ಯಾರು ಏನಾದರೂ ಹೇಳಲಿ, ನಿಮ್ಮಷ್ಟಕ್ಕೆ ನೀವಿರಿ, ನಿಮ್ಮ ಹಾಗೆ ನೀವಿರಿ, ನೀವು ನೀವಾಗಿರಿ… : Tai Sheridan | ಚೇತನಾ ತೀರ್ಥಹಳ್ಳಿ
ಸೃಷ್ಟಿಯ ಪ್ರತಿಯೊಂದು ಜಡ ಚೇತನವೂ ತನ್ನದೇ ಬಗೆಯಲ್ಲಿ ವಿಶಿಷ್ಟ, ವಿಭಿನ್ನ. ಆದ್ದರಿಂದ ನೀವೇನಾಗಿದ್ದೀರೋ ಅದೇ ಆಗಿರಿ, ಇನ್ಯಾರೋ ಆಗಲು ಪ್ರಯತ್ನಿಸಬೇಡಿ.
ಇನ್ಯಾರದೋ ಸಾಧನೆ ಸರಿಗಟ್ಟಲು ನೀವು ಪ್ರಯತ್ನಿಸಬೇಕಿಲ್ಲ. ನಿಮ್ಮ ಸಾಧನೆಯ ದಾರಿಯಷ್ಟೇ ನಿಮ್ಮ ಆದ್ಯತೆಯಾಗಿರಲಿ.
ಇನ್ಯಾರದೋ ನಿರೀಕ್ಷೆ ನಿಮ್ಮದೂ ಆಗಬೇಕಿಲ್ಲ. ನೀವೇನು ಎದುರುನೋಡಲು ಬಯಸುತ್ತೀರೋ, ನಿಮ್ಮ ಗಮನವೆಲ್ಲ ಅದರ ಮೇಲಿರಲಿ.
ಇನ್ಯಾರದೋ ಜೀವನಶೈಲಿ ನಿಮ್ಮದಾಗಬೇಕಿಲ್ಲ. ನಿಮ್ಮ ಜೀವನಶೈಲಿ ನಿಮ್ಮ ಸ್ವಂತದ್ದು. ನೀವು ಹುಟ್ಟಿ ಬೆಳೆದ ವಾತಾವರಣದಿಂದ ರೂಪುಗೊಂಡಿದ್ದು. ಅದನ್ನು ಮತ್ತೊಬ್ಬರಿಗಾಗಿ ಬದಲಿಸಿಕೊಳ್ಳಬೇಕಿಲ್ಲ.
ಇನ್ಯಾರೋ ಕಂಡುಕೊಂಡ ಸತ್ಯವನ್ನು ನೀವು ಒಪ್ಪಲೇಬೇಕಿಲ್ಲ. ಕಂಡುಕೊಂಡವರು ಎಂಥಾ ಮಹಾತ್ಮರೇ ಆಗಿದ್ದರೂ ಅವರ ಮಾತು ಕೇಳಿ, ಗೌರವಿಸಿ, ನಿಮ್ಮ ಹುಡುಕಾಟ ಮುಂದುವರೆಸಿ. ಸತ್ಯ ಒಂದೇ ಆದರೂ ಅದು ಕಾಣಿಸಿಕೊಳ್ಳುವ ರೀತಿ ಬೇರೆಬೇರೆ. ಅದನ್ನು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡಿ.
ಯಾರು ಏನಾದರೂ ಹೇಳಲಿ, ನಿಮ್ಮಷ್ಟಕ್ಕೆ ನೀವಿರಿ, ನಿಮ್ಮ ಹಾಗೆ ನೀವಿರಿ, ನೀವು ನೀವಾಗಿರಿ.
ಇದು ಸಾಧ್ಯವಾಗುವುದು
ಮೌನದಿಂದ,
ಸುಮ್ಮನೆ ಕುಳಿತು ಧ್ಯಾನಿಸುವುದರಿಂದ.
ತಾಯ್ ಶೆರಿದಾನ್ (Tai Sheridan) ಅವರು ಶೆನ್ರ್ಯು ಸುಜುಕಿ ಪರಂಪರೆಯಲ್ಲಿ 40ಕ್ಕೂ ಹೆಚ್ಚು ಕಾಲ ಅಭ್ಯಾಸ ನಡೆಸಿದ ಝೆನ್ ಸಾಧಕರು. ಇವರೊಬ್ಬ ಉಪನ್ಯಾಸಕ, ಲೇಖಕ ಮತ್ತು ಕವಿಯೂ ಹೌದು. ಕ್ಯಾಲಿಫೋರ್ನಿಯಾ ಇವರ ನೆಲೆ. ಪ್ರಸ್ತುತ ಈ ಸರಣಿಯು Buddha in blue jeans ಕೃತಿಯ ಸ್ವತಂತ್ರ ಅನುವಾದವಾಗಿದ್ದು, ಕೆಲವು ಚಿಕ್ಕಪುಟ್ಟ ಸೇರ್ಪಡೆಯೊಂದಿಗೆ ಮರು ನಿರೂಪಣೆ ಮಾಡಲಾಗಿದೆ.

