ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 6ನೇ ಭಾಗ ಇಲ್ಲಿದೆ…
42
ಎಲ್ಲಿ ನಾನು
ಕಾಲು ಹಿಡಿದುಕೊಂಡುಬಿಡುವೆನೋ ಎಂದು
ಮುಚ್ಚಿಕೊಂಡುಬಿಟ್ಟಳು ಪಾದಗಳನ್ನು ಸೀರೆಯ ಕೆಳಗೆ,
ಕಷ್ಟಪಟ್ಟು ತಡೆದುಕೊಂಡಳು ಉಕ್ಕಿ ಬರುತ್ತಿದ್ದ ನಗುವನ್ನು,
ಗೆಳತಿಯರ ಜೊತೆ ಮಾತು ಮುಂದುವರೆಸುತ್ತ
ನಿರ್ಲಕ್ಷಿಸಿಬಿಟ್ಟಳು ನನ್ನ ಇರುವಿಕೆಯನ್ನ.
ಕೋಪದಲ್ಲಿಯೇ ಇಷ್ಟು ಮೋಹಕವಾಗಿದ್ದಾಳಲ್ಲ
ಇನ್ನು ಪ್ರೇಮದಲ್ಲಿ ಹೇಗಿರಬಹುದು
ಲೆಕ್ಕ ಹಾಕಿ.
43
ಚಾಡಿಖೋರ ಗೆಳತಿಯರಿಂದ ಕಲಿತ
ಕಠಿಣ ಮಾತುಗಳೆನ್ನೆಲ್ಲ ಬಳಸಿ
ತಪ್ಪು ಮಾಡಿದ್ದ ತನ್ನ ಗಂಡನನ್ನು
ತರಾಟೆಗೆ ತೆಗೆದುಕೊಂಡಳೇನೋ ನಿಜ
ನಂತರ ಶರಣಾಗಿಸಿಕೊಂಡುಬಿಟ್ಟಳು ಅವನನ್ನು
ಕಾಮದೇವನ ಅಣತಿಯಂತೆ.
ಪ್ರೇಮದ ಮೋಹಕತೆಯೆಂದರೆ ಇದು
ಎಲ್ಲವೂ ಮುಗ್ಧತೆಯ ಹತೋಟಿಯಲ್ಲಿ.
44
ತಪ್ಪೆಸಗಿದ ಪ್ರೇಮಿಯ ವಿಷಯದಲ್ಲಿ
ಕ್ಷಣ ಕ್ಷಣಕ್ಕೆ ಬದಲಾಯಿಸುತ್ತವೆ ಅವಳ ಕಣ್ಣುಗಳು
ತಮ್ಮ ಅವತಾರವನ್ನ.
ಅವನು ದೂರವಿರುವಾಗ
ಅವಳ ಕಣ್ಣುಗಳಲ್ಲಿ ಚಡಪಡಿಕೆ,
ಹತ್ತಿರವಾಗುತ್ತಿದ್ದಂತೆಯೇ ಸಂಕೋಚ – ಮುನಿಸು,
ಮಾತನಾಡಿದಾಗ ಅನಾಸಕ್ತಿ,
ಅಪ್ಪಿಕೊಳ್ಳಲು ಮುಂದಾದಾಗ ತೀವ್ರಕೋಪ,
ಸೀರೆಗೆ ಕೈಹಾಕಿದಾಗ ಗಂಟಿಕ್ಕಿಕೊಂಡು ಎಚ್ಚರಿಕೆ,
ಪಾದಗಳ ಮೇಲೆ ಬಿದ್ದು ಶರಣಾದಾಗ
ತುಂಬಿಕೊಂಡ ಅಂತಃಕರಣ.
45
ಎಷ್ಟು ಸೊರಗಿದೆ ನಿನ್ನ ದೇಹ
ಯಾಕೆ ಬಿಳಚಿಕೊಂಡಿವೆ ನಿನ್ನ ಗಲ್ಲಗಳು
ಏನಾಗಿದೆ ನಿನಗೆ?
ಪ್ರೇಮಿ ಆತಂಕದಿಂದ ಪ್ರಶ್ನೆ ಮಾಡಿದಾಗ
“ನಾನಿರೋದೇ ಹೀಗೆ”
ಉತ್ತರಿಸಿದಳೇನೋ ನಿಜ ಅವಳು ಗಟ್ಟಿಯಾಗಿ
ಆದರೆ ಆಚೆ ಹೊರಳಿದಾಗ ಮಾತ್ರ
ತುಂಬಿಕೊಂಡುಬಿಟ್ಟವು ಕಾರಣ ಬಲ್ಲ ಕಣ್ಣುಗಳು
ತಡೆಯಲಾಗದೇ.
46
ರಾತ್ರಿಯ ಕತ್ತಲು,
ಆಕಾಶದಲ್ಲಿ ಗುಡುಗುವ ಮೋಡಗಳ
ಕೋರೈಸುವ ಮಿಂಚುಗಳ ಆರ್ಭಟ.
ತುಂಬಿಕೊಂಡು ಬಂದವು
ಥಟ್ಟನೇ ಎದ್ದು ಕುಳಿತ ಪ್ರಯಾಣಿಕನ ಕಣ್ಣುಗಳು
ಪ್ರಿಯತಮೆಯ ನೆನಪಾಗಿ.
ಹಾಡತೊಡಗಿದನು ಆರ್ತವಾಗಿ
ಪ್ರೇಮಿಗಳಿಗೆ ಸಾವಾಗಿ ಒದಗಿಬಂದಿರುವ
ಪ್ರಯಾಣವನ್ನು ಧಿಕ್ಕರಿಸುತ್ತ.
ಅವನ ಹಾಡು ಕೇಳಿದ ಯಾರಿಗೂ
ಉಳಿಯಲಿಲ್ಲ ಮುಂದೆ
ತಮ್ಮ ಪ್ರವಾಸದ ಸಾಹಸಗಳ ಬಗ್ಗೆ
ಯಾವ ಹೆಮ್ಮೆ.
47
ಕುಡಿದು ಉನ್ಮತ್ತಳಾಗಿದ್ದ ಅವಳು
ಅವನ ಎದೆಯ ಮೇಲೆ ತಾನೇ ಮಾಡಿದ
ಉಗುರಿನ ಗಾಯ ಬೇರೊಬ್ಬಳದು ಎಂದುಕೊಂಡು
ಸಿಟ್ಚಿನಿಂದ ಹೊರಟು ನಿಂತಾಗ
ಅವನು ಸೀರೆ ಜಗ್ಗಿ ಅವಳನ್ನು ತಡೆಯಲು ಮುಂದಾದ.
“ಬಿಟ್ಟುಬಿಡು ನನ್ನ” ಕಿರುಚಿದಳು.
ಕಣ್ತುಂಬಿಕೊಂಡು, ಅದರುತ್ತಿದ್ದ ಕೆಳ ತುಟಿಯನ್ನು
ತಡೆದು ನಿಲ್ಲಿಸುವ ಪ್ರಯತ್ನ ಮಾಡುತ್ತ
ಅವಳು ಆಡಿದ ಮಾತುಗಳನ್ನು ಯಾರು,
ಹೇಗೆ ತಾನೆ ಮರೆಯಬಲ್ಲರು?
48
ಪ್ರೇಮ ಬಾಗಿಲಿಗೆ ಬಂದು ಬೇಡಿಕೊಂಡಾಗ
ಹುಚ್ಚು ತಲೆಗೇರಿದವರಂತೆ
ಬಾಗಿಲು ಮುಚ್ಚಿಕೊಂಡು ನಿರಾಕರಿಸಿಬಿಟ್ಟೆಯಲ್ಲಾ
ನಿನ್ನ ಕೋಪ ಮತ್ತು ಸೊಕ್ಕಿನ ಫಲ
ನೀನೇ ಉಣ್ಣಬೇಕಾಗಿದೆ ಈಗ.
ಅಲೆಮಾರಿಯಾಗಿಬಿಟ್ಟಿದೆ ಈಗ ನಿನ್ನ ಪ್ರೇಮ
ತಲೆ ಮರೆಸಿಕೊಳ್ಳಲು
ಈಗ ನಿನಗೆ ಉಳಿದಿರುವ ಜಾಗ ಒಂದೇ
ನಿನ್ನ ದುಗುಡ.
49
ಕಣ್ಣೀರಿನ ಮೂಲಕ ಅವಳಿಗೆ ಕಂಡದ್ದು
ಮಂಜು ತುಂಬಿಕೊಂಡ ಜಗತ್ತು
ಮತ್ತು ಮಳೆ ಮೋಡಗಳ ಆರ್ದ್ರ ಸಮೂಹ.
ನನ್ನ ಬಿಟ್ಟು ಹೋದರೆ……
ಪೂರ್ತಿ ಹೊರಬರಲಿಲ್ಲ ಅವಳ ದನಿ.
ನನಗೆ ಅಂಟಿಕೆೊಂಡು ಆಕೆ
ಒಣ ನೆಲದ ಮೇಲೆ ತನ್ನ ಹೆಬ್ಬೆಟ್ಟಿನಿಂದ ಗೀಚುತ್ತ
ನಮೂದು ಮಾಡತೊಡಗಿದಳು
ತನ್ನ ಫಿರ್ಯಾದಿಗಳನ್ನು.
ನಂತರ ಅವಳು ಮಾಡಿದ
ಮೋಹಕ ಪ್ರತಿಕೋಧವನ್ನು ವರ್ಣಿಸುವುದು
ಸಾಧ್ಯವಾಗಿಲ್ಲ ಇನ್ನೂ ಯಾವ
ಕವಿಯ ಲೇಖನಿಗೆ.
50
ಪ್ರೀತಿಯ ಹುಡುಗಿ
ಹೇಳು
ಬಿಟ್ಟು ಬಿಡಬಾರದೆ ಈ ಕೋಪ, ಈ ಹಮ್ಮು
ನಿನಗೇನು ತೊಂದರೆ?
ನೋವಾಗುತ್ತದೆ ನನಗೆ.
ನಿನ್ನದೇನೂ ತಪ್ಪಿಲ್ಲ, ತಪ್ಪೆಲ್ಲ ನನ್ನದೇ
ಮತ್ತ್ಯಾಕೆ ಕಣ್ಣೀರು?
ನನ್ನ ಕಣ್ಣೀರು ಯಾರಿಗೆ ಕಾಣಿಸುತ್ತದೆ?
ನನಗೆ
ನಾನೇನಾಗಬೇಕು ನಿನಗೆ?
ಪ್ರಿಯತಮೆ
ಈ ಕಾರಣಕ್ಕಾಗಿಯೇ ಕಣ್ಣೀರು
ನಾನಲ್ಲ.
51
ಅವನ ಕುತ್ತಿಗೆಗೆ
ಯಾಕೆ ಮುತ್ತಿಡಲಿಲ್ಲ ನಾನು?
ಅವನು ಚುಂಬಿಸಲು ಮುಂದಾದಾಗ
ಯಾಕೆ ತಲೆ ಬಾಗಿಸಿದೆ ನಾನು?
ಅವನು ಮಾತನಾಡಿಸಿದಾಗ
ಯಾಕೆ ಉತ್ತರಿಸಲಿಲ್ಲ ನಾನು?
ನಾಚಿಕೆಯಾಗುತ್ತಿದೆ ಅವಳಿಗೆ
ತನ್ನ ಮೊದಲ ರಾತ್ರಿಯ ವರ್ತನೆಯ ಬಗ್ಗೆ.
ಮಧುರ ರಾತ್ರಿಯೊಂದನ್ನು ನಿರಸವಾಗಿಸಿದ ಬಗ್ಗೆ
ಬೇಸರವಾಗುತ್ತಿದೆ ಈಗ ಅವಳಿಗೆ
ಎಷ್ಟೋ ಸಮಯದ ನಂತರ
ಪ್ರೇಮ ಕಲೆಯ ಚೆಲುವನ್ನು ಪೂರ್ತಿಯಾಗಿ
ಅನುಭವಿಸಿದ ಆಮೇಲೆ.
(ಮುಂದುವರಿಯುವುದು….)
ಹಿಂದಿನ ಭಾಗ ಇಲ್ಲಿದೆ: https://aralimara.com/2024/08/18/amaru-5/

