ಅಮರು ಶತಕ, ಅಮರುಕ ಎಂಬ ಕವಿ ಸಂಸ್ಕೃತದಲ್ಲಿ ಬರೆದಿರುವ ಪ್ರಣಯನಿಬಂಧ. ಇದು ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ. ಈ ಕೃತಿಯ ಆಯ್ದ ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಅರಳಿಮರಕ್ಕಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಸರಣಿಯ 7ನೇ ಭಾಗ ಇಲ್ಲಿದೆ…
52
ಬಹುತೇಕ ಅಂಜುಬುರುಕ ಹೆಂಗಸರು
ಕಣ್ಣೀರು ಹಾಕುತ್ತಾರೆ, ಆಣೆ ಪ್ರಮಾಣ ಮಾಡುತ್ತಾರೆ,
ಪ್ರೇಮಿಯ ಕಾಲ ಬಳಿ ಕುಸಿದು ಬಿದ್ದು
ಅವನ ಪ್ರಯಾಣಕ್ಕೆ ಅಡ್ಡಗಾಲಾಗುತ್ತಾರೆ.
ಆದರೆ ನಾನು ಹಾಗಲ್ಲ
ದಿಟ್ಟ ಹೆಣ್ಣು ಮಗಳು ನಾನು.
ಹೋಗಿ ಬಾ, ಮಂಗಳವಾಗಲಿ ನಿನಗೆ.
ನನ್ನ ಪ್ರೇಮ ಎಂಥದು ಗೊತ್ತಾಗುತ್ತದೆ ನಿನಗೆ ಆಮೇಲೆ.
ದಾರಿಯಲ್ಲಿ ಯಾರಾದರೂ
ಸುದ್ದಿ ಮುಟ್ಟಿಸುತ್ತಾರೆ ನಿನಗೆ
ನನ್ನ ಬಗ್ಗೆ.
53
ಅವಳು
ತನ್ನ ಕೋಮಲ ಕೈಗಳಿಂದ
ಅವನು ಬಟ್ಟೆಯನ್ನು ಜಗ್ಗಿ ಎಳೆಯಲಿಲ್ಲ,
ಬಾಗಿಲಿಗೆ ಅಡ್ಡಲಾಗಿ ನಿಂತು ಅವನನ್ನು ತಡೆಯಲಿಲ್ಲ,
ಅವನ ಪಾದಗಳ ಮೇಲೆ ಬಿದ್ದು ಬೇಡಿಕೊಳ್ಳಲಿಲ್ಲ.
ಆಕಾಶದಲ್ಲಿ ಮೋಡಗಳು ತುಂಬಿಕೊಳ್ಳುತ್ತ
ಪ್ರೇಮಿಗಳನ್ನು ಒಟ್ಟಾಗಿರಲು ಆಹ್ವಾನಿಸುತ್ತಿರುವ
ಮಾದಕ ಗಳಿಗೆಯಲ್ಲಿ
ಹೊರಟು ನಿಂತಿರುವ ಅವನನ್ನು,
ನೋಡುತ್ತ ನಿಂತವಳ ಕಣ್ಣುಗಳಲ್ಲಿನ
ನದಿಯ ಮಹಾಪೂರವನ್ನು ದಾಟುವುದು
ಸಾಧ್ಯವಾಗಲೇ ಇಲ್ಲ ಅವನಿಗೆ.
54
ಕಾಮನ ಉಪಟಳವನ್ನು
ಸಹಿಸಿಕೊಳ್ಳುವುದಾದರೂ ಹೇಗೆ?
ಪ್ರೇಮದಲ್ಲಿ
ದೇಹಗಳನ್ನು ಬಹಳ ಮುತುವರ್ಜಿಯಿಂದ
ಸಿಂಗರಿಸುವ ಕಾಮದೇವ,
ಸೊರಗಿಸಿ ಹಿಂಡಿ ಹಿಪ್ಪೆ ಮಾಡಿಬಿಡುತ್ತಾನೆ ವಿರಹದಲ್ಲಿ.
ಆದರೆ ಯಮಧರ್ಮ ಮಾತ್ರ ಮಾಡುವುದಿಲ್ಲ
ಯಾವುದೇ ಪಕ್ಷಪಾತ ಎಣಿಸುವಲ್ಲಿ
ಉಳಿದಿರುವ ಬಾಕಿ ದಿನಗಳನ್ನು.
ಪ್ರೇಮಿಗಳೇ ಕರುಣೆ ತೋರಿಸಿ,
ಒಬ್ಬರು
ಇನ್ನೊಬ್ಬರ ಮೇಲೆ,
ಮುಗಿಯದಿರಲಿ ಯಾವತ್ತೂ ಯಮನ ಎಣಿಕೆ
ಮುಂದುವರೆಯಲಿ ಸದಾ
ಕಾಮದೇವನ ಎದುರು ಮಣಿಯುವಿಕೆ.
55
ಎಷ್ಟು ದಿನಗಳಿಂದ ಕಾಯುತ್ತಿದ್ದಳೋ ಏನೋ
ನನ್ನ ಕಂಡ ಕೂಡಲೇ
ಹಿಡಿದುಕೊಂಡಳು ನನ್ನ ಮುಖವನ್ನು
ತನ್ನ ಎರಡೂ ಕೈಗಳಲ್ಲಿ.
ಕುಸಿದೆ ನಾನು ಕರಗಿ ಅವಳ ಎದೆಯ ಮೇಲೆ
ಅವಳ ಕಣ್ಣುಗಳಿಂದ ಧಾರಕಾರವಾಗಿ ಹರಿದ ಕಣ್ಣೀರು
ಅವಳ ಮೊಲೆಗಳನ್ನು ಒದ್ದೆ ಮಾಡುತ್ತ
ತಣ್ಣಗಾಗಿಸಿತು ನನ್ನ ಕ್ಷೋಭೆಯನ್ನ.
56
ಎಷ್ಟೋ ದಿನಗಳ ನಂತರ ವಾಪಸ್ಸಾಗುತ್ತಿದ್ದ ನನ್ನನ್ನು
ದೂರದಿಂದಲೇ ನೋಡಿ
ಮುಗುಳ್ನಗುತ್ತ ಸ್ವಾಗತ ಮಾಡಿದಳು
ಎದ್ದು ನಿಂತು ಗಂಭೀರವಾಗಿ.
ಎಷ್ಟೋ ದಿನಗಳ ಸೇಡು ತೀರಿಸಿಕೊಳ್ಳುವವಳಂತೆ
ನಿರ್ದಯವಾಗಿ ಪ್ರೇಮಿಸಿದಳು
ಅಂದು ರಾತ್ರಿ ಹಾಸಿಗೆಯಲ್ಲಿ.
ನಾನು ಅವಳನ್ನು ಬಿಟ್ಟುಹೋಗಿದ್ದ ಕೋಪ
ಎದ್ದು ಕಾಣುತ್ತಿತ್ತು ಅವಳ ಮುಖದಲ್ಲಿ ಮೋಹಕವಾಗಿ.
ಪ್ರೇಮದ ಹಲವು ಸಾರ್ಥಕ ಗಳಿಗೆಗಳಲ್ಲಿ
ಇಂಥದೂ ಒಂದು.
57
ಯಾವ ವಿಷಯಗಳಲ್ಲಿ ನಂಬಬಹುದು
ಗೆಳತಿಯರನ್ನ ?
ನನ್ನೊಳಗೆ ಕಾಮನೆಗಳನ್ನು ಉದ್ದೀಪಿಸುವವನ ಜೊತೆ
ಭಾವನೆಗಳನ್ನ ಹಂಚಿಕೊಳ್ಳಲು ನಾಚಿಕೆ ನನಗೆ,
ಚೂರು ವ್ಯತ್ಯಾಸ ಕಂಡರೂ ನಗುತ್ತಾರೆ
ಲೋಕದ ಜನ ಆಡಿಕೊಂಡು,
ಯಾರಿಗೆ ಶರಣಾಗಲಿ ಅಮ್ಮಾ?
ಅತೃಪ್ತ ಬಯಕೆಗಳು
ನನ್ನ ಹೃದಯವನ್ನು ಒಣಗಿಸಿ
ಮಾಡುತ್ತಿವೆ ಬರಡು.
ಉದ್ಧಟಳಾಗುತ್ತಿದ್ದೇನೆ ನಾನು.
58
ಅವನ ಹೆಸರು ಕೇಳಿದೊಡನೆಯೇ
ರೋಮಾಂಚನಗೊಳ್ಳುತ್ತದೆ ಮೈ, ಮನಸ್ಸು.
ಚಂದಿರನಂಥ ಅವನ ಮುಖ ನೋಡಿದೊಡನೆ
ಒದ್ದೆಯಾಗಿಬಿಡುತ್ತೇನೆ
ಚಂದ್ರಕಾಂತ ಮಣಿಯಂತೆ ಮೈ ತುಂಬ,
ಮುಟ್ಟಬೇಕೆಂದು ಅವನು
ಕುತ್ತಿಗೆಯ ಹತ್ತಿರ ಬಂದು ನಿಂತಾಗ
ಕರಗಿ ಶರಣಾಗಿಬಿಡುತ್ತದೆ ನನ್ನ ಹೃದಯ,
ಇಷ್ಟೆಲ್ಲ ಪ್ರೀತಿಯಿದ್ದರೂ ಯಾಕೆ ನನಗೆ
ಅವನ ಮೇಲೆ ಕೋಪ ? ಅಥವಾ
ಇದು ನನ್ನ ಸಂಕೋಚದ ಇನ್ನೊಂದು ರೂಪ?
59
ಹರೆಯವನ್ನು ಕಳೆದುಕೊಳ್ಳುತ್ತಿರುವ
ನಿನ್ನ ಗೆಳತಿಯರನ್ನು ಹೋಗಿ ಕೇಳು,
ನಿನ್ನವನು ನಿನ್ನ ಪ್ರೇಮಿಸುವಂತೆ
ನೋಡಿಕೊಳ್ಳುತ್ತಾರೆಯೆ ಅವರನ್ನ ಅವರ
ಪ್ರೇಮಿಗಳು ?
ಚಾಡಿ ಮಾತುಗಳನ್ನು ಕೇಳಿ
ಕಹಿ ಮಾಡಿಕೊಳ್ಳ ಬೇಡ ನಿನ್ನ ಕೇಳಿಯನ್ನ,
ಪ್ರೇಮಕ್ಕೆ ಒಮ್ಮೆ ಅಪಮಾನವಾದರೂ ಸಾಕು
ಕಳೆದುಕೊಂಡು ಬಿಡುತ್ತದೆ ಅದು
ತನ್ನ ಆತ್ಮದ ರುಚಿಯನ್ನ.
(ಮುಂದುವರಿಯುವುದು….)

