ನಿಮ್ಮ ಮನಸ್ಸಿನಲ್ಲಿ ತೇಲಾಡುವ ಪ್ರತಿಯೊಂದು ಆಲೋಚನೆಯ ತುಣುಕನ್ನೂ ಎಚ್ಚರದಿಂದ ಗಮನಿಸಿ, ಪೊಳ್ಳು ಅಲ್ಲದೆ ಇರುವುದನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಳ್ಳಿ: Tai Sheridan | ಚೇತನಾ ತೀರ್ಥಹಳ್ಳಿ
ನಿಮ್ಮ ಆಲೋಚನೆಗಳು ನಿಮ್ಮ ಆಲೋಚನೆಗಳಷ್ಟೇ, ಅವು ನಿಮ್ಮ ಬದುಕನ್ನು ನಿರ್ಧರಿಸುವ ತರ್ಕ ಅಥವಾ ಗಟ್ಟಿಗೊಂಡ ಚಿಂತನೆಯಲ್ಲ. ಅವು ಕೇವಲ ಆಲೋಚನೆಗಳು. ಚಿಂತನೆ, ಸಿದ್ಧಾಂತ, ನಂಬಿಕೆ ಅಥವಾ ನಿರ್ಧಾರವಾಗಿ ರೂಪು ತಳೆಯುವ ಆರಂಭಿಕ ಹಂತವಷ್ಟೇ.
ಆಗಾಗ ನಿಮ್ಮ ಮನಸ್ಸು ಹೊಕ್ಕು, ಹೊರಹೋಗುವ, ಮತ್ತೆ ಮರಳಿ ಬರುವ ಆಲೋಚನೆಗಳನ್ನು ನೀವೇನೂ ತಡೆಯಬೇಕಿಲ್ಲ/ ಅವಕ್ಕಾಗಿ ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಜಾಗ ಮೀಸಲಿಡಿ. ಅಲ್ಲಿ ನಿಮ್ಮ ಆಲೋಚನೆಗಳು ಮೋಡಗಳಂತೆ ಘಳಿಗೆಗೊಂದು ಆಕಾರ ಬದಲಿಸುತ್ತ ತೇಲಾಡಿಕೊಂಡಿರಲಿ.
ಅವುಗಳಲ್ಲಿ ಕೆಲವು ಸ್ಪಷ್ಟ ಅಲೋಚನೆ ಇರಬಹುದು, ಕೆಲವು ಮಬ್ಬಾಗಿರಬಹುದು. ಅವನ್ನು ಗಣನೆಗೆ ತೆಗೆದುಕೊಳ್ಳಬೇಕೇ ಬೇಡವೇ ಅನ್ನುವ ನಿರ್ಧಾರ ಸಂಪೂರ್ಣ ನಿಮ್ಮದೇ. ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ತೇಲಾಡುವ ಪ್ರತಿಯೊಂದು ಆಲೋಚನೆಯ ತುಣುಕನ್ನೂ ಎಚ್ಚರದಿಂದ ಗಮನಿಸಿ, ಪೊಳ್ಳು ಅಲ್ಲದೆ ಇರುವುದನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿಕೊಳ್ಳಿ.
ಈ ಪ್ರಕ್ರಿಯೆಯಲ್ಲಿ ಆಲೋಚನೆಗಳು ನಿಮ್ಮನ್ನು ಸೆರೆಮನೆಯಲ್ಲಿ ಬಂಧಿಸುವಂತೆ ಕೂಡಿಹಾಕುವ ಅಪಾಯ ಇರುತ್ತದೆ. ಆದ್ದರಿಂದ ಅವನ್ನು ಹೊರಗಿನ ಸಂಗತಿಯಂತೆ ದೂರದಿಂದಲೇ ಗಮನಿಸಿ, ಅವುಗಳ ಪ್ರಭಾವಕ್ಕೆ ಒಳಗಾಗಬೇಡಿ.
ಆಲೋಚನೆಯ ಪ್ರಭಾವಕ್ಕೆ ಒಳಗಾಗದೆ ಇರುವುದು ಕಷ್ಟವೇನಲ್ಲ,
ಆಗಾಗ ಸುಮ್ಮನೆ ಕುಳಿತುಕೊಳ್ಳುವ ಕಲೆ
ಕರಗತ ಮಾಡಿಕೊಂಡರೆ.
ತಾಯ್ ಶೆರಿದಾನ್ (Tai Sheridan) ಅವರು ಶೆನ್ರ್ಯು ಸುಜುಕಿ ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

