ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಹಸಿರು ಬೆಟ್ಟದಲ್ಲೊಬ್ಬ ಸಂನ್ಯಾಸಿ ಇದ್ದ. ಶುದ್ಧವಾದ ಆತ್ಮ, ಶುದ್ಧವಾದ ಮನಸು, ಶುದ್ಧವಾದ ವಿಚಾರವಿದ್ದವನ ಅವನಯ. ಕಾಡಿನ ಪ್ರಾಣಿಗಳೂ ಆಕಾಶದ ಹಕ್ಕಿಗಳೂ ಬಂದು ಅವನ ಜೊತೆ ಮಾತಾಡುತಿದ್ದವು. ಅವನ ಮಾತು ಕೇಳಿ ಖುಷಿಪಡುತಿದ್ದವು. ರಾತ್ರಿಯವರೆಗೂ ಅವನ ಜೊತೆಯಲ್ಲಿರುತಿದ್ದವು. ಆಮೇಲೆ ಅವನು ಹರಸಿ ಅವನ್ನೆಲ್ಲ ಕಳಿಸಿಕೊಡುತಿದ್ದ.
ಅವತ್ತು ಸಾಯಂಕಾಲ ಅವನು ಪ್ರೀತಿಯ ಬಗ್ಗೆ ಹೇಳುತಿದ್ದ. ಚಿರತೆಯೊಂದು ಮೆಲ್ಲನೆ ತಲೆ ಎತ್ತಿ-ಸ್ವಾಮೀ ನೀವು ಪ್ರೀತಿಯ ಬಗ್ಗೆ ಹೇಳುತಿದ್ದೀರಿ. ನಿಮ್ಮ ಜೊತೆಗಾತಿ ಎಲ್ಲಿ? ಕಾಣುತಿಲ್ಲವಲ್ಲಾ?’ ಅಂದಿತು.
ನನ್ನ ಜೊತೆಗಾತಿ ಯಾರೂ ಇಲ್ಲ-ಅಂದ ಸಂನ್ಯಾಸಿ.
ಪ್ರಾಣಿ, ಪಕ್ಷಿಗಳೆಲ್ಲ ಬೆರಗಾದವು. ಪ್ರೀತಿ ಅಂದರೇನು ಅಂತ ಅವನಿಗೆ ಗೊತ್ತೇ ಇಲ್ಲ, ನಮಗೆ ಪ್ರೀತಿಯ ಬಗ್ಗೆ ಹೇಳುತಾನಲ್ಲಾ ಹೇಗೆ ಆಗತ್ತೆ ಇದೆಲ್ಲಾ! ಅಂದುಕೊಂಡವು. ಒಂದೂ ಮಾತಾಡದೆ ಸುಮ್ಮನೆ ಎದ್ದು ಹೋಗಿಬಿಟ್ಟವು.
ಅವತ್ತು ರಾತ್ರಿ ಸಂನ್ಯಾಸಿ ಚಾಪೆಯ ಮೇಲೆ ಮುಖ ಅಡಿಯಾಗಿ ಮಲಗಿದ್ದ. ಹೊರಳಿದ. ಜೋರಾಗಿ ಅತ್ತ. ಎದೆ ಬಡಿದುಕೊಂಡ.

