ಕೃಷ್ಣನೆಂಬ ಸೆಳೆತ, ಕೃಷ್ಣನೆಂಬ ಬೆಳಕು

ಕೃಷ್ಣ ಹಲವು ಪದರಗಳ ಪಾತ್ರ. ಆ ಎಲ್ಲ ಪದರಗಳಲ್ಲೂ ಆತ ಎಷ್ಟು ಅಡಗಿಸಿಕೊಂಡರೂ ದೈವತ್ವ ಹೊರ ತೂರಿ ತನ್ನ ಅಸ್ತಿತ್ವ ಸಾರುವುದು. ಒಳಿತು, ಕೆಡುಕು ಎಲ್ಲವನ್ನೂ ಸಮಾನವಾಗಿ ಸೆಳೆಯುವ ಕೃಷ್ಣ; ಪ್ರತಿಫಲಿಸಿದರೆ ಬೆಳಕು, ಪ್ರತಿರೋಧಿಸಿದರೆ ಕತ್ತಲು… । ಚೇತನಾ ತೀರ್ಥಹಳ್ಳಿ

ಭಾರತದ ಪುರಾಣೇತಿಹಾಸದ ಜಗತ್ತಿನಲ್ಲಿ ರಾಮ – ಕೃಷ್ಣರಷ್ಟು ಜನಪ್ರಿಯರಾದವರು ಯಾರೂ ಇಲ್ಲ. ಇವರಿಬ್ಬರೂ ನೇರ ದೇವರಲ್ಲದೆ ಅವತಾರಿಗಳೆಂಬ ಗುರುತು ಹೊತ್ತಿರೋದು ಇದಕ್ಕೆ ಮುಖ್ಯ ಕಾರಣ. ಈ ಇಬ್ಬರು ಅವತಾರಿಗಳಲ್ಲಿ ರಾಮ ಮನುಷ್ಯತ್ವದಿಂದ ದೈವತ್ವಕ್ಕೇರುವ ಸಂಕೇತವಾಗಿ ಕಂಡರೆ, ಕೃಷ್ಣ ದೈವತ್ವ ಕಳಚಿಕೊಂಡು ಮನುಷ್ಯನಾಗಲು ಸಾಹಸ ಪಡುವ ಸಂಕೇತವಾಗಿ ಕಾಣುತ್ತಾನೆ. ಆದ್ದರಿಂದ ಕೃಷ್ಣ ಒಂದು ಕೈ ಹೆಚ್ಚು ಹತ್ತಿರದ ಭಗವಂತ. ಹಾಗೆಂದೇ ಕೃಷ್ಣನ ಕತೆಗಳು, ಕಾವ್ಯಗಳು, ಕಲಾಕೃತಿಗಳು, ವ್ಯಾಖ್ಯಾನಗಳು ಸಂಖ್ಯೆಯಲ್ಲೂ ಜನಪ್ರಿಯತೆಯಲ್ಲೂ ರಾಮನಿಗಿಂತ ಹೆಚ್ಚು.

ಈ ಕೃಷ್ಣನ ಪಾತ್ರ ಕೇವಲ ಮಹಾಭಾರತದಲ್ಲಿ ಬಂದುಹೋಗುವಂಥದ್ದಲ್ಲ. ಮಹಾಭಾರತದಲ್ಲಿ ಆತ ಇಡೀ ಕತೆಯ ಒಂದು ಅಧ್ಯಾಯವಷ್ಟೇ. ಈತ ಹೆಚ್ಚು ಕಾಣಿಸಿಕೊಳ್ಳೋದು ಪುರಾಣಗಳಲ್ಲಿ. ಅದರಲ್ಲೂ ಭಾಗವತ ಮತ್ತು ಬ್ರಹ್ಮವೈವರ್ತ ಪುರಾಣಗಳಲ್ಲಿ. ಭಾರತೀಯ ಪುರಾಣಗಳು ಜನಪದದಿಂದ ಹೆಕ್ಕಿ ಸಂಸ್ಕೃತಕ್ಕೆ ಒಳಪಡಿಸಿದ ಕಥನಗಳೇ ಆದ್ದರಿಂದ, ಇವು ಮಹಾಕಾವ್ಯಕ್ಕಿಂತಲೂ ಹೆಚ್ಚು ಆಪ್ತ.

ಕೃಷ್ಣ ಹಲವು ಪದರಗಳ ಪಾತ್ರ. ಆ ಎಲ್ಲ ಪದರಗಳಲ್ಲೂ ಆತ ಎಷ್ಟು ಅಡಗಿಸಿಕೊಂಡರೂ ದೈವತ್ವ ಹೊರ ತೂರಿ ತನ್ನ ಅಸ್ತಿತ್ವ ಸಾರುವುದು. ಬಾಲ್ಯದಲ್ಲಿ ತನ್ನ ದೈವೀಶಕ್ತಿಯಿಂದ ರಕ್ಕಸ ರಕ್ಕಸಿಯರನ್ನು ಕೊಲ್ಲುವ ಕೃಷ್ಣ, ಅದನ್ನು ಮರೆಮಾಚಲು ಬೆಣ್ಣೆ ಕದಿಯುತ್ತಾನೆ, ಸೀರೆ ಸೆಳೆಯುತ್ತಾನೆ, ಊರ ತುಂಬ ಗದ್ದಲವೆಬ್ಬಿಸುತ್ತ ತಿರುಗುತ್ತಾನೆ. ಬೆಳೆದ ಮೇಲೆ ದುಷ್ಟ ಶಿಕ್ಷಣ ನಡೆಸುತ್ತಾ ಜಂಬೂದ್ವೀಪದ ಉದ್ದಗಲ ತಿರುಗುವ ಕೃಷ್ಣ, ಮದುಮಗಳನ್ನು ಹಾರಿಸಿಕೊಂಡು ಹೋಗುತ್ತಾನೆ, ಇಬ್ಬರ ನಡುವೆ ಜಗಳ ಹಚ್ಚುತ್ತಾನೆ, ಥಟ್ಟನೆ ಕಣ್ಕಟ್ಟು ಮಾಡಿ ಒಬ್ಬರನ್ನು ಗೆಲ್ಲಿಸುತ್ತಾನೆ, ಮತ್ತೊಬ್ಬರನ್ನು ಸೋಲಿಸುತ್ತಾನೆ.

ಅವನು ಅದೇನೇ ಮಾಡಿದರೂ ಎಲ್ಲಕ್ಕೂ ಒಂದು ‘ಒಪ್ಪಬಹುದಾದ’ ಸಮಜಾಯಿಷಿ ಇದೆ. ಆ ಕಾರಣಕ್ಕೇ ಶಂಭೂಕ ವಧೆ ಮತ್ತು ಸೀತಾಪರಿತ್ಯಾಗದ ವಿಷಯಗಳಲ್ಲಿ ರಾಮನನ್ನು ಕಟೆಕಟೆಗೆ ಹತ್ತಿಸುವಂತೆ ಕೃಷ್ಣನನ್ನು ಯಾವ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಿದ್ದಿಲ್ಲ. ಯುದ್ಧಗಳಲ್ಲಿ ಕೃಷ್ಣನ ನಡೆಗಳೂ ಚಾಣಾಕ್ಷತೆ ಅಥವಾ ಮುಳ್ಳನ್ನು ಮುಳ್ಳಿಂದಲೇ ತೆಗೆಯುವ ಉಪಾಯವೆಂಬ ಸಮರ್ಥನೆಗೆ ಒಳಪಡುತ್ತವೆಯೇ ಹೊರತು, ಕೃಷ್ಣ ಆರೋಪಿ ಸ್ಥಾನದಲ್ಲಿ ನಿಲ್ಲುವುದಿಲ್ಲ. ಇದ್ದುದರಲ್ಲಿ ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿಯೊಬ್ಬಳೇ ಅವನ ಮೇಲೆ ಆರೋಪ ಹೊರಿಸಿದ್ದು. ಅದರಲ್ಲೂ ದುರ್ಯೋಧನಾದಿಗಳ ದುಷ್ಟತನಗಳು ಮಹಾಭಾರತದ ಉದ್ದಕ್ಕೂ ಢಾಳಾಗಿ ಕಾಣುವುದರಿಂದ ಶಾಪ ಕೊಟ್ಟ ಗಾಂಧಾರಿಯ ಬಗ್ಗೆ ಮನಸ್ಸು ಮುರಿಯುವುದೇ ಹೊರತು, ಕೃಷ್ಣನ ಮೇಲಲ್ಲ!

ಕೃಷ್ಣನನ್ನು ವ್ಯಕ್ತಿಯಾಗಲ್ಲದೆ ಒಂದು ತತ್ವವಾಗಿ ನೋಡಿದರೆ, ಅದು ಕೂಡಾ ಹಲವು ಪದರಗಳ ಮಹಾ ಕಡಲಾಗಿಯೇ ತೋರುವುದು.

ಕೃಷ್ಣ ಅನ್ನುವ ಹೆಸರೇ ಕರ್ಷಣೆಯ ಸೂಚಿ, ಆಕರ್ಷಣೆಯ ಸೂಚಿ. ಯಾರನ್ನೇ ಆದರೂ ತನ್ನತ್ತ ಸೆಳೆಯುವವನು ಕೃಷ್ಣ. ಈ ಕೃಷ್ಣ ಒಳಿತನ್ನೂ ಕೆಡುಕನ್ನೂ ಸಮಾನವಾಗಿ ತನ್ನತ್ತ ಸೆಳೆಯುವನು. ಒಳಿತು ಹೊತ್ತ ಭಕ್ತರೂ ಪ್ರೇಮಿಗಳೂ ಕೃಷ್ಣನನ್ನು ಪ್ರತಿಫಲಿಸಿ ತಮ್ಮ ಮೈಮನದ ತುಂಬ ಅವನ ಬಿಂಬ ಹೊತ್ತು, ತಾವೇ ಕೃಷ್ಣರಾಗುವರು. ಕೆಡುಕು ಹೊತ್ತ ಶತ್ರುಗಳು ಕೃಷ್ಣನ ಸೆಳೆತದಿಂದ ತಪ್ಪಿಸಿಕೊಳ್ಳಲಾಗದೆ ಅವನತ್ತ ನುಗ್ಗಿ, ಕಪ್ಪುಕುಳಿಯಂಥ ಅವನ ಆಕರ್ಷಣೆಗೆ ಸಿಕ್ಕು (ಕೃಷ್ಣ ಎಂದರೆ ಕಪ್ಪು ಕೂಡಾ. ಕಪ್ಪನ್ನು ಕೃಷ್ಣ ಅನ್ನುವುದು ಅದಕ್ಕೆ ಆಕರ್ಷಣೆಯ ಗುಣವಿದೆ ಅಂತಲೇ.) ನುಂಗಲ್ಪಟ್ಟು ಅವನೊಳಗೆ ಒಂದಾಗಿ ಹೋಗುವರು, ಮುಕ್ತರಾಗುವರು. ಒಟ್ಟಾರೆ ಕೃಷ್ಣ, ಪ್ರತಿಫಲಿಸಿದರೆ ಬೆಳಕು, ಪ್ರತಿರೋಧಿಸಿದರೆ ಕತ್ತಲು.

ಪುರಾಣಗಳೇ ಇರಲಿ, ಮಹಾಕಾವ್ಯವೇ ಇರಲಿ, ನಂತರದ ನೂರು – ಸಾವಿರ ಕಥನಗಳೇ ಇರಲಿ, ಯಾವುದರಲ್ಲೂ ಕೃಷ್ಣನಿಗೆ ಅತಿವಿನಯದ ಸೋಗು ಹಾಕಿಲ್ಲದೆ ಇರುವುದು ಬಹಳ ಆಸಕ್ತಿಕರ ಅಂಶ. ಕೃಷ್ಣ ಚಿಕ್ಕವನಿದ್ದಾಗ ದೂರ್ವಾಸರಂಥ ದೂರ್ವಾಸರಿಗೇ ಎದುರಾಡಿದ್ದ. ಮದುವೆಯಾಗೆಂದು ಬಂದ ಯಾವ ಹೆಣ್ಣನ್ನೂ ದೂರವಿಡಲಿಲ್ಲ ಈ ಶ್ಯಾಮ; ಅಷ್ಟಾವಕ್ರೆಯ ಸೇವೆಯನ್ನೂ (ಈ ಸೇವೆಗೆ ಒಂದೊಂದರಲ್ಲಿ ಒಂದೊಂದು ಅರ್ಥ…) ತಿರಸ್ಕರಿಸಲಿಲ್ಲ. ಕರಡಿಯ ಮಗಳನ್ನೂ ಮದುವೆಯಾದ. ರುಕ್ಮಿಣಿ ಇವನ ಪಟ್ಟದರಸಿ, ದಾಯಾದಿ ಕುಲದ ಸತ್ಯಭಾಮೆಯೂ ಇವನ ಹೆಂಡತಿ. ನರಕಾಸುರನ ಸೆರೆಯಲ್ಲಿದ್ದು ಲೋಕರೂಢಿಯಂತೆ ಬಹಿಷ್ಕೃತೆಯರಾದ ಹೆಣ್ಣುಗಳಿಗೆಲ್ಲ ತನ್ನ ಹೆಂಡತಿಯರೆಂಬ ಪಟ್ಟ ಕೊಟ್ಟು ಆಗಿನ ಅನಿವಾರ್ಯದಂತೆ ಉದ್ಧರಿಸಿದ ಉದಾರಿ ನಮ್ಮ ಕೃಷ್ಣ! ಯಾವುದೇ ಮಾತು, ರೀತಿ, ನಿಯಮ, ಚೌಕಟ್ಟು ಇವನನ್ನು ಕಟ್ಟಿ ಹಾಕಲಾಗಲಿಲ್ಲ. ಬಾಲ್ಯದಲ್ಲಿ ಯಶೋದೆಗೆ ಅವನನ್ನು ಒಂದು ಯಕಃಶ್ಚಿತ್ ಒರಳಿಗೇ ಕಟ್ಟಿ ಹಾಕಲು ಆಗಿರಲಿಲ್ಲ ಅಂದಮೇಲೆ…

ಈ ನಮ್ಮ ಕೃಷ್ಣ, ಮಹಾಯೋಧನೇನಲ್ಲ. ಆದರೆ ಯುದ್ಧನೀತಿ ಬಲ್ಲ ನಿಪುಣ, ನುಣುಚಿಕೊಳ್ಳುವ ಮಹಾಜಾಣ. ಹಾಗೆಂದೇ ಇವನಿಗೆ ರಣಚೋರನೆಂಬ ಹೆಸರೂ ಇದೆ.  ಜರಾಸಂಧ 17 ಸಲ ಮಥುರೆಯ ಮೇಲೆ ದಂಡೆತ್ತಿ ಬರುತ್ತಾನೆ. ಆದರೂ, ಎಲ್ಲರ ಯುದ್ಧ ಗೆಲ್ಲಿಸುವ ಕೃಷ್ಣ ತಾನು ಎದುರು ನಿಂತು ಅವನನ್ನು ಮಣಿಸುವ ಗೋಜಿಗೆ ಹೋಗುವುದಿಲ್ಲ. ಕೊನೆಗೂ ಅವನು  ಜರಾಸಂಧನ ವಧೆ ಮಾಡಿಸುವುದು ಭೀಮನ ಕೈಯಿಂದ! ಆತ ಶಿಶುಪಾಲನನ್ನು ಕೊಲ್ಲುವುದೂ ರಣಾಂಗಣದಲ್ಲಿ ಅಲ್ಲ, ರಾಜಸಭೆಯಲ್ಲಿ! ಕಂಸನನ್ನು ಕೊಂದಿದ್ದೂ ಮಲ್ಲಕುಸ್ತಿಯಲ್ಲಿ ಹೊರತು ಯುದ್ಧದಲ್ಲಲ್ಲ!

ಕೃಷ್ಣ ಯೋಧನಲ್ಲ ಅಂದಮಾತ್ರಕ್ಕೆ ಆತ ಶೂರನಲ್ಲ ಎಂದು ತಿಳಿಯಬಾರದು. ಕೃಷ್ಣ ಸಂಯಮಿ. ಅನಗತ್ಯ ಸಾವುನೋವಿಗೆ ಬೆನ್ನು ತಿರುಗಿಸುವ ನಿಜಧೀರ. ಅವನು ಸಾಧ್ಯವಾದಷ್ಟೂ ಯುದ್ಧಗಳನ್ನು ತಪ್ಪಿಸಲು, ತಪ್ಪು ಮಾಡಿದ ವ್ಯಕ್ತಿಯನ್ನಷ್ಟೇ ಶಿಕ್ಷಿಸಲು ಪ್ರಯತ್ನಿಸುತ್ತಿದ್ದ.

ಇಂಥಾ ಕೃಷ್ಣ, ಅರ್ಜುನ ಒಲ್ಲೆನೆಂದರೂ ಕುರುಕ್ಷೇತ್ರ ಯುದ್ಧವನ್ನೇಕೆ ಮಾಡಿಸಿದ?

ಏಕೆಂದರೆ ಕೃಷ್ಣ, ಒಂದೊಂದೇ ಅಂಗಳದ ಕಳೆ ಕೀಳುವ ಬದಲು ಒಟ್ಟು ಬಂದಳಿಕೆ ರಾಶಿಗೆ ಕೊಳ್ಳಿ ಇಡಲು ಬಯಸಿದ್ದ. ಹೊಸತಾಗಿ, ಸರಿಯಾದ ಬೆಳೆಗೆ ಭೂಮಿ ಹಸನು ಮಾಡಲು ಬಯಸಿದ್ದ. ಕೆಡುಕು ಮಾತ್ರವಲ್ಲ, ಕೆಡುಕಿನ ಕೈಹಿಡಿದವರೂ ಕೇಡಿಗರೇ ಆದ್ದರಿಂದ ಅವರನ್ನೆಲ್ಲ ಒಗ್ಗೂಡಿಸಿ, ಗುಡಿಸಿಹಾಕುವ ಕೆಲಸ ಮಾಡಿದ. ಮಾಡಿಸಿದ, ಅರ್ಜುನನ ಕೈಯಿಂದ.

ಕೃಷ್ಣನ ಯಾವುದೇ ಕಥೆ ಹೊಕ್ಕು ನೋಡಿದರೂ ಅಲ್ಲಿ ದ್ವೇಷ ಕಾಣುವುದಿಲ್ಲ. ಅವನ ಸಿಟ್ಟುಗಳು ಅನ್ಯಾಯದ ಬಗೆಗಷ್ಟೇ. ಬಯಲಲ್ಲಿ ಕೊಳಲೂದುತ್ತಾ ಬೆಳೆದ ಹುಡುಗ, ಕೈಯೊಡ್ಡಿದವರಿಗೆಲ್ಲ ಪ್ರೀತಿ ಮೊಗೆಮೊಗೆದು ಹಂಚಿದ. ಯಾರಿಗೂ ಇಲ್ಲವೆನ್ನಲಿಲ್ಲ. ಅಂಥಾ ದುರ್ಯೋಧನನನ್ನೂ ಖಾಲಿ ಕೈಯಲ್ಲಿ ಮರಳಿಸದ ಮಾಹಾನುಭಾನೀತ.

ಹೂವು ಕೊಟ್ಟವರ ಮನೆಗೆ ಹೆಗಲ ಮೇಲೆ ಹುಲ್ಲು ಹೊತ್ತು ತರುವ, ಒಂದು ದಳ ತುಳಸಿಗೆ, ಹಿಡಿ ಅವಲಕ್ಕಿಗೆ ಒಲಿಯುವ, ಗೊಲ್ಲಬಾಲ, ಗೀತಾಚಾರ್ಯನ ಮಹಿಮೆ ಯಾರನ್ನು ತಾನೇ ಸೆಳೆಯದು ಹೇಳಿ?


ಅರಳಿಮರದ ಎಲ್ಲ ಓದುಗರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.