ನಾರಾಯಣ ಗುರುಗಳು ಬದುಕಿದ್ದಾಗಲೇ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಎರಡನೆಯದು, ನಟರಾಜ ಗುರುಗಳು ಬರೆದ ‘The Way of the Guru’. ಒಂಬತ್ತು ಅಧ್ಯಾಯಗಳ ಈ ಪುಟ್ಟ ಕೃತಿಯನ್ನು ಕನ್ನಡಕ್ಕೆ ತರುತ್ತಿದ್ದಾರೆ ಎನ್.ಎ.ಎಂ.ಇಸ್ಮಾಯಿಲ್. ಈ ಸರಣಿಯ ಕೊನೆಯ ಅಧ್ಯಾಯದ ಕೊನೆಯ ಭಾಗ ಇಲ್ಲಿದೆ…
ಹಿಂದಿನ ಭಾಗ ಇಲ್ಲಿ ನೋಡಿ: https://aralimara.com/2024/08/24/guru-64/
ಅಧ್ಯಾಯ 9.2 (ಅಂತಿಮ ಅಧ್ಯಾಯ, ಅಂತಿಮ ಭಾಗ)
‘ಅವನವನಾತ್ಮಸುಖಕ್ಕೆ ಆಚರಿಸುವುದೆಲ್ಲ/ ಅಪರಂಗೆ ಸುಖವನೀಯಲು ಒದಗಬೇಕು’ ಎಂಬ ಗುರುವಚನ ಅವರ ಬದುಕನ್ನು ಸಮಗ್ರವಾಗಿ ನಿರ್ದೇಶಿಸುವ ಸೂತ್ರವೂ ಆಗಿತ್ತು. ತಮ್ಮ ನಿತ್ಯದ ಚಟುವಟಿಕೆಗಳನ್ನೂ ಪರೋಪಕಾರಿಯಾಗುವಂತೆಯೇ ಅವರು ವಿನ್ಯಾಸಗೊಳಿಸಿಕೊಂಡಿದ್ದರು. ಕತ್ತಿಯನ್ನು ಅತ್ಯಂತ ಹರಿತವಾಗಿಟ್ಟುಕೊಳ್ಳಬೇಕೆಂದು ತಮ್ಮ ಕ್ಷೌರಿಕನನ್ನು ಗುರುಗಳು ಒತ್ತಾಯಿಸುತ್ತಿದ್ದರು. ಕ್ಷೌರವನ್ನು ಕಲೆಯ ಗಾಂಭೀರ್ಯದೊಂದಿಗೆ ನಿರ್ವಹಿಸಲು ಕ್ಷೌರಿಕನಿಗೆ ಸಾಧ್ಯವಾಗಬೇಕೆಂದು ಅವರ ನಿಲುವಾಗಿತ್ತು. ತಮ್ಮ ಚಾಲಕ ವಾಹನದ ಬ್ರೇಕ್‌ಗಳನ್ನು ಒರಟಾಗಿ ಬಳಸಿದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ವಾಹನ ಬಗ್ಗೆ ಚಾಲಕನಿಗೆ ಅಭಿಮಾನವಿರಬೇಕೆಂಬುದು ಗುರುಗಳ ಅಪೇಕ್ಷೆ. ದರ್ಶನಕ್ಕೆ ಬರುವವರು ಹೊಸ ಬಗೆಯ ಕಾರಿನಲ್ಲೇನಾದರು ಬಂದಿದ್ದು ಅದನ್ನು ಚಾಲಕ ಗಮನಿಸದ್ದೇ ಗುರುಗಳದನ್ನು ಗುರುತಿಸಿ ಹೇಳುತ್ತಿದ್ದರು.
ತಮ್ಮ ಪ್ರವಾಸಗಳ ಸಂದರ್ಭದಲ್ಲಿ ಬಡಿವಾರದ ಮಾತುಗಳ ಜೊತೆ ನಾಟಕೀಯವಾಗಿ ಗೌರವಾರ್ಪಣೆ ಮಾಡುವವರ ಬಳಿ ‘ಒಂದು ಚಿನ್ನದ ಹಾರದೊಂದಿಗೆ ಬರಬಾರದಿತ್ತೇ…?’ ಎಂದವರು ಕೇಳುತ್ತಿದ್ದರು. ಅಡುಗೆಯ ವಿಚಾರದಲ್ಲಿ ಅವರಿಗೆ ಬಹಳ ಕಾಳಜಿಯಿತ್ತು. ರುಚಿಗಿಂತ ಹೆಚ್ಚಾಗಿ ಆಹಾರ ಪದ್ಧತಿಯನ್ನೇ ಬದಲಾಯಿಸುವ ಉದ್ದೇಶ ಈ ಆಸಕ್ತಿಯ ಹಿಂದೆ ಇರುತ್ತಿತ್ತು. ಕಟ್ಟಡಗಳ ಸಣ್ಣ ಸಣ್ಣ ವಿವರಗಳನ್ನೂ ಗಮನಿಸುತ್ತಿದ್ದ ಅವರು ಎಷ್ಟೋ ಬಾರಿ ಬಹಳ ಖರ್ಚಿದ್ದರೂ ಕೆಲ ಭಾಗಗಳ ಸಂಪೂರ್ಣ ಮರುನಿರ್ಮಾಣಕ್ಕೆ ಆದೇಶಿಸುತ್ತಿದ್ದರು. ಕಟ್ಟಡಗಳು ಉತ್ತಮ ವಾಸ್ತುಶಿಲ್ಪದ ಉದಾಹರಣೆಯಾಗಬೇಕು ಎಂಬುದು ಅವರ ಹಟ. ಸಂಗೀತಗಾರರನ್ನು ಪ್ರೋತ್ಸಾಹಿಸಿ ಪೋಷಿಸಲೋಸುಗವೇ ಸಂಗೀತವನ್ನು ಆಲಿಸುವ ಉತ್ಸಾಹ ತೋರುತ್ತಿದ್ದರು.
ರೋಗ ಚಿಕಿತ್ಸೆಯಲ್ಲಿ ಗುರುಗಳಿಗೂ ಪಾರಂಪರಿಕವಾಗಿ ಬಂದ ನೈಪುಣ್ಯವಿತ್ತು. ತಮ್ಮನ್ನು ಬಾಧಿಸಿದ ಕಾಯಿಲೆಗಳನ್ನೂ ಅವರೊಂದು ಅವಕಾಶವೆಂಬಂತೆ ಕಾಣುತ್ತಿದ್ದರು. ಭಿನ್ನ ವೈದ್ಯ ಪದ್ಧತಿಯವರನ್ನು ಆಹ್ವಾನಿಸಿ ಬಾಧೆಯ ಭಿನ್ನ ಲಕ್ಷಣಗಳು ಮತ್ತು ವಿವರಗಳನ್ನು ಚರ್ಚಿಸುತ್ತಿದ್ದರು. ಆಯುರ್ವೇದವೆಂಬ ಪ್ರಾಚೀನ ಚಿಕಿತ್ಸಾ ಪದ್ಧತಿಯಲ್ಲಿರುವ ಈಗ ಹೆಚ್ಚಿನವರು ಮರೆತೇ ಬಿಟ್ಟಿರುವ ಮೂಲಿಕೆಗಳಿಂದ ತಯಾರಿಸಿದ ಔಷಧಿಗೆ ತಾವೇ ಪ್ರಯೋಗ ಪಶುವಾಗಲು ಸಿದ್ಧರಾಗುತ್ತಿದ್ದರು.
ಅಂತ್ಯಕಾಲದಲ್ಲಿ ಅವರನ್ನು ಬಾಧಿಸಿದ ಕಾಯಿಲೆ ಇಂಥ ಅನೇಕ ಅವಕಾಶಗಳಿಂದ ಶ್ರೀಮಂತವಾಗಿತ್ತು. ಕಾಯಿಲೆಯ ನಿರ್ದಿಷ್ಟ ಆಯಾಮವನ್ನು ಗುರುತಿಸಿ ಶಮನಗೊಳಿಸುವ ಚಿಕಿತ್ಸಾ ಪದ್ಧತಿಯೊಂದು ವಿಫಲವಾದರೆ ಮತ್ತೊಂದು ಚಿಕಿತ್ಸಾ ಪದ್ಥತಿಯಲ್ಲಿ ಶಮನದ ಸಾಧ್ಯತೆಯಿರುವುದು ಅವರಿಗೆ ಅರಿವಾಗುತ್ತಿತ್ತು. ರೋಗ ಬಾಧೆಯಿಂದ ಬಳಲಿ ಹಾಸಿಗೆ ಹಿಡಿದ್ದರೂ ಅವರ ಚಿಕಿತ್ಸೆಗೆ ಬರುತ್ತಿದ್ದ ವೈದ್ಯರ ಜೊತೆಗೆ ಸಣ್ಣ ಸಣ್ಣ ವಿಚಾರಗಳನ್ನೂ ವಿವರವಾಗಿ ಚರ್ಚಿಸುತ್ತಿದ್ದರು. ಚಿಕಿತ್ಸೆಗಾಗಿ ಪಾಲಕ್ಕಾಡ್‌ಗೆ ಹೋದವರು ಅಲ್ಲಿಂದ 400 ಮೈಲುಗಳಷ್ಟು ದೂರವಿದ್ದ ಮದ್ರಾಸಿಗೂ ಪ್ರಯಾಣ ಬೆಳೆಸಿದ್ದರು. ಸ್ಟ್ರೆಚರ್‌ನಲ್ಲಿಯೇ ಒಬ್ಬ ವೈದ್ಯರಿಂದ ಮತ್ತೊಬ್ಬರ ಬಳಿಗೆ, ಒಬ್ಬ ಭಕ್ತನ ಆತಿಥ್ಯದಿಂದ ಪ್ರೀತಿ ತೋರುವ ಭಕ್ತರ ಆಶ್ರಯಕ್ಕೆ ಹೀಗೆ ರೋಗ ಬಾಧಿಸಿದ್ದ ದಿನಗಳಲ್ಲೂ ಪ್ರಯಾಣಗಳು ಮುಂದುವರಿದಿದ್ದವು. ಕೊನೆಯದಾಗಿ ಭಕ್ತರ ಗುಂಪೊಂದು ಗುರುಗಳನ್ನು ವರ್ಕಲಕ್ಕೆ ಕರೆದೊಯ್ಯುವ ದೃಢ ಸಂಕಲ್ಪದೊಂದಿಗೆ ಬಂತು. ಅವರೊಂದಿಗೆ ಗುರುಗಳು ಹೊರಟರು. ಹೋಗುವ ದಾರಿಯಲ್ಲಿಯೇ ಆಲುವಾ ರೈಲು ನಿಲ್ದಾಣವಿತ್ತು. ಗುರುಗಳು ತಮ್ಮ ಬೆವರಿನ ಕೊನೆಯ ಹನಿಗಳನ್ನು ಚೆಲ್ಲಿ ಕಟ್ಟಿ ಬೆಳೆಸಿದ ಆಲುವಾ ಸಂಸ್ಕೃತ ಶಾಲೆ ಮತ್ತು ಆಶ್ರಮದ ಹಿರಿ-ಕಿರಿಯ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್‌ನಲ್ಲಿ ನೆರೆದಿದ್ದರು. ಬರಲಿರುವ ಮಹಾವಿದಾಯದ ಮುನ್ಸೂಚನೆಗಳೇನೂ ಅವರಿಗಿರಲಿಲ್ಲ. ಗುರುಗಳ ಅನಾರೋಗ್ಯ ಹುಟ್ಟಿಸಿದ ದುಗುಡ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣಿಸುತ್ತಿತ್ತು.
ಗುರುಗಳು ವರ್ಕಲ ತಲುಪಿದರು. ಅವರ ರೋಗದ ಕೆಲ ಲಕ್ಷಣಗಳು ವಾಸಿಯಾಗದ್ದೆಂದು ಒಂದು ಚಿಕಿತ್ಸಾ ಪದ್ಧತಿಯ ತಜ್ಞರು ಘೋಷಿಸಿದರು. ಅದನ್ನು ಗುಣಪಡಿಸಲು ಸಾಧ್ಯವೆಂದು ಮತ್ತೊಂದು ಪದ್ಧತಿಯವರು ತೋರಿಸಿಕೊಟ್ಟರು. ಕೆಲಕಾಲ ಗುರುಗಳು ಆರೋಗ್ಯವಾಗಿದ್ದಂತೆ ಕಂಡರು. ಅವರ ಮುಖದಲ್ಲಿದ್ದ ತೇಜಸ್ಸು ಯಾವತ್ತೂ ಮಂಕಾಗಲಿಲ್ಲ. ಅವರ ಹಾಸ್ಯ ಪ್ರಜ್ಞೆಯಂತೂ ಎಂದಿನಂತೆಯೇ ಇತ್ತು. ಅವರ ದೇಹ ದುರ್ಬಲವಾಗಿತ್ತು. ತೀರಾ ಅಗತ್ಯವೆನಿಸಿದರಷ್ಟೇ ಅವರ ಮಣಿಯುತ್ತಿದ್ದರು ಇಲ್ಲವೇ ರಾಜಿಗೆ ಮುಂದಾಗುತ್ತಿದ್ದರು. ಎಲ್ಲರ ಅಭಿಪ್ರಾಯಗಳನ್ನೂ ಪರಿಗಣಿಸಿ ನ್ಯಾಯಬದ್ಧವಾಗಿ ತಮ್ಮೆಲ್ಲಾ ಆಸ್ತಿಪಾಸ್ತಿಗಳ ವೀಲೇವಾರಿಯ ಕಾನೂನು ಕ್ರಮಗಳಿಗೆ ಮಾರ್ಗದರ್ಶನ ನೀಡಿದರು. ಈ ಹೊತ್ತಿಗಾಗಲೇ ಅವರು ಯಾರ ನೆರವು ಇಲ್ಲದೆ ಸ್ವಲ್ಪ ನಡೆದಾಡುವಷ್ಟು ಚೇತರಿಸಿಕೊಂಡಿದ್ದರು. ದೇಹ ಬಹಳ ದುರ್ಬಲವಾಗಿದ್ದಂತೆ ಕಂಡರೂ ಗುರುಗಳು ಸದಾ ಎಚ್ಚರದಿಂದಿರುವ ತೇಜಸ್ವಿಯೇ ಸರಿ. ಈ ಸಂದರ್ಭದಲ್ಲೇ ಗುರುಗಳಿಗೆ ವಿದಾಯ ಹೇಳಿ ಈ ಲೇಖಕ ತನ್ನ ಯೂರೋಪ್ ಪ್ರಯಾಣವನ್ನು ಆರಂಭಿಸಿದ್ದು.
ಗುರುಗಳ 73ನೇ ಜನ್ಮದಿನವನ್ನು 1928ರ ಸೆಪ್ಟೆಂಬರ್‌ನಲ್ಲಿ ಜಿನೇವಾದಲ್ಲಿ ಆಚರಿಸಲಾಯಿತು. ವಿವಿಧ ದೇಶಗಳು ಮತ್ತು ಪ್ರಾಂತ್ಯಗಳ ಪ್ರತಿನಿಧಿಗಳೊಂದಿಗೆ ಹಲವು ಗೆಳೆಯರು ಈ ಸಮಾರಂಭದಲ್ಲಿ ಭಾವಗಿಸಿದ್ದರು. ಮೊಟ್ಟ ಮೊದಲ ಬಾರಿಗೆ ಗುರುಗಳ ಸಂದೇಶವನ್ನು ಪಶ್ಚಿಮದ ದೇಶವೊಂದರಲ್ಲಿ ಶ್ರುತಪಡಿಸಲಾಯಿತು. ಆರಾಧನೆಗೆ ಅಪರಿಚಿತರೂ ಒಂದಾದರು. ಒಟ್ಟಾಗಿ ಸಂಭ್ರಮಿಸಿ ಗುರುಗಳ ಬದುಕಿನ ಆದರ್ಶಗಳು ನೀಡುವ ವಿಶ್ವಾತ್ಮಕವಾದ ಸಂದೇಶದ ಮಹತ್ವದ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸಿದರು.
ಈ ಕಾರ್ಯಕ್ರಮ ನಡೆದ ಒಂದು ವಾರದ ನಂತರ ಅಂದರೆ 1928ರ ಸೆಪ್ಟೆಂಬರ್ 20ರಂದು ಗುರುಗಳು ವರ್ಕಲದಲ್ಲಿ ಮಹಾ ಸಮಾಧಿಗೆ ಪ್ರವೇಶಿಸಿದರು ಅಥವಾ ನಿಶ್ಶಬ್ಬ ಶಾಂತತೆಯ ಮಹಾಮೌನದಲ್ಲಿ ಅವರು ಲೀನರಾದರು.
ಪರಮಾರ್ಥವನೊರೆದು ತೇರೋಡಿಸುವ
ತಿರುಳೋ, ಭೂತದಯಾಕ್ಷಮಾಬ್ಧಿಯೋ,
ಸರಳಾದ್ವಯ ಭಾಷ್ಯಕಾರನಾದ
ಗುರುವೋ, ಈ ಅನುಕಂಪವುಳ್ಳವನು?
(ಅನುಕಂಪಾದಶಕ, ಕನ್ನಡ ಅನುವಾದ: ವಿನಯ ಚೈತನ್ಯ)
ಮುಕ್ತಾಯ

