ಎಲ್ಲ ಕಾಲಮಾನದಲ್ಲಿಯೂ “ಖುಶಿಯಾಗಿ ಇರುವುದು ಹೇಗೆ” ಎನ್ನುವ ಪ್ರಶ್ನೆ ಮನುಷ್ಯನನ್ನು ಬಹು ಹಿಂದಿನಿಂದಲೂ ಕಾಡುತ್ತ ಬಂದಿದೆ. ಹಿಂದಿನ ಸಾವಿರಾರು ವರ್ಷಗಳಿಂದ ಮನುಷ್ಯನನ್ನು ಸತಾಯಿಸುತ್ತ ಬಂದಿರುವ ಈ ಪ್ರಶ್ನೆ ಮಂದಿನ ಸಾವಿರಾರು ವರ್ಷಗಳಲ್ಲಿಯೂ ಮನುಷ್ಯನನ್ನು ಕಾಡಲಿದೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ
ನಾವೆಲ್ಲರೂ ಖುಶಿಯ ಹುಡುಕಾಟದ ಹಿಂದೆ ಬಿದ್ದು ಬದುಕಿನಿಂದ ತಪ್ಪಿಸಿಕೊಂಡುಬಿಟ್ಟಿದ್ದೇವೆ. ಖುಶಿಯ ಜಗತ್ತಿನ ಕೀಲಿ ಕೈ ಹುಡುಕಾಟದ ನಮ್ಮ ಮಹಾಯಾತ್ರೆ ನಮ್ಮನ್ನು ಬದುಕಿನಿಂದ ದೂರ ಮಾಡಿ ಮಾಡಿಬಿಡುತ್ತದೆ. ಕೆಲವರಂತೂ ತಮ್ಮ ಇಡೀ ಬದುಕನ್ನೇ ಖುಶಿಯ ಹುಡುಕಾಟದಲ್ಲಿ ಕಳೆದು ಭ್ರಮನಿರಸನಗೊಂಡುಬಿಟ್ಟಿದ್ದಾರೆ. ಅವರು ಖುಶಿಯನ್ನು ಕಂಡುಕೊಳ್ಳದಿರುವುದಕ್ಕೆ ಒಳ್ಳೆಯ ಕಾರಣವಿದೆ, ಅದು ಏನೆಂದರೆ ಹುಡುಕಿದಾಗ ಸಿಗಲು ಖುಶಿ ಎನ್ನುವುದು ವ್ಯಕ್ತಿಯಲ್ಲ, ವಸ್ತುವಲ್ಲ, ಜಾಗವಲ್ಲ. ವಾಸ್ತವದಲ್ಲಿ ಖುಶಿ ಎನ್ನುವುದು ನಾವು ಆಯ್ಕೆ ಮಾಡಿಕೊಳ್ಳಬೇಕಾದ, ನಾವು ಒಪ್ಪಿಕೊಳ್ಳಬೇಕಾದ ಸಂಗತಿ. “The Power of Positive Thinking” ಕೃತಿಯ ಕರ್ತೃ Dr. Norman Vincent Peale ಖುಶಿಯನ್ನು ಹೊಂದುವುದಕ್ಕಾಗಿ ಈ ಕೆಳಕಂಡ ಆರು ಸೂಚಕಗಳನ್ನು ಸೂಚಿಸುತ್ತಾರೆ.
- ದ್ವೇಷಿಸದಿರುವುದು.
- ಚಿಂತೆ ಮಾಡದಿರುವುದು.
- ಸರಳವಾಗಿ ಬದುಕುವುದು.
- ಹೆಚ್ಚು ನಿರೀಕ್ಷಿಸದಿರುವುದು.
- ಹೆಚ್ಚು ಕೊಡುವುದು.
- ಬೆಳಕನ್ನು ಎಲ್ಲಕಡೆ ಹಂಚುವುದು.
Dr.Peale ಹೇಳಿರುವುದು ಸರಿಯಾಗಿದೆ, ಖುಶಿಯಾಗಿರುವುದಕ್ಕೆ ಈ ಆರು ಸೂಚಕಗಳು ಬಹಳ ಮುಖ್ಯ. ಇನ್ನೂ ಕೆಲವನ್ನು ಈ ಲಿಸ್ಟ್ ಗೆ ಸೇರಿಸಬಹುದು.
- ಖುಶಿಯಾಗಿರಲು ನಿರ್ಧರಿಸುವುದು : ಖುಶಿಯಾಗಿರಲು ಬಯಸದೆ, ಖುಶಿಯಾಗಿರಲು ಸಿದ್ಧರಾಗಿರದೇ ಯಾರೂ ಖುಶಿಯಾಗಿರುವುದು ಸಾಧ್ಯವಿಲ್ಲ. ಹಾಗೆಂದರೆ ಋಣಾತ್ಮಕ ಸಂಗತಿಗಳಿಂದ ದೂರವಾಗಿ, ಖುಶಿಯಾಗಿರುವ ವೈಯಕ್ತಿಕ ಚಾಯಿಸ್ ನ್ನು ಅಪ್ಪಿಕೊಳ್ಳುವುದು.
- ಖುಶಿ ವ್ಯಕ್ತಿ, ವಸ್ತು ಮತ್ತು ಜಾಗಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದನ್ನ ಒಪ್ಪಿಕೊಳ್ಳುವುದು : ನಾವು ಬಯಸಿದ್ದು ನಮಗೆ ದೊರಕಿದಾಗ ನಮಗೆ ಸ್ವಲ್ಪ ಹೊತ್ತು ಖುಶಿಯಾಗುತ್ತದೆ. ಆದರೆ ಈ ಖುಶಿ ಬಹುಕಾಲ ಇರುವಂಥದ್ದಲ್ಲ. ಬಹುಕಾಲ ಉಳಿಯುವಂತ ಖುಶಿ ಸಾಧ್ಯವಾಗುವುದು ನಾವು ಬದುಕಿನಲ್ಲಿ ತೃಪ್ತರಾಗುವುದನ್ನ ರೂಢಿಸಿಕೊಂಡಾಗ, ನಮ್ಮ ಉದ್ದೇಶಗಳತ್ತ ನಿರಂತರವಾಗಿ ವರ್ಕ್ ಮಾಡುತ್ತ, ಸಮಾಧಾನ ಅನುಭವಿಸುವಾಗ.
- ಖುಶಿಯನ್ನ ಹುಡುಕಾಡುವುದನ್ನ ನಿಲ್ಲಿಸಿ : ನಮಗೆ ಖುಶಿಯ ಅವಶ್ಯಕತೆ ಇರಬಹುದು ಆದರೆ ಒಂದು ಬಿಂದುವಿನಲ್ಲಿ ನಾವು ನಮ್ಮ ಈ ಹುಡುಕಾಟವನ್ನ ನಿಲ್ಲಿಸಿಬಿಡಬೇಕು. ನಾವು ಹುಡುಕುತ್ತಿರುವುದು ಹೊರಗಿಲ್ಲ ನಮ್ಮ ಒಳಗೇ ಇದೆ ಎನ್ನುವುದು ಅರಿವಾದಾಗ ಹುಡುಕಾಟ ತಾನೇ ತಾನಾಗಿ ತನ್ನ ಅರ್ಥ ಕಳೆದುಕೊಂಡುಬಿಡುತ್ತದೆ.
ಬದುಕಿನ ಸುಖ ದುಃಖ ಎಲ್ಲವನ್ನೂ ಅನುಭವಿಸಿ ಅವು ಹುಟ್ಟಿಕೊಳ್ಳುವ ಮೂಲವನ್ನು ಪರಿಶೀಲಿಸಿ.ಆಗ ಅವು ಯಾವುದೂ ಹೊರಗೆ ಇಲ್ಲ ನಿಮ್ಮ ಒಳಗೇ ಸಾಧ್ಯವಾಗುವಂಥವು ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ.

