ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬಿರುಗಾಳಿ, ಜೋರು ಮಳೆ. ಬಿಷಪ್ ಇನ್ನೂ ಚರ್ಚಿನಲ್ಲೇ ಇದ್ದ. ಕಿರಸ್ತಾನಿ ಅಲ್ಲದ ಹೆಂಗಸೊಬ್ಬಳು ಅವನೆದುರಿಗೆ ನಿಂತಿದ್ದಳು. “ನಾನು ಕಿರಸ್ತಾನರವಳಲ್ಲ. ನರಕಕ್ಕೆ ಹೋಗಿ ಬೆಂಕಿಗೆ ಬೀಳತೇನಾ? ಮೋಕ್ಷ ಸಿಗತ್ತಾ?” ಅಂತ ಕೇಳುತಿದ್ದಳು.
ಬಿಷಪ್ ಅವಳನ್ನೇ ನೋಡುತ್ತಾ- “ಮೋಕ್ಷ ಇರುವುದು ಪವಿತ್ರಾತ್ಮನ ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡು ಕಿರಸ್ತಾನರಾದವರಿಗೆ ಮಾತ್ರ” ಅಂದ.
ಅವನು ಮಾತಾಡುತಿರುವಾಗಲೇ ಸಿಡಿಲು ಬಡಿಯಿತು. ಚರ್ಚಿಗೆ ಬೆಂಕಿ ಬಿತ್ತು.
ಊರಿನ ಜನ ಓಡಿ ಬಂದು ಹೆಂಗಸನ್ನು ಕಾಪಾಡಿದರು. ಬಿಷಪ್ ಬೆಂಕಿಗೆ ತುತ್ತಾದ.

