ಬದುಕು ಎಷ್ಟು ಸುಂದರ, ಎಷ್ಟು ಅದ್ಭುತ, ಎಷ್ಟು ಹೊಸತು, ಎಷ್ಟು ವಿಲಕ್ಷಣ, ಮತ್ತು ಎಲ್ಲಕ್ಕಿಂತ ಹೆಚ್ಚಿನದಾಗಿ ನಿಮ್ಮ ಕನಸಿಗೆ ಸಾಧ್ಯವಾಗದ್ದು. ಹೌದು ಬದುಕು ನೀವು ಕಲ್ಪನೆ ಮಾಡಿಕೊಳ್ಳಬಹುದಾದ ಎಷ್ಟೋ ಸಾಹಸಗಳಿಗಿಂತ ಸಾಹಸಮಯ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗ ಎಲ್ಲವೂ ಅನಿರೀಕ್ಷಿತವಾಗಿ ಸಂಭವಿಸುತ್ತದೆಯೋ, ಸಂಪೂರ್ಣವಾಗಿ ಹೊಸದಾಗಿ ಸಂಭವಿಸುತ್ತದೆಯೋ ಅದು ನಿಮ್ಮ ಬದುಕಿಗೆ ತಾಜಾತನವನ್ನು ಕೊಡುತ್ತದೆ. ಆಗ ತಾಜಾ ತಂಗಾಳಿ ನಿರಂತರವಾಗಿ ಬೀಸುತ್ತ ನಿನ್ನ ಬದುಕಿನ ಮೇಲೆ ಯಾವುದೇ ಧೂಳು ಜಮಾವಣೆಯಾಗಲು ಅವಕಾಶ ನೀಡುವುದಿಲ್ಲ. ನೀವು ನಿಮ್ಮ ಬಾಗಿಲುಗಳನ್ನ, ಕಿಟಕಿಗಳನ್ನ ತೆರೆದು ಇಟ್ಟಾಗ, ಸೂರ್ಯನ ಬಿಸಿಲು ಒಳಗೆ ಬರುತ್ತದೆ, ತಾಜಾ ತಂಗಾಳಿ ಒಳಗೆ ಬರುತ್ತದೆ, ಹೂವುಗಳ ಪರಿಮಳ ಒಳಗೆ ಬರುತ್ತದೆ ; ಎಲ್ಲವೂ ಅನಿರೀಕ್ಷಿತ. ಇವು ಬೇಕೆಂದು ನೀವು ಕೇಳಿರಲಿಲ್ಲ ಆದರೆ ನೀವು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟಿರುವ ಕಾರಣವಾಗಿ ಅಸ್ತಿತ್ವ ಈ ಎಲ್ಲವುಗಳನ್ನು ನಿಮಗೆ ದಯಪಾಲಿಸುತ್ತ ಹೋಗುತ್ತದೆ.
ಬದುಕು ಎಷ್ಟು ಸುಂದರ, ಎಷ್ಟು ಅದ್ಭುತ, ಎಷ್ಟು ಹೊಸತು, ಎಷ್ಟು ವಿಲಕ್ಷಣ, ಮತ್ತು ಎಲ್ಲಕ್ಕಿಂತ ಹೆಚ್ಚಿನದಾಗಿ ನಿಮ್ಮ ಕನಸಿಗೆ ಸಾಧ್ಯವಾಗದ್ದು. ಹೌದು ಬದುಕು ನೀವು ಕಲ್ಪನೆ ಮಾಡಿಕೊಳ್ಳಬಹುದಾದ ಎಷ್ಟೋ ಸಾಹಸಗಳಿಗಿಂತ ಸಾಹಸಮಯ.
ನಿಮ್ಮೊಳಗೆ ನಿರೀಕ್ಷೆಗಳು ಇವೆಯಾದರೆ ಅವು ಬದುಕನ್ನ ನಾಶ ಮಾಡುತ್ತವೆ. ಹಿಂದಿನದನ್ನ ಡ್ರಾಪ್ ಮಾಡಿಬಿಡಿ, ಅದು ಪ್ರತಿ ಗಳಿಗೆ ಸಾಯುವ ರೀತಿ. ಭವಿಷ್ಯಕ್ಕಾಗಿ ಯಾವತ್ತೂ ಪ್ಲಾನ್ ಮಾಡಬೇಡಿ ; ಇದು ಬದುಕು ನಿಮ್ಮ ಮೂಲಕ ಹರಿಯಲು ನೀವು ಅವಕಾಶ ಮಾಡಿಕೊಡುವ ರೀತಿ. ಆಗ ನೀವು ಮರಗಟ್ಟದ ಸ್ಥಿತಿಯಲ್ಲಿ (unfrozen state) ಸದಾ ಹರಿಯುತ್ತಾ ಇರುತ್ತೀರ. ಧ್ಯಾನಿ ಬದುಕುವುದು ಹೀಗೆ, ಹಿಂದಿನದರ ಭಿಡೆ ಇಲ್ಲದೆ, ಮುಂದಿನದರ ನಿರೀಕ್ಷೆಗಳು ಇಲ್ಲದೆ, ಸದ್ಯದ ಗಳಿಗೆಯಲ್ಲಿ ಪೂರ್ಣವಾಗಿ ಬದುಕುತ್ತ, ತೀವ್ರವಾಗಿ ಬದುಕುತ್ತ, ಎರಡು ಬದಿಗಳಿಂದ ಉರಿಯುತ್ತಿರುವ ಜ್ವಾಲೆಯಂತೆ, ಎರಡೂ ತುದಿಗಳಿಂದ ಬೆಳಕು ಕೊಡುತ್ತಿರುವ ಟಾರ್ಚ್ ನಂತೆ. Let go ಎಂದರೆ ಇದು.
ಒಂದು ದಿನ ಒಬ್ಬ ಪ್ರಯಾಣಿಕ ಬೆಟ್ಟ ಗುಡ್ಡಗಳ ಮೂಲಕ ಹಾಯ್ದು ಹೋಗುವಾಗ, ವೃದ್ಧ ಸನ್ಯಾಸಿಯೊಬ್ಬ ಬಾದಾಮಿ ಗಿಡದ ಸಸಿ ನೆಡುತ್ತಿರುವುದನ್ನು ಗಮನಿಸಿದ. ಬಾದಾಮಿ ಸಸಿ ಬೆಳೆದು ಫಲ ನೀಡಲು ಸಾಕಷ್ಟು ವರ್ಷಗಳಾಗುತ್ತದೆ ಎನ್ನುವುದನ್ನು ಬಲ್ಲ ಪ್ರಯಾಣಿಕ, ವೃದ್ಧನನ್ನು ಪ್ರಶ್ನಿಸಿದ.
“ಇಷ್ಟು ನಿಧಾನವಾಗಿ ಬೆಳೆಯುವ ಮರವನ್ನು ಯಾಕೆ ಬೆಳೆಸುತ್ತಿದ್ದೀಯಾ? ನಿನ್ನ ಆಯಸ್ಸು ಇನ್ನು ಎರಡು ಮೂರು ವರ್ಷವೂ ಇದ್ದ ಹಾಗಿಲ್ಲ”
ವೃದ್ಧ ಸನ್ಯಾಸಿ ಉತ್ತರಿಸಿದ.
“ಬದುಕಲು ನನಗೆ ಎರಡು ಸಿದ್ಧಾಂತಗಳಿವೆ.
ಒಂದು, ನನ್ನ ಬದುಕು ಶಾಶ್ವತ. ಮತ್ತು
ಎರಡನೇಯದು, ಇವತ್ತು ನನ್ನ ಬದುಕಿನ ಕೊನೆಯ ದಿನ”.

