ತ್ಯಜಿಸುವುದು ಎಂದರೆ ನಮ್ಮ ಮಾಲಿಕತ್ವದ ಬಗೆಗಿನ ತಪ್ಪು ಕಲ್ಪನೆಯನ್ನ ತ್ಯಜಿಸುವುದು. ಮಾಲಿಕತ್ವದ ಕಲ್ಪನೆಗೆ ಅಂಟಿಕೊಳ್ಳದಿರುವುದು… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಅರಮನೆಯಲ್ಲಿದ್ದರೂ ಅದಕ್ಕೆ ಅಂಟಿಕೊಳ್ಳದೇ ಇರಬಹುದು, ಆಗ ಅವನು ಸಂತ. ಇನ್ನೊಬ್ಬ ಗುಡಿಸಲಿನಲ್ಲಿದ್ದರೂ ಅವನು ಆ ಗುಡಿಸಲಿಗೆ ಅಂಟಿಕೊಂಡಿರಬಹುದು, ಆಗ ಅವನು ಸಂತ ಅಲ್ಲ ಲೋಭಿ.
ಆದ್ದರಿಂದಲೇ ಲೌಕಿಕವನ್ನು ತ್ಯಜಿಸಿಬಿಡುವಂತೆ ನಾನು ಯಾರಿಗೂ ಸಲಹೆ ನೀಡುವುದಿಲ್ಲ. ನಾನು ಹೇಳೋದು, “ಯಾವುದಕ್ಕೂ ಅಂಟಿಕೊಳ್ಳಬೇಡಿ, ಕೇವಲ ಸಾಕ್ಷಿಯಾಗಿರಿ” ಎಂದಷ್ಟೇ. ಇದು ಬುದ್ಧನ ಬೋಧನೆಯ ತಿರುಳು.
ಜನ ನನ್ನ ಕೇಳುತ್ತಾರೆ, “ಆದರೆ ಬುದ್ಧ ಜಗತ್ತಿನ ಐಹಿಕ ಭೋಗಗಳನ್ನು ತ್ಯಜಿಸಿದನಲ್ಲ, ಯಾಕೆ ತ್ಯಜಿಸಿದ ಹಾಗಾದರೆ?” ಹೌದು ಅವನು ಲೌಕಿಕವನ್ನು ತ್ಯಜಿಸಿದ ಆದರೆ ಆಗ ಅವನು ಬುದ್ಧ ಆಗಿರಲಿಲ್ಲ. ಹಾಗೆ ತ್ಯಜಿಸಿದಾಗ ಅವನು ಎಲ್ಲರಷ್ಟೇ ಅಜ್ಞಾನಿಯಾಗಿದ್ದ. ಬುದ್ಧ ಸಮಸ್ತವನ್ನೂ ತ್ಯಜಿಸಿದ್ದೂ ತನ್ನ ಅಜ್ಞಾನದಲ್ಲಿ. ಅವನು ಬುದ್ಧತ್ವವನ್ನು ತಲುಪಿ ಸತ್ಯವನ್ನು ಅನುಭವಿಸಿ ಮರಳಿ ಮನೆಗೆ ಬಂದಾಗ ಅವನ ಹೆಂಡತಿ ಅವನಿಗೆ ಒಂದು ಪ್ರಶ್ನೆ ಕೇಳುತ್ತಾಳೆ.
“ನನಗೆ ಒಂದು ವಿಷಯ ಹೇಳು. ನೀನು ಏನೋ ಒಂದು ಸಾಧನೆ ಮಾಡಿದ್ದೀಯ, ನೀನು ಈಗ ಸಂಪೂರ್ಣವಾಗಿ ಬದಲಾದ ಮನುಷ್ಯನ ಹಾಗೆ ಕಾಣಿಸುತ್ತಿದ್ದೀಯ. ನೀನು ಕಾಂತಿಯುಕ್ತ ವ್ಯಕ್ತಿಯಾಗಿದ್ದೀಯ, ನೀನು ಈಗ ಮೊದಲಿನ ಹಳೆಯ ಮನುಷ್ಯನಲ್ಲ. ಮತ್ತೆ ಹೊಸದಾಗಿ ಹುಟ್ಟಿಬಂದವನಂತೆ ಕಾಣಿಸುತ್ತಿದ್ದೀಯ. ಇದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನನ್ನಂಥ ಅಂಧಳಿಗೇ ಎಲ್ಲವೂ ಇಷ್ಟು ಸ್ಷಷ್ಟವಾಗಿ ಗೊತ್ತಾಗುತ್ತಿದೆ, ಆದರೆ ಒಂದು ವಿಷಯ ಹೇಳು. ನೀನು ಈಗ ಏನೇಲ್ಲವನ್ನೂ ಸಾಧಿಸಿದ್ದಿಯಲ್ಲ, ಅದನ್ನು ನನ್ನ ಜೊತೆ ಈ ಅರಮನೆಯಲ್ಲಿದ್ದುಕೊಂಡು ಸಾಧಿಸಿಕೊಳ್ಳಲು ನಿನಗೆ ಸಾಧ್ಯವಾಗುತ್ತಿರಲಿಲ್ಲವೆ? “
ಕತೆಯ ಪ್ರಕಾರ, ಬುದ್ಧ ಆಕೆಗೆ ಏನೂ ಉತ್ತರ ಹೇಳಲಿಲ್ಲ. ತಲೆ ಕೆಳಗೆ ಹಾಕಿಕೊಂಡು ಸುಮ್ಮನಾಗಿಬಿಟ್ಚ. ಹೆಂಡತಿ ಕೇಳಿದ ಪ್ರಶ್ನೆ ಸರಿಯಾಗಿತ್ತು. ಬುದ್ಧನಿಗೆ ತನ್ನ ತಪ್ಪು ಗೊತ್ತಾಯಿತು. ಅವನಿಗೆ ಉತ್ತರ ಕೊಡುವುದು ಸಾಧ್ಯವಾಗಲಿಲ್ಲ.
ಬುದ್ಧನಿಗೆ ತಕ್ಷಣ ಗೊತ್ತಾಯಿತು, ತಾನು ಈಗ ತಲುಪಿರುವ ಸ್ಥಿತಿಯನ್ನು ಎಲ್ಲಿ ಇದ್ದರೂ ತಲುಪಬಹುದುತ್ತು, ಈ ಅರಮನೆಯಲ್ಲಿ ಇದ್ದುಕೊಂಡು ಕೂಡ. ಮನೆ ಬಿಟ್ಟು ಅಲೆದಾಡುವ ಅವಶ್ಯಕತೆ ಇರಲಿಲ್ಲ. ಬುದ್ಧತ್ವವನ್ನು ತಲುಪಲಿಕ್ಕೆ ಇಂಥದೇ ಜಾಗ ಬೇಕು ಎನ್ನುವ ಯಾವ ಅವಶ್ಯಕತೆಯೂ ಇಲ್ಲ.
ತ್ಯಜಿಸುವುದು ಎಂದರೆ ನಮ್ಮ ಮಾಲಿಕತ್ವದ ಬಗೆಗಿನ ತಪ್ಪು ಕಲ್ಪನೆಯನ್ನ ತ್ಯಜಿಸುವುದು. ಮಾಲಿಕತ್ವದ ಕಲ್ಪನೆಗೆ ಅಂಟಿಕೊಳ್ಳದಿರುವುದು ಎಂದರೆ ತ್ಯಜಿಸುವುದು. ತ್ಯಜಿಸುವುದು ಎಂದರೆ ನಮ್ಮ ಬಳಿ ಇರುವುದನ್ನ ತ್ಯಜಿಸುವುದಲ್ಲ, ನಮಗೆ ಅದರೆ ಬಗ್ಗೆ ಇರುವ ಸ್ವಾಮ್ಯ ಭಾವವನ್ನ ( possessiveness) ತ್ಯಜಿಸುವುದು. ಸ್ವಾಮಿತ್ವ ಒಂದು ಭ್ರಮೆ ಏಕೆಂದರೆ ಶಾಶ್ವತತೆ (permanence) ಒಂದು ಭ್ರಮೆ.

