ನಮಗೆ ಎಲ್ಲವೂ ಪ್ರಿಯವಾಗುವುದು ನಮ್ಮ ಸುಖಕ್ಕಾಗಿಯೇ! : ಅಧ್ಯಾತ್ಮ ಡೈರಿ

“ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ, ನಿನಗೋಸ್ಕರ ಏನೆಲ್ಲ ಮಾಡ್ತೀನಿ” ಅಂತ ಎತ್ತಿ ಆಡ್ತೀವಲ್ಲ, ಆ ಸಂದರ್ಭದಲ್ಲಿ ಯಾಜ್ಞವಲ್ಕ್ಯರ ಮಾತು ಹೆಚ್ಚು ಪ್ರಸ್ತುತ ಅನಿಸುತ್ತದೆ ಚೇತನಾ ತೀರ್ಥಹಳ್ಳಿ

“ಆತ್ಮನಸ್ತು ಕಾಮಾಯ ಸರ್ವ ಪ್ರಿಯಂ ಭವತಿ” | ಬೃಹದಾರಣ್ಯಕ ಉಪನಿಷತ್
ಅರ್ಥ: “ನಮಗೆ ಎಲ್ಲವೂ ಪ್ರಿಯವಾಗುವುದು ನಮ್ಮ ಸುಖಕ್ಕಾಗಿಯೇ”
ತಾತ್ಪರ್ಯ: ನಾವು ನಮ್ಮನ್ನು ಪ್ರೀತಿಸಿಕೊಳ್ಳುವುದರಿಂದ, ನಮ್ಮ ಸುಖಕ್ಕಾಗಿ ಉಳಿದೆಲ್ಲವನ್ನು ಪ್ರೀತಿಸುತ್ತೇವೆ

ಮಹರ್ಷಿ ಯಾಜ್ಞವಲ್ಕ್ಯರು ತಮ್ಮ ಹೆಂಡತಿ ಮೈತ್ರೇಯಿಗೆ ಹೇಳುವ ಮಾತುಗಳಿವು. ಈ ಸಂವಾದ ಬೃಹದಾರಣ್ಯಕ ಉಪನಿಷತ್ತಿನಲ್ಲಿ ದೊರೆಯುತ್ತದೆ. ಯಾಜ್ಞವಲ್ಕ್ಯರು ಸಂಸಾರ ತೊರೆದು ಹೊರಡುವಾಗ ತಮ್ಮ ಹೆಂದತಿಯರಾದ ಕಾತ್ಯಾಯನೀ ಮತ್ತು ಮೈತ್ರೇಯಿಯರ ಜೊತೆ ಸಂವಾದ ನಡೆಸುತ್ತಾರೆ. ಈ ಸಂದರ್ಭದಲ್ಲಿ ಮನುಷ್ಯ ಸ್ವಭಾವದ ಬಗ್ಗೆ ಹೇಳುತ್ತಾ, ಈ ಮೇಲಿನ ಮಾತುಗಳನ್ನು ಆಡುತ್ತಾರೆ.

“ಯಾರಿಗೇ ಆದರೂ ಹೆಂದತಿ, ಮಕ್ಕಳು, ಧನ ಸಂಪತ್ತು ಪ್ರಿಯವಾಗುವುದು, ಅವರು ಅವೆಲ್ಲವನ್ನೂ ಪ್ರೀತಿಸುವುದು ತಮ್ಮ ಮೇಲಿನ ಪ್ರೀತಿಯಿಂದಾಗಿಯೇ ಹೊರತು ಅವುಗಳ ಮೇಲಿನ ಬಯಕೆಯಿಂದಲ್ಲ. ತನಗೆ ಸುಖ – ಸಂತೋಷ ಸಿಗಲೆಂದು ನಾವು ಮತ್ತೊಬ್ಬರನ್ನು/ ಮತ್ತೊಂದನ್ನು ಪ್ರೀತಿಸುತ್ತೇವೆ. ನಮಗೆ ಸಂತೋಷ ಸಿಗುವುದಿಲ್ಲ ಎಂದಾದರೆ ನಾವು ಆ ವಸ್ತುವನ್ನು/ ವ್ಯಕ್ತಿಯನ್ನು ಪ್ರೀತಿಸಲು ಹೋಗುವುದಿಲ್ಲ” ಅನ್ನುವುದು ಈ ಶ್ಲೋಕದ ಒಟ್ಟು ತಾತ್ಪರ್ಯ.

ನಾವು ನಮಗೆ ದುಃಖ ಕೊಡುವ, ನಮ್ಮನ್ನು ನೋಯಿಸುವ ಯಾರನ್ನೂ ಪ್ರೀತಿಸಲಾರೆವು. ನಮಗೆ ಅಪಥ್ಯವಾಗುವ ಆಹಾರವನ್ನು ನಾವು ತಿನ್ನುತ್ತೇವೆಯೆ? ನಾಲಗೆಗೆ ರುಚಿ ಎನಿಸದೆ, ಕಹಿ ಅನಿಸುವ ಆಹಾರವನ್ನು ಇಷ್ಟ ಪಡುತ್ತೇವೆಯೆ? ನಮಗಿಷ್ಟ ಇಲ್ಲದ ಬಟ್ಟೆ ತೊಡುತ್ತೇವೆಯೆ? ನಮಗೆ ಇಷ್ಟವೆಂದೇ ನಾವು ರುಚಿಸುವ ಆಹಾರ ತಿನ್ನುವುದು. ನಮಗೆ ಸುಖ ಸಿಗುತ್ತದೆ, ಮನಸ್ಸಿಗೆ ಸಂತೋಷ ಸಿಗುತ್ತದೆ ಎಂದೇ ಮತ್ತೊಬ್ಬರನ್ನು ಪ್ರೀತಿಸುವುದು.

ಈ ತಿಳಿವು ಯಾಕೆ ಮುಖ್ಯವಾಗುತ್ತದೆ ಗೊತ್ತೆ? ನಾವು ಯಾರನ್ನಾದರೂ ಪ್ರೀತಿಸಿ “ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ, ನಿನಗೋಸ್ಕರ ಏನೆಲ್ಲ ಮಾಡ್ತೀನಿ” ಅಂತ ಎತ್ತಿ ಆಡ್ತೀವಲ್ಲ, ಆ ಸಂದರ್ಭದಲ್ಲಿ ಯಾಜ್ಞವಲ್ಕ್ಯರ ಮಾತು ಹೆಚ್ಚು ಪ್ರಸ್ತುತ ಅನಿಸುತ್ತದೆ. ಅದು ಯಾವುದೇ ಸಂಬಂಧವಿರಲಿ, ನಾವು ನಮ್ಮ ಪ್ರಿಯರಿಗೆ ಸಹಾಯ ಮಾಡುವುದು, ಸೇವೆ ಮಾಡುವುದು, ಉಡುಗೊರೆ ಕೊಡುವುದು ಅವರ ಸಂತೋಷ ಕಂಡು ನಮಗೆ ತೃಪ್ತಿಯಾಗುತ್ತದೆ ಅನ್ನುವ ಕಾರಣಕ್ಕಾಗಿ ಹೊರತು ಅವರಿಗೇನೋ ಉಪಕಾರ ಮಾಡ್ತೀವಿ ಎಂದಲ್ಲ. ಯಾರೇ ಆಗಲೀ ಮತ್ತೊಬ್ಬರನ್ನು ಪ್ರೀತಿಸುವುದು ಆ ಮತ್ತೊಬ್ಬರಿಗೆ ಮಾಡುವ ಉಪಕಾರವಲ್ಲ. ಅದು ನಮಗೆ ನಾವೆ ಮಾಡಿಕೊಳ್ಳುವ ಉಪಕಾರ. ಇಷ್ಟು ಅರ್ಥವಾದರೆ ನಮ್ಮ ಪ್ರೀತಿಗೆ ಮತ್ತೊಬ್ಬರು ನಮ್ಮ ನಿರೀಕ್ಷೆಯಂತೇ ಸ್ಪಂದಿಸಬೇಕು ಅನ್ನುವ ಹಠ ತೊಲಗುತ್ತದೆ. ಕೇವಲ ಪ್ರೀತಿಸುವ ಶುದ್ಧ ಸಂತೋಷ ನಮ್ಮ ಪಾಲಿಗೆ ಉಳಿಯುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.