ಭಾವನೆಗಳಿಗೆ ಬೆನ್ನು ಹಾಕಬೇಡಿ. ಅವು ಹೊಮ್ಮುವುದು ನಿಮ್ಮಿಂದಲೇ. ಅವುಗಳ ಹೊಣೆಗಾರಿಕೆಯೂ ನಿಮ್ಮದೇ… Tai Sheridan | ಚೇತನಾ ತೀರ್ಥಹಳ್ಳಿ
ಭಾವನೆಗಳೆಂದರೆ, ಜಗತ್ತಿಗೆ ನಮ್ಮ ಹೃದಯದ ತೀವ್ರ ಸ್ಪಂದನೆ. ಅವನ್ನು ಕಡೆಗಣಿಸಬೇಡಿ, ಅವನ್ನು ಹತ್ತಿಕ್ಕಲೂಬೇಡಿ.
ಈ ಭಾವನೆಗಳು ಯಾವ ಥರದ್ದಾದರೂ ಆಗಿರಲಿ, ಎಷ್ಟೇ ವಿಚಿತ್ರವಾಗಿ ತೋರಲಿ, ಅವನ್ನು ಅವು ಇರುವಂತೆಯೇ ಸ್ವೀಕರಿಸಿ.
ಅವು ಹೊಮ್ಮುವುದು ನಿಮ್ಮಿಂದಲೇ. ಅವುಗಳ ಹೊಣೆಗಾರಿಕೆಯೂ ನಿಮ್ಮದೇ.
ಕೆಲವೊಮ್ಮೆ ಕೆಲವರನ್ನು ಒಪ್ಪಿಕೊಳ್ಳಲು, ನಿಮ್ಮ ಹತ್ತಿರ ಬಿಟ್ಟುಕೊಳ್ಳಲು ನಿಮಗೆ ಇಷ್ಟವಾಗದೆ ಹೋಗಬಹುದು. ಕೆಲವು ಸಂಗತಿಗಳ ಬಗ್ಗೆ ನಿರಾಕರಣೆ ಬೆಳೆದಿರಬಹುದು. “ಹಾಗೇನಿಲ್ಲ” ಎಂದು ತಟ್ಟಿ ಹಾರಿಸುವ ಬದಲು ಅವನ್ನು ಒಪ್ಪಿಕೊಳ್ಳಿ ಮತ್ತು ಹಾಗನಿಸಲು ಕಾರಣವೇನೆಂದು ಯೋಚಿಸಿ. ನೀವು ನಿಮ್ಮ ಭಾವನೆಯನ್ನು ಒಪ್ಪಿಕೊಳ್ಳುವವರೆಗೂ ಪರಿಹಾರ ಹುಡುಕಲು ಸಾಧ್ಯವಿಲ್ಲ.
ಅದೇ ರೀತಿ ಯಾವುದಾದರೂ ವಸ್ತು / ವ್ಯಕ್ತಿಯ ಬಗ್ಗೆ ಇಷ್ಟದ, ಗೆಳೆತನದ ಭಾವನೆ ಉಂಟಾಗಿದ್ದರೂ ಅದನ್ನು ಒಪ್ಪಿಕೊಳ್ಳಿ. ಅದನ್ನು ತೋರಿಸಿಕೊಳ್ಳಿ. ಪ್ರತಿಯಾಗಿ ಏನನ್ನೂ ಬಯಸಬೇಡಿ. ನಿಮ್ಮ ಭಾವನೆಯ ಕಚಗುಳಿಯನ್ನು ಅನುಭವಿಸಿ. ಅದಕ್ಕೆ ಬೆನ್ನು ಹಾಕಿ ದೂರ ಓಡಬೇಡಿ.
ನಿಮ್ಮ ಭಾವನೆಯನ್ನು ನೀವು ಗೌರವಿಸಿಕೊಳ್ಳಿ; ಹಾಗೇ ಇತರರ ಭಾವನೆಯನ್ನೂ ಗೌರವಿಸಿ.
ಇದು ಬಹಳ ಸರಳ.
ಸುಮ್ಮನೆ ಕುಳಿತರೆ ತಿಳಿಯುವುದು,
ತಾನೇ ತಾನಾಗಿ.
ತಾಯ್ ಶೆರಿದಾನ್ (Tai Sheridan) ಅವರು ಶೆನ್ರ್ಯು ಸುಜುಕಿ ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

