ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಮೂರು ರಸ್ತೆ ಕೂಡುವ ಬಯಲಿನಲ್ಲಿ ಬಡಪಾಯಿ ಕವಿ, ಮೂರ್ಖ ಶ್ರೀಮಂತ ಭೇಟಿಯಾದರು. ಹಾಗೇ ಮಾತಾಡುತ್ತಾ ಇಬ್ಬರೂ ಅವರವರ ಮನಸಿನ ಅತೃಪ್ತಿ ಹೇಳಿಕೊಂಡರು.
ದಾರಿಗಳ ದೇವತೆ ಅಲ್ಲೇ ಹಾದು ಹೋಗುತಿದ್ದವಳು ಅವರ ಮಾತು ಕೇಳಿ ಇಬ್ಬರ ಭುಜದ ಮೇಲೂ ಕೈ ಇಟ್ಟಳು.
ಎಂಥಾ ಪವಾಡ! ಇಬ್ಬರ ಸಂಪತ್ತೂ ಅದಲು ಬದಲಾಗಿದ್ದವು!
ಕವಿ, ಶ್ರೀಮಂತ ಅವರವರ ದಾರಿ ಹಿಡಿದು ಸಾಗಿದರು. ವಿಚಿತ್ರವೇನು ಅಂದರೆ, ಕವಿ ತನ್ನ ತಾನು ನೋಡಿಕೊಂಡರೆ ಕೈಯಲ್ಲಿ ಒಂದಷ್ಟು ಉಸುಕು ಬಿಟ್ಟರೆ ಇನ್ನೇನೂ ಇರಲಿಲ್ಲ. ಶ್ರೀಮಂತ ಕಣ್ಣು ಮುಚ್ಚಿದರೆ ಎದೆಯೊಳಗೆ ತೇಲುವ ಮೋಡ ಬಿಟ್ಟರೆ ಬೇರೇನೂ ಕಾಣಲಿಲ್ಲ.

