ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬೇಚಾರ್ ನಗರದ ರಾಜನನ್ನು ಕಂಡರೆ ಪ್ರಜೆಗಳಿಗೆಲ್ಲ ಪ್ರೀತಿ ಇತ್ತು, ಗೌರವ ಇತ್ತು.
ಅತೀ ಬಡವನೊಬ್ಬ ಮಾತ್ರ ರಾಜನ ಬಗ್ಗೆ ಕಹಿಯಾದ ಮಾತು ಆಡುತಿದ್ದ. ರಾಜನನ್ನು ಬಾಯಿಗೆ ಬಂದ ಹಾಗೆ ಬೈಯುತಿದ್ದ.
ಆ ವಿಷಯ ರಾಜನಿಗೆ ಗೊತ್ತಿತ್ತು, ಸಹನೆಯಿಂದ ಸುಮ್ಮನೆ ಇದ್ದ.
ಚಳಿಗಾಲದಲ್ಲೊಂದು ಇರುಳಿನಲ್ಲಿ ರಾಜನ ಸೇವಕ ಅತೀ ಬಡವನ ಮನೆಗೆ ಬಂದ. ಒಂದು ಚೀಲ ಹಿಟ್ಟು, ಒಂದು ಚೀಲ ಸಕ್ಕರೆ, ಒಂದು ಚೀಲ ಸಾಬೂನು ತಂದಿದ್ದ-ನಮ್ಮ ರಾಜರು ಇವನ್ನೆಲ್ಲ ತಮಗೆ ನೆನಪಿನ ಕಾಣಿಕೆಯಾಗಿ ಕಳಿಸಿದಾರೆ-ಅಂದ.
ಬಡವ ಉಬ್ಬಿಹೋದ. ರಾಜ ನನಗೆ ಗೌರವ ತೋರುವುದಕ್ಕೆ ಕಾಣಿಕೆ ಕಳಿಸಿದಾನೆ ಅನ್ನಿಸಿ ಹೆಮ್ಮೆ ಪಟ್ಟ. ಬಿಷಪ್‍ನ ಹತ್ತಿರ ಹೋಗಿ ನಡೆದದ್ದನ್ನೆಲ್ಲಾ ಹೇಳಿದ-ನೋಡಿದಿರಾ, ನಾನು ಅವನ ಬಗ್ಗೆ ಪ್ರೀತಿ ತೋರಬೇಕು ಅನ್ನುವುದು ರಾಜನ ಆಸೆ.ಷ ನನ್ನ ಪ್ರೀತಿ ಗೌರವ ಬಯಸಿ ಈ ಕಾಣಿಕೆ ಕಳಿಸಿದಾನೆ-ಅಂದ.
ಬಿಷಪ್ ಆ ಮಾತು ಕೇಳಿ-ಅಯ್ಯಾ, ರಾಜಕುಮಾರ ಎಷ್ಟು ವಿವೇಕಿ! ನಿನಗೆ ಏನೂ ಅರ್ಥವಾಗಿಲ್ಲ. ರಾಜ ಸಂಕೇತಗಳನ್ನು ಬಳಸಿ ನಿನಗೆ ಸಂದೇಶ ಕಳಿಸಿದಾನೆ. ನಿನ್ನ ಹಸಿದ ಹೊಟ್ಟೆಗೆ ಹಿಟ್ಟು, ನಿನ್ನ ಕೊಳಕು ಮೈ ತೊಳಕೊಳ್ಳಲು ಸೋಪು, ಕಹಿ ಮಾತು ಆಡುವ ನಿನ್ನ ನಾಲಗೆಗೆ ಸಕ್ಕರೆ ಕಳಿಸಿದಾನೆ-ಅಂದ.
ಅವತ್ತಿನಿಂದ ಆ ಮನುಷ್ಯ ತನ್ನ ಬಗ್ಗೆಯೇ ಲಜ್ಜೆ ಅನುಭವಿಸುತಿದ್ದ. ರಾಜನ ಬಗ್ಗೆ ಇದ್ದ ದ್ವೇಷ ಹೆಚ್ಚಾಯಿತು. ರಾಜನ ಮನಸು ತಿಳಿಸಿ ಹೇಳಿದ ಬಿಷಪ್‍ನ ಮೇಲೆ ಇನ್ನೂ ಮಿಗಿಲಾದ ದ್ವೇಷ ಹುಟ್ಟಿತು.
ಅವತ್ತಿನಿಂದ ಮೌನವಾಗಿಬಿಟ್ಟ.

