ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಮುತ್ತನ್ನು ಹೊತ್ತಿದ್ದ ಸಿಂಪಿ ಇನ್ನೊಂದು ಸಿಂಪಿಗೆ ಹೇಳುತಿತ್ತು-ಒಳಗೆಲ್ಲ ನೋವೋ ನೋವು. ಎಂಥದೋ ಭಾರ. ಅದೇನೋ ದುಂಡಗೆ ಬೆಳೆದು ಒಳಗೇ ಒತ್ತುತಾ ಇದೆ, ಸಹಿಸಲಾರೆ, ಅಯ್ಯೋ -ಅನುತಿತ್ತು.
ಇನ್ನೊಂದು ಸಿಂಪಿ ಉದ್ಧಟವಾಗಿ ಹೇಳಿತು- ದೇವರು ದೊಡ್ಡವನು. ಈ ಸಮುದ್ರದ ಕರುಣೆ ದೊಡ್ಡದು. ಸದ್ಯ. ನನಗೆ ಯಾವ ನೋವೂ ಇಲ್ಲ. ನನ್ನೊಳಗೂ ಹೊರಗೂ ಆರಾಮ ಇದೇನೆ.
ಆ ಹೊತ್ತಿಗೆ ಅಲ್ಲಿ ನಿಧಾನವಾಗಿ ಹೋಗುತಿದ್ದ ಏಡಿ ಅವೆರಡರ ಮಾತು ಕೇಳಿತು. ಆರಾಮವಾಗಿದ್ದ ಸಿಂಪಿಯನ್ನು ಮಾತಾಡಿಸಿತು- ನಿಜ, ನಿಜ. ನೀನು ಆರಾಮವಾಗಿದೀಯ, ನೋವು ಕೂಡ ಇಲ್ಲ. ಅಪರೂಪದ ಚೆಲುವಿನ ಮುತ್ತು ಆ ಸಿಂಪಿಯೊಳಗಿದೆ. ಅದಕ್ಕೇ ಅಂಥ ನೋವು- ಅಂದಿತು.

