ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಬಿರ್ಕಾಶಾ ರಾಜ್ಯದ ರಾಜನ ಆಸ್ಥಾನಕ್ಕೆ ಅವತ್ತು ಒಬ್ಬ ನರ್ತಕಿ ಬಂದಳು. ಜೊತೆಯಲ್ಲಿ ಸಂಗೀತದವರು, ವಾದ್ಯದವರೂ ಇದ್ದರು. ಕೊಳಲು, ಝಿತರ್, ಹಾಡುಗಳ ಹಿಮ್ಮೇಳಕ್ಕೆ ನರ್ತಿಸಿದಳು.
ಬೆಂಕಿಯ ಜ್ವಾಲೆಯ ನರ್ತನ, ಖಡ್ಗ ಈಟಿಗಳ ನರ್ತನ, ನಕ್ಷತ್ರ, ಆಕಾಶ, ಬಯಲುಗಳ ನರ್ತನ, ಗಾಳಿಯಲ್ಲಾಡುವ ಹೂವುಗಳ ನರ್ತನ ಮಾಡಿ ತೋರಿದಳು. ರಾಜನ ಮುಂದೆ ಇಡೀ ಮೈ ಬಾಗಿಸಿ ವಂದಿಸಿದಳು.
ರಾಜ ಅವಳನ್ನು ಹತ್ತಿರಕ್ಕೆ ಕರೆದ.
ಚೆಲುವೇ, ಆನಂದ-ಲಾವಣ್ಯಗಳ ಮಗಳು ನೀನು. ನಿನ್ನ ಲಯದಲ್ಲಿ, ನಿನ್ನ ಚಲನೆಯಲ್ಲಿ ಗಾಳಿ ನೀರು ಬೆಂಕಿ ಆಕಾಶ ಭೂಮಿಯ ಅಂಶಗಳೆಲ್ಲ ಸೇರಿವೆಯಲ್ಲಾ ಹೇಗೆ ಬಂತು ಇಂಥ ಕಲೆ ನಿನಗೆ?-ಅಂತ ಕೇಳಿದ.
ನರ್ತಕಿ ಮತ್ತೆ ವಂದಿಸಿದಳು. ಆಮೇಲೆ ಹೇಳಿದಳು-ಪ್ರಭೂ, ನಿಮ್ಮ ಪ್ರಶ್ನೆಗೆ ಉತ್ತರ ತಿಳಿದಿಲ್ಲ. ನನಗೆ ಗೊತ್ತಿರುವುದು ಇಷ್ಟೇ. ತತ್ವ ತಿಳಿದವನ ಆತ್ಮ ಅವನ ತಲೆಯಲ್ಲಿ, ಕವಿಯ ಆತ್ಮ ಅವನ ಹೃದಯದಲ್ಲಿ, ಹಾಡುಗಾರನ ಆತ್ಮ ಅವನ ಕಂಠದಲ್ಲಿರುತ್ತದೆ. ನರ್ತಕಿಯ ಆತ್ಮ ಅವಳ ಇಡೀ ದೇಹದಲ್ಲಿರುತ್ತದೆ.

