ನಿಮ್ಮ ದೇಹದ ಸ್ವಾಸ್ಥ್ಯ, ನೀವು ನಿಮ್ಮ ಬದುಕಿಗೆ ಅದೆಷ್ಟು ಕೃತಜ್ಞರಾಗಿದ್ದೀರಿ ಅನ್ನುವುದರ ಸೂಚಿ. ಧ್ಯಾನದಂತೆ ನಿಮ್ಮ ದೇಹದ ಆರೈಕೆ ಮಾಡಿಕೊಳ್ಳಿ, ಸಂತೋಷದಿಂದಿರಿ : Tai Sheridan | ಚೇತನಾ ತೀರ್ಥಹಳ್ಳಿ
ಆತ್ಮ ನೆಲೆಸಿರುವಷ್ಟು ಕಾಲವೂ ನಿಮ್ಮ ದೇಹವೇ ನಿಮ್ಮ ಬದುಕು. ದಯವಿಟ್ಟು ಅದನ್ನು ಜೋಪಾನ ಮಾಡಿ. ಅದರೊಡನೆ ಸೌಹಾರ್ದದಿಂದ ಇರಿ, ನಾಜೂಕಾಗಿ ನೋಡಿಕೊಳ್ಳಿ. ನಿಮ್ಮ ದೇಹದೊಡನೆ ಗೆಳೆತನ ಬೆಳೆಸಿಕೊಳ್ಳಿ. ಸಾಧ್ಯವಾದಷ್ಟೂ ಅದಕ್ಕೆ ನೋವು ಕೊಡದಿರಲು ಪ್ರಯತ್ನಿಸಿ. ನಿಮ್ಮ ದೇಹದ ಹೊರಗೆ ನಿಂತು ಒಮ್ಮೆ ನೋಡಿ, ಅದು ಎಷ್ಟು ಅದ್ಭುತವಾಗಿದೆಯೆಂದು ನಿಮಗೇ ತಿಳಿಯುವುದು.
ದೇಹ ನಿಮ್ಮ ಪಾಲಿಗೆ ಬಾಡಿಗೆ ಮನೆ ಇದ್ದಂತೆ. ನೀವು ಇರುವಷ್ಟು ಕಾಲವೂ ನಿಮ್ಮ ಮನೆಯನ್ನು ಶುಚಿಯಾಗಿ, ಓರಣವಾಗಿ ಇಟ್ಟುಕೊಂಡಂತೆ ನಿಮ್ಮ ದೇಹವನ್ನೂ ನೋಡಿಕೊಳ್ಳಿ. ನಿಮ್ಮ ದೇಹ, ನೀವು ನಿಮ್ಮ ಬದುಕಿಗೆ ಅದೆಷ್ಟು ಕೃತಜ್ಞರಾಗಿದ್ದೀರಿ ಅನ್ನುವುದರ ಸೂಚಿ.
ಚೆನ್ನಾಗಿ ನಿದ್ದೆ ಮಾಡಿ, ಸಾಕಷ್ಟು ನಿದ್ದೆ ಮಾಡಿ. ಚೆನ್ನಾಗಿ ತಿನ್ನಿ, ಅತಿಯಾಗಿ ತಿನ್ನದಿರಿ. ವ್ಯಾಯಾಮ ಮಾಡಿ, ನಡೆದಾಡಿ. ಕಾಯಿಲೆಗಳಿದ್ದರೆ, ಅವನ್ನು ಒಪ್ಪಿಕೊಳ್ಳಿ ಮತ್ತು ಸರಿಯಾದ ಚಿಕಿತ್ಸೆ ಪಡೆಯಿರಿ. ನಿಮ್ಮ ದೇಹ ದೀರ್ಘಕಾಲದವರೆಗೆ ಆರೋಗ್ಯದಿಂದಿರಲು ಏನು ಮಾಡಬೇಕೆಂದು ನಿಮಗೆ ಗೊತ್ತಿದೆ.
ಧ್ಯಾನದಂತೆ ನಿಮ್ಮ ದೇಹದ ಆರೈಕೆ ಮಾಡಿಕೊಳ್ಳಿ, ಸಂತೋಷದಿಂದಿರಿ.
ಇದನ್ನು ಅರಿಯುವುದು ಕಷ್ಟವೇನಲ್ಲ.
ಸುಮ್ಮನೆ ಕುಳಿತಿದ್ದರೆ ಸಾಕು, ಶಾಂತವಾಗಿ.
ತಾಯ್ ಶೆರಿದಾನ್ (Tai Sheridan) ಅವರು ಶುನ್ರ್ಯು ಸುಜುಕಿ (Shunryu Suzuki) ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

