“ಅಹಂಕಾರದಿಂದ ಪ್ರೇಮವೂ ನಾಶವಾಗುವುದು” ಎಂದು ಸಾರುವ ಸೂಫಿ ಕಥೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದಾನೊಂದು ಕಾಲದಲ್ಲಿ ಒಂದು ದ್ವೀಪ ಇತ್ತು . ಎಲ್ಲ ಭಾವನೆಗಳು ಅಲ್ಲಿ ಕೂಡಿ ಬದುಕುತ್ತಿದ್ದವು.
ಒಂದು ದಿನ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡಿತು. ದ್ವೀಪ ಕೊಚ್ಚಿಕೊಂಡು ಹೋಗುವ ಆತಂಕ ಎದುರಿಸಬೇಕಾಯಿತು.
ಎಲ್ಲ ಭಾವನೆಗಳಿಗೆ ಗಾಬರಿಯಾಯಿತು.
ಆದರೆ ಪ್ರೇಮ ಧೈರ್ಯ ಮಾಡಿ ಅಲ್ಲಿಂದ ಪಾರಾಗಿ ಹೋಗಲು ಒಂದು ದೋಣಿ ತಯಾರಿಸಿತು. ಎಲ್ಲ ಭಾವನೆಗಳು ಲಗುಬಗೆಯಿಂದ ದೋಣಿ ಹತ್ತಿ ಕುಳಿತವು ಆದರೆ ಒಂದು ಭಾವನೆಯನ್ನು ಮಾತ್ರ ಹೊರತುಪಡಿಸಿ.
ಯಾರು ದೋಣಿ ಹತ್ತಲಿಲ್ಲ ಎಂದು ಪ್ರೇಮ ದೋಣಿಯಿಂದ ಇಳಿದು ಬಂದು ನೋಡಿದಾಗ ಅದು ಅಹಂ ಆಗಿತ್ತು.
ಪ್ರೇಮ ಎಷ್ಟು ಬೇಡಿಕೊಂಡರೂ ಅಹಂ ದೋಣಿ ಹತ್ತಲು ನಿರಾಕರಿಸಿತು. ಅಷ್ಟೊತ್ತಿಗಾಗಲೇ ಸಮುದ್ರದಲ್ಲಿನ ನೀರಿನ ಮಟ್ಟ ಏರತೊಡಗಿತ್ತು.
ಎಲ್ಲ ಭಾವನೆಗಳು, ಅಹಂ ನ ಅಲ್ಲಿಯೇ ಬಿಟ್ಟು ದೋಣಿ ಏರುವಂತೆ ಪ್ರೇಮವನ್ನ ಬೇಡಿಕೊಂಡವು. ಆದರೆ ಪ್ರೇಮಕ್ಕೆ ಅಹಂ ನ ಬಿಟ್ಟು ಹೋಗುವ ಮನಸ್ಸಾಗಲಿಲ್ಲ.
ಕೊನೆಗೆ ಎಲ್ಲ ಭಾವನೆಗಳು ದೋಣಿ ಹತ್ತಿ ಪಾರಾದವು. ಪ್ರೇಮ ಮತ್ತು ಅಹಂ ಚಂಡಮಾರುತದ ಸುಳಿಗೆ ಸಿಕ್ಕು ನಾಶವಾದವು.
ಅಹಂ ನಿಂದ ದೂರ ಆದಾಗ ಮಾತ್ರ ಬದುಕು ಸಾಧ್ಯ.

