಪಿಸಿತ್ತು. ಈ ಲೇಖಕನಿಗಂತೂ ಗುರುಗಳು ಮಗುವಿನ ಮುಗ್ಧ ಮುಗಳ್ನಗುವಿನೊಂದಿಗೆ ತಮ್ಮ ಶಾಂತತೆಯೊಳಗೆ ಲೀನರಾಗಿದ್ದಂತೆ ಕಾಣಿಸಿತು.
ಈ ಲೇಖಕನ ಮಟ್ಟಿಗಂತೂ ಗುರುಗಳ ಮೌನ ಆಕಸ್ಮಿಕವಾಗಿರಲಿಲ್ಲ. ವರ್ಷಗಳಷ್ಟು ಸುದೀರ್ಘವಾಗಿದ್ದ ಸಂಭಾಷಣೆಯು ಅದರ ಉತ್ತುಂಗವನ್ನು ತಲುಪಿದೆ. ಅದನ್ನು ಉಪಸಂಹರಿಸುವ ಸಮಯ ಇದು ಎಂಬುದನ್ನು ಗುರುಗಳು ತಮ್ಮ ಮೌನದ ಮೂಲಕ ಸೂಚಿಸುತ್ತಿದ್ದರು. ಗೂಢಾರ್ಥಗಳನ್ನು ವಿವರಿಸುವುದಕ್ಕೆ ಆ ಮೌನಕ್ಕಿದ್ದ ಶಕ್ತಿ ಬಹುಶಃ ಮಾತುಗಳಿಗಿಂತಲೂ ಹೆಚ್ಚು. ಅಲ್ಲಿಯ ತನಕದ ಅವರ ಬದುಕಿನ ಪರಾಕಾಷ್ಠೆಯ ಬಿಂದುವೇ ಈ ಮೌನ. ಆನಂದದ ಔನ್ನತ್ಯವೂ ಇದೇ. ಈ ಮೌನ ಪದ್ಮದ ಕೇಂದ್ರದಲ್ಲಿ ಬದುಕುವುದು ಗುರುಗಳ ಅಪೇಕ್ಷೆಯಾಗಿತ್ತು. ಸಕಲ ಸಂದೇಶಗಳ ಕಲರವವೂ ಈ ನಿಶ್ಶಬ್ದತೆಯಲ್ಲಿ ಲೀನವಾಗಿದ್ದವು. ಈ ಭವ್ಯ ಮೌನದ ಉಪಸ್ಥಿತಿಯಲ್ಲಿ ದೃಶ್ಯ, ಶ್ರಾವ್ಯ ಮತ್ತು ಇಂದ್ರಿಯಾತ್ಮಕವಾದ ಸಕಲ ಸಂವೇದನೆಗಳ ಖಾಲಿತನವು ಅವನತಿ ಹೊಂದಿ ಸಮಾಧಿಯಾದವು.
ಇದು ಗುರುಗಳು ವೇದಾಂತದ ಬಗ್ಗೆ ಮಾಡಿದ ಕೊನೆಯ ಪಾಠವಾಗಿತ್ತು. ಆಗ ಅವರು ಕೊಚ್ಚಿ ಪ್ರಾಂತ್ಯದಲ್ಲಿ ಪ್ರವಾಸದಲ್ಲಿದ್ದರು. ಆಲುವಾದಲ್ಲಿ ಅವರು ಸ್ಥಾಪಿಸಿದ ಸಂಸ್ಕೃತ ಶಾಲೆಗೆ ನಿರಂತರವಾದ ಧನಸಹಾಯದ ಅಗತ್ಯವಿತ್ತು. ತಮ್ಮ ಅಂತ್ಯದ ನಂತರವೂ ಈ ಶಾಲೆಯು ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ನಿಧಿಯೊಂದನ್ನು ಸಂಗ್ರಹಿಸುವುದು ಅವರ ಮನದೊಳಗಿದ್ದ ವಿಚಾರ. ಕೊಚ್ಚಿ ಮತ್ತು ತಿರುವಿದಾಂಕೂರು ಪ್ರಾಂತ್ಯದ ಹಳ್ಳಿಗರು ಗುರುಗಳನ್ನು ಸ್ವಾಗತಿಸಿ ಸತ್ಕರಿಸಿದರು. ತಳಿರು ತೋರಣಗಳಿಂದ ಅಲಂಕೃತವಾದ ರಸ್ತೆಗಳಲ್ಲಿ ಗುರುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ದರು. ಹಲವೆಡೆ ಈ ಮೆರವಣಿಗೆ ಮೈಲುಗಳು ದೀರ್ಘವೂ ಆಗಿರುತ್ತಿತ್ತು. ಜನರು ಶಕ್ತ್ಯಾನುಸಾರ ಕಾಣಿಕೆಗಳನ್ನರ್ಪಿಸಿದರು. ಕೆಲವರು ಕೊಟ್ಟ ಕಾಣಿಕೆಯನ್ನು ಮರುಮಾತಿಲ್ಲದೆ ಸ್ವೀಕರಿಸಿದರೆ ಇನ್ನು ಕೆಲವರಿಗೆ ನಿರ್ದಿಷ್ಟ ಮೊತ್ತವನ್ನು ಸೂಚಿಸಿ ಅದನ್ನು ಪಡೆದರು. ಮತ್ತೆ ಕೆಲವರಿಂದ ಪಡೆದದ್ದರಲ್ಲಿ ಕೆಲಭಾಗವನ್ನು ಇಲ್ಲವೇ ಪೂರ್ಣ ಮೊತ್ತವನ್ನು ಹಿಂದಿರುಗಿಸಿದರು. ಈ ಪ್ರವಾಸದಲ್ಲಿ ಅವರು ಭವಿಷ್ಯದಲ್ಲಿದ್ದ ತಮ್ಮ ವಿದಾಯಕ್ಕೆ ಸಿದ್ಧರಾಗುತ್ತಿದ್ದುದು ಸ್ಪಷ್ಟವಾಗಿಯೇ ಕಾಣಿಸುತ್ತಿತ್ತು. ಅರುವಿಪ್ಪುರಂ ಮತ್ತು ವರ್ಕಲದಲ್ಲಿರುವ ಆಶ್ರಮಗಳು ಹಾಗೂ ಅಲ್ಲಿನ ಆಂಗ್ಲಶಾಲೆಗಳು ತಮ್ಮ ಕಾಲಮೇಲೆ ನಿಲ್ಲುವಷ್ಟು ಸಮರ್ಥವಾಗಿದ್ದವು. ಅವರ ಸಂಸ್ಕೃತ ಶಿಶುವೇ ಹೆಚ್ಚು ದುರ್ಬಲವಾಗಿದ್ದದ್ದು. ಇದಕ್ಕೆ ಶಕ್ತಿ ನೀಡುವುದು ಗುರುಗಳ ಕೊನೆಗಾಲದ ಕಾಳಜಿಯಾಗಿತ್ತು.
1927ರ ಕೊನೆಯ ಹೊತ್ತಿಗೆ ಅವರು ಆರಂಭಿಸಿದ್ದ ಕೆಲಸಗಳೆಲ್ಲವೂ ಮುಕ್ತಾಯದ ಹಂತಕ್ಕೆ ತಲುಪಿದ್ದವು. ಆರೋಗ್ಯವೂ ಬಹಳ ಹದಗೆಟ್ಟಿತ್ತು. ವಾರ್ಧಕ್ಯವು ಅವರನ್ನು ಬಹುವಾಗಿ ಬಾಧಿಸಿತ್ತು. ಪಾಲಕ್ಕಾಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲದಲ್ಲಿ ಅವರನ್ನು ಭೇಟಿಯಾದ ಕ್ಷಣಗಳನ್ನು ಈ ಲೇಖಕ ಮರೆತಿಲ್ಲ. ಆ ಮುಂಜಾನೆ ಅಲ್ಲಿ ಹಲವು ವೈದ್ಯರಷ್ಟೇ ಅಲ್ಲದೆ ಕೊಚ್ಚಿ, ತಿರುವಿದಾಂಕೂರು, ಮಲಬಾರ್ ಪ್ರದೇಶಗಳಿಂದ ಬಂದ ಹಲವು ಸಾರ್ವಜನಿಕ ಮತ್ತು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರಿದ್ದರು. ಗುರುಗಳಿಗೆ ರಾತ್ರಿಯಿಡೀ ನಿದ್ರೆ ಬಂದಿರಲಿಲ್ಲ. ಈ ಲೇಖಕ ಹೋಗಿ ನಿಂತಾಗ ಗುರುಗಳು ಹಾಸಿಗೆಯ ಮೇಲೆ ತಮ್ಮ ಸಣಕಲು ಕೈಗಳನ್ನೇ ಆಧಾರವಾಗಿ ಬಳಸಿ ಕುಳಿತಿದ್ದರು. ಅವರಿಗೆ ಉಸಿರಾಟ ಕಷ್ಟವಾಗುತ್ತಿತ್ತು. ಮಾತು ಒಂದೊಂದೇ ಪದವಾಗಿ ಹೊರಬರುತ್ತಿತ್ತು. ‘ಇವು…’ ಎಂದರು, ತಮ್ಮ ಉಸಿರಾಟಕ್ಕೆ ಅಡ್ಡಿಯಾಗುತ್ತಿದ್ದ ಸ್ಥಿತಿಯನ್ನು ಬೆಟ್ಟು ಮಾಡುತ್ತಾ ‘ಇವು ನನ್ನನ್ನು ಕರೆದೊಯ್ಯಲು ಬಂದಿರುವ ಬೆಂಗಾವಲು ಪಡೆ’ ಎಂದು ಉದ್ಘರಿಸಿದರು.
ಗುರುಗಳ ಆರೋಗ್ಯ ವಿಚಾರಿಸಿ ದರ್ಶನ ಪಡೆಯಲು ಹಲವರು ಬರುತ್ತಿದ್ದವರು. ಅವರೆಲ್ಲಾ ಗುರುಗಳಲ್ಲೊಂದು ಅತಿಮಾನಷ ಶಕ್ತಿ ಇದೆ ಎಂದು ಭಾವಿಸಿದವರು. ಗುರುಗಳನ್ನು ಬಾಧಿಸಿದ್ದ ಕಾಯಿಲೆ ಅವರಿಗೆ ನೋವು ನೀಡಲಾರದೆಂದು ನಂಬಿದ್ದವರು. ಇದನ್ನು ಸುಳ್ಳು ಮಾಡಲೋ ಎಂಬಂತೆ ಗುರುಗಳು ಮಗುವಿನಂತೆ ಅಳುತ್ತಿದ್ದರು. ದರ್ಶನಕ್ಕಾಗಿ ಹೊರಗೆ ಕಾಯುತ್ತಿದ್ದ ಹಳ್ಳಿಗರ ಗುಂಪಿಗೆ ಸಂಕಟದಲ್ಲಿರುವ ಮಗುವಿನಂತೆ ‘ಅಮ್ಮಾ… ಅಮ್ಮಾ…’ ಎಂದು ಅಳುತ್ತಿದ್ದ ಗುರುಗಳ ನರಳುವಿಕೆ ಕೇಳುತ್ತಿತ್ತು. ಯಾವತ್ತೂ ಮರೆಯಲಾಗದ ದೀನ ಧ್ವನಿಯಲ್ಲಿ ಯಾವ ಸತ್ಯಕ್ಕಾಗಿ ತನ್ನನ್ನೇ ಪೂರ್ಣವಾಗಿ ಅರ್ಪಿಸಿಕೊಂಡಿದ್ದರೋ ಅದರಲ್ಲಿ ಗುರುಗಳಿಗಿದ್ದ ಸರಳವೂ ಅಚಲವೂ ಆದ ನಂಬಿಕೆಯು ಅನುರಣಿಸುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತಿತ್ತು.
ತನ್ನ ಶಿಲುಬೆಯನ್ನು ಹೊತ್ತು ನಡೆಯುವ ಯೇಸುಕ್ರಿಸ್ತನ ಚಿತ್ರ ಆತನ ಮಾನವ ಪ್ರೀತಿ ಮತ್ತು ಸೇವೆಯ ಸಂಕೇತವಾಯಿತು. ಎಲ್ಲಾ ಮಹಾಪುರುಷರು ತಮ್ಮ ಅನಾರೋಗ್ಯ ಮತ್ತು ಯಾತನೆಗಳನ್ನೂ ಸಹಜೀವಿಗಳ ಸೇವೆಗಾಗಿ ತಮಗೆ ದೊರೆಯುವ ಅವಕಾಶವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ‘ಅವರವರ ಆತ್ಮಸುಖಕ್ಕಾಗಿ ಮಾಡುವ ಕೆಲಸವೂ ಪರರ ಹಿತಕ್ಕಾಗಬೇಕು’ ಎಂಬ ಗುರುಗಳು ಪ್ರತಿಪಾದಿಸಿದ ತತ್ವಕ್ಕೆ ಅವರ ಬದುಕೇ ಒಂದು ಉದಾಹರಣೆಯಾಗಿತ್ತು.
(ಮುಂದುವರಿಯುವುದು…)
ಹಿಂದಿನ ಅಧ್ಯಾಯ ಓದಲು ಇಲ್ಲಿ ಕ್ಲಿಕ್ ಮಾಡಿ: https://aralimara.com/2024/08/23/guru-63/


[…] ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/24/guru-64/ […]
LikeLike