ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಮೂರು ನಾಯಿ ಮಾತಾಡುತ್ತಾ ಬಿಸಿಲು ಕಾಯಿಸಿಕೊಂಡು ಕೂತಿದ್ದವು.
ಮೊದಲ ನಾಯಿ ಹೇಳಿತು-ಶ್ವಾನಸಾಮ್ರಾಜ್ಯದಲ್ಲಿ ನಾವು ಬದುಕಿದೇವೆ ಅನ್ನುವುದೇ ದೊಡ್ಡ ಬೆರಗು. ನಾವೆಲ್ಲ ಎಷ್ಟು ಆರಾಮವಾಗಿ ಕಡಲಮೇಲೆ, ಭೂಮಿ ಮೇಲೆ, ಆಕಾಶದಲ್ಲಿ ಕೂಡ ವಿಹಾರ ಮಾಡಬಹುದು ಅಲ್ಲವಾ! ನಮ್ಮ ಸುಖದ ಬದುಕಿಗೆ, ನಮ್ಮ ಕಣ್ಣು, ಮೂಗಿನ ಸುಖಕ್ಕೂ ಎಷ್ಟೊಂದು ಸಂಶೋಧನೆ ನಡೆದಿವೆ-ಅಂದಿತು.
ಎರಡನೆಯ ನಾಯಿ-ನಮ್ಮ ಕಲೆಗಳೂ ಅಭಿವೃದ್ಧಿಯಾಗಿವೆ. ಆಕಾಶದ ಚಂದ್ರನನ್ನು ನೋಡಿದರೆ ನಮ್ಮ ಹಿರೀಕರಿಗಿಂತ ಇನ್ನೂ ಲಯಬದ್ಧವಾಗಿ ಊಳಿಡುವುದನ್ನು ಕಲಿತಿದ್ದೇವೆ. ನೀರಲ್ಲಿ ನಮ್ಮ ಮುಖ ನೋಡಿದರೆ ನಿನ್ನೆಗಿಂತ ಇವತ್ತು ನಮ್ಮ ಎಲ್ಲಾ ಲಕ್ಷಣ ನಿಚ್ಚಳವಾಗಿ ಕಾಣತ್ತೆ-ಅಂದಿತು.
ಮೂರನೆಯ ನಾಯಿ ಹೇಳಿತು-ನನಗೆ ಕುತೂಹಲ ಹುಟ್ಟಿಸುವ ವಿಚಾರ, ನನಗೆ ಅರ್ಥವಾಗದ ವಿಚಾರ ಏನಪ್ಪಾ ಅಂದರೆ ಶ್ವಾನ ಸಾಮ್ರಾಜ್ಯದ ಎಲ್ಲಾ ನಾಯಿ ನಡುವೆ ಎಷ್ಟೊಂದು ಶಾಂತಿ ನೆಲೆಸಿದೆ, ಒಂದೊಂದು ನಾಯಿ ರಾಜ್ಯವೂ ಇನ್ನೊಂದು ನಾಯಿ ರಾಜ್ಯವನ್ನು ಅರ್ಥಮಾಡಿಕೊಂಡು ಬದುಕತಾ ಇದೆ-ಅಂದಿತು.
ಆ ಅದೇ ಕ್ಷಣದಲ್ಲಿ ನಾಯಿ ಹಿಡಿಯುವವರು ಬರತಾ ಇರುವುದು ಕಂಡಿತು.
ಮೂರೂ ನಾಯಿ ತಟ್ಟನೆದ್ದು ದಿಕ್ಕಾಪಾಲಾಗಿ ಓಡಿದವು.
ಓಡಿ, ಓಡಿ, ನಾಗರಿಕತೆ ನಮ್ಮ ಬೆನ್ನು ಹತ್ತಿ ಬರುತಿದೆ, ಓಡಿ ಓಡಿ! ಎಂದು ಕೂಗುತ್ತ ಬೀದಿ ಬೀದಿಯಲ್ಲಿ ಓಡಿತು ಮೂರನೆಯ ನಾಯಿ.

