ಮೊದಲ ಬಾರಿಗೆ ಈ ಬೋಧಿಸತ್ವದ ಹೆಸರನ್ನು ಚೀನಾಕ್ಕೆ ಪರಿಚಯಿಸಿದ್ದು ಕುಮಾರ ಜೀವನೆಂಬ ಬೌದ್ಧ ಬಿಕ್ಖು. ಅದೇನಾಯಿತೆಂದರೆ… । ಚೇತನಾ ತೀರ್ಥಹಳ್ಳಿ
ಒಂದು ದೇಶದ, ಒಂದು ಭಾಷೆಯ ದೇವತೆ ಇನ್ನೊಂದು ದೇಶ – ಭಾಷೆಗೆ ಹೋಗುವಾಗ ಅನ್ವರ್ಥ ನಾಮದ ಅನುವಾದ ತಪ್ಪಾದರೆ ಏನಾಗುತ್ತೆ? ಆ ದೇವತೆಯ ಗುಣಲಕ್ಷಣಗಳೂ ಬದಲಾಗಿಬಿಡುತ್ತಾ!?
ಇದೊಂದು ಮಜವಾದ ಅನುಮಾನ ಬಂದಿದ್ದು ಬೋಧಿಸತ್ವ ಗುವಾನ್ ಯೀನ್ ಬಗ್ಗೆ ಓದಿಕೊಳ್ಳುವಾಗ.
ಗುವಾನ್ ಯೀನ್, ಅವಲೋಕಿತೇಶ್ವರ ಹೆಸರಿನ, ಸ್ತ್ರೈಣ ಆಕಾರ ಮತ್ತು ಸ್ತ್ರೀಲಿಂಗದಿಂದ ಗುರುತಾಗಿರುವ ಬೋಧಿಸತ್ವ. ಕರುಣೆ ಮತ್ತು ಸಹಾನುಭೂತಿ ಈ ದೇವತೆಯ ಗುಣಲಕ್ಷಣ. ಎಲ್ಲರನ್ನೂ ಕರುಣೆಯ ಕಣ್ಣುಗಳಿಂದ (ಅರೆತೆರೆದ ನಿಮೀಲಿತ ನೇತ್ರ) ನೋಡುವ ದೇವತೆಯಾದ್ದರಿಂದ ಈ ಬೋಧಿಸತ್ವದ ಹೆಸರು ಅವಲೋಕಿತೇಶ್ವರ. ಆದರೆ ಇದೇ ಅವಲೋಕಿತೇಶ್ವರ ಗಂಡು ರೂಪದಿಂದಲೂ ಪ್ರಚಲಿತ! ಅದೇ ನಿಮೀಲಿತ ನೇತ್ರ ಮತ್ತು ಅನ್ವರ್ಥ, ಆದರೆ ದೇಹ ಪುರುಷರೂಪಿ.
ಈ ಗೊಂದಲದ ಜಾಡು ಹಿಡಿದು ಹೊರಟಾಗ ತಲುಪಿದ್ದು ಅನುವಾದಕರನ್ನು.
ಭಾರತದಲ್ಲಿ ಪುರುಷನಾದ ಅವಲೋಕಿತೇಶ್ವರ ಬೋಧಿಸತ್ವ, ಬಹುತೇಕ ಪೂರ್ವ ಏಷ್ಯಾದಲ್ಲಿ, ಅದರಲ್ಲೂ ಮುಖ್ಯವಾಗಿ ಚೀನಾದಲ್ಲಿ ಹೆಣ್ಣು. ಮತ್ತು ಇದರ ಚೀನೀ ಹೆಸರು ಗುವಾನ್ ಶಿ ಯೀನ್. ಯಾರು ದುಃಖ ತುಂಬಿದ ದನಿ ಬಂದೆಡೆ (ಕರುಣೆಯಿಂದ) ನೋಡುತ್ತಾರೋ ಅವರು – ಅನ್ನುವುದು ಅಕ್ಷರಶಃ ಅರ್ಥ. ಯಾರು ಕಷ್ಟ ಹೇಳಿಕೊಂಡು ದುಃಖಿಸುತ್ತಾರೋ, ಆಕ್ರಂದನ ಮಾಡುತ್ತಾರೋ ಅವರನ್ನು ಕರುಣೆಯಿಂದ ಕಂಡು ಸಂತೈಸುವ ಬೋಧಿಸತ್ವ – ಗುವಾನ್ ಶಿ ಯೀನ್. (ಇದರ ಚುಟುಕು ರೂಪವೇ ಗುವಾನ್ ಯೀನ್)
ಮೊದಲ ಬಾರಿಗೆ ಈ ಬೋಧಿಸತ್ವದ ಹೆಸರನ್ನು ಚೀನಾಕ್ಕೆ ಪರಿಚಯಿಸಿದ್ದು ಕುಮಾರ ಜೀವನೆಂಬ ಬೌದ್ಧ ಬಿಕ್ಖು. ಮಹಾಯಾನ ಬೌದ್ಧ ಶಾಖೆಯ ಈತ ಬೌದ್ಧ ಪಠ್ಯಗಳನ್ನು ಸಂಸ್ಕೃತದಿಂದ ಅನುವಾದಿಸುವಾಗ ಅವಲೋಕಿತೇಶ್ವರ ಪದವನ್ನು ಅವಲೋಕಿತಸ್ವರ – (ಧ್ವನಿ ಬಂದೆಡೆ ನೋಡುವ) ಎಂದು ಪರಿಗಣಿಸಿ ಅನುವಾದ ಮಾಡಿದ್ದರಿಂದಲೇ ಈ ಬೋಧಿಸತ್ವ ಹೆಣ್ಣುರೂಪದ ಕಲ್ಪನೆಗೆ ಪುಷ್ಟಿ ನೀಡಿತೆಂದು ಒಂದು ಅಂದಾಜು. ಇಲ್ಲವಾದರೆ, ಅವಲೋಕಿತೇಶ್ವರದ (ಕರುಣಾ ದೃಷ್ಟಿ ಹರಿಸಿ ಕಾಪಾಡುವವ) ಈಶ್ವರ ಅನ್ನುವ ಪುರುಷವಾಚಕ ಶಬ್ದ ಪುರುಷರೂಪದ ಕಲ್ಪನೆಗೇ ಒತ್ತುಕೊಡುತ್ತಿತ್ತು ಅನ್ನುವುದು ವಿದ್ವಾಂಸರ ವಿವರಣೆ.
ಆದರೆ ಈ ಗೊಂದಲ ಗೌಜಿಯನ್ನೂ ಮೀರಿ ಚೀನಾ, ಕೊರಿಯಾ ಮತ್ತು ಜಪಾನ್ ಗಳಲ್ಲಿ ಗುವಾನ್ ಯೀನ್ ಹೆಣ್ಣು ಬೋಧಿಸತ್ವವೇ ಆಗಿ ಜನಪ್ರಿಯಗೊಂಡಿತು ಮತ್ತು ಅದರ ಸಂಸ್ಕೃತದ ಹೆಸರು ಅವಲೋಕಿತೇಶ್ವರ ಎಂದೇ ಉಳಿದುಹೋಯಿತು!
(ಈ ಚರ್ಚೆ ಇಲ್ಲಿ ಬರೆದಷ್ಟು ಸರಳವಿಲ್ಲ. ಈ ಬರಹ ಈ ಒಟ್ಟು ಸಂಗತಿಯ ತಿಳಿಯಾದ ಒಂದು ಎಳೆಯಷ್ಟೆ)

