ಅರ್ಹತೆ ಇಲ್ಲದವರಿಗೆ, ತಮ್ಮಲ್ಲೇ ಅರೆಕೊರೆ ಹೊಂದಿರುವವರಿಗೆ ನಮ್ಮ ಬಗ್ಗೆ ತೀರ್ಪು ಕೊಡುವ ಅವಕಾಶ ಕೊಡಬಾರದು. ಅವರು ನಮ್ಮನ್ನು ನೋಡುವುದು ತಾವು ಇರುವಂತೆಯೇ ಹೊರತು, ನಾವು ಇರುವಂತೆ ಅಲ್ಲ! ~ ಚೇತನಾ ತೀರ್ಥಹಳ್ಳಿ
“ಕನ್ನಡಿ ಯಾವತ್ತೂ ಸುಳ್ಳು ಹೇಳೋದಿಲ್ಲ!”
ಅವಳಿಗೆ ಹೇಳಲಾಗಿತ್ತು. ಅವಳೂ ನಂಬಿಕೊಂಡಿದ್ದಳು.
ಚಿಕ್ಕವಳಿದ್ದಾಗಲೇ ಅವಳಿಗೊಂದು ನಿಲುವುಗನ್ನಡಿ ಕೊಟ್ಟಿದ್ದರು. ಅವಳು ಅದನ್ನಷ್ಟೆ ನೋಡಬೇಕಿತ್ತು.
ಆ ಕನ್ನಡಿ ಅವಳಿಗೆ ಉಬ್ಬಿದ ಮುಖ, ಉಬ್ಬಿದ ಹೊಟ್ಟೆ, ಡೊಂಕು ಡೊಂಕಾದ ಕೈ ಕಾಲುಗಳೆಲ್ಲವನ್ನೂ ಸ್ಪಷ್ಟವಾಗಿ ತೋರಿಸುತ್ತಿತ್ತು.
“ನಾನಿರೋದೇ ಹೀಗೆ!” ಅವಳು ತನ್ನ ಇರುವನ್ನು ಒಪ್ಪಿಕೊಂಡಿದ್ದಳು; “ನನ್ನನ್ನು ನನಗೆ ತೋರಿಸೋ ಈ ಕನ್ನಡಿ ಎಷ್ಟು ಕರುಣಾಳು! ಇದು ನನ್ನ ತಲೆಯಲ್ಲಿ ನನ್ನ ಬಗ್ಗೆ ಸಲ್ಲದ ಹೆಮ್ಮೆ ಬೆಳೆಯದಂತೆ ತಡೆಯುತ್ತೆ. ನಾನಿರೋದೇ ಹೀಗೆಂದು ಅರ್ಥ ಮಾಡಿಸುತ್ತೆ” ಅಂದುಕೊಳ್ಳುತ್ತಿದ್ದಳು, ಅಲೆಮಾರಿಯೊಬ್ಬಳು ಅವಳೂರಿಗೆ ಬರುವವರೆಗೆ.
“ಎಷ್ಟು ಚೆಂದ ನೀನು!” ಅಂದವಳೇ ಅಲೆಮಾರಿ ನೆಟಿಕೆ ಮುರಿದು ಬೆರಳ ತುದಿಯಲ್ಲಿ ಕಾಡಿಗೆ ತೊಡೆದು ಹುಡುಗಿಯ ಕೆನ್ನೆಗಿಟ್ಟಳು.
“ನಾನಾ ಚೆಂದ? ನಿಮ್ಮದು ದೊಡ್ಡ ಮನಸ್ಸು!” ಹುಡುಗಿ ಅಲೆಮಾರಿಯ ಗುಣ ಮೆಚ್ಚಿಕೊಂಡಳು.
“ಅಲ್ಲದೆ ಮತ್ತೇನು? ನೀಳ ಕೈ ಕಾಲು, ದುಂಡನೆ ಮುಖ, ಎಂಥಾ ಚೆಲುವೆ ನೀನು!”ಅಲೆಮಾರಿಯ ಗಲ್ಲ ಹಿಡಿದು ನುಲಿದಳು.
“ಓ! ನೀನು ಸುಳ್ಳಿ!! ನೀಳ ಕೈ ಕಾಲೇ? ದುಂಡನೆ ಮುಖವೇ? ಇಲ್ಲದ್ದನ್ನು ಹೇಳಿ ನನಗೆ ಅವಮಾನ ಮಾಡಬೇಡ” ಹುಡುಗಿ ರೇಗಿದಳು.
“ಯಾಕೆ? ನಿನ್ನನ್ನು ನೀನು ಕನ್ನಡಿಯಲ್ಲಿ ನೋಡಿಕೊಂಡಿಲ್ಲವೆ? ಕನ್ನಡಿಯಂತೂ ಸುಳ್ಳು ಹೇಳೋದಿಲ್ವಲ್ಲ!” ಅನ್ನುತ್ತಾ ತನ್ನ ಚೀಲದಿಂದ ನಿಲುವುಗನ್ನಡಿ ತೆಗೆದು ಅವಳ ಮುಂದಿಟ್ಟಳು ಅಲೆಮಾರಿ.
ಹುಡುಗಿ ತನ್ನ ರೂಪ ಕಂಡು ಬೆರಗಾದಳು.
ಅಷ್ಟೂ ದಿನ ಅವಳ ಕನ್ನಡಿ ಸುಳ್ಳು ಹೇಳಿತ್ತು. ಅದರ ಮೇಲ್ಮೈ ವಕ್ರವಾಗಿತ್ತು.

