ಕಾಯಿಲೆ ಮತ್ತು ಆರೋಗ್ಯ – ಒಂದೇ ಸಂಗತಿಯ ಎರಡು ಭಾಗಗಳು

ಮನುಷ್ಯನಿಗೆ ಜ್ವರ ಬಂದಿದೆಯೆಂದರೆ, ನಿಮ್ಮ ಆರೋಗ್ಯವನ್ನು ರಕ್ಷಿಸುವ ಪ್ರಯತ್ನದಲ್ಲಿ ದೇಹದ ಟೆಂಪರೇಚರ್ ಸ್ವಲ್ಪ ಜಾಸ್ತಿ ಆಗಿದೆ ಅಷ್ಟೇ. ದೇಹ ನಿಮ್ಮ ಆರೋಗ್ಯಕ್ಕಾಗಿ ಟಫ್ ಫೈಟ್ ಮಾಡುತ್ತಿದೆ ಮತ್ತು ಈ ಪ್ರಯತ್ನದಲ್ಲಿ ಆಯಾಸಗೊಂಡಿದೆ ಎಂದು ಅರ್ಥ. ಅಸ್ತಿತ್ವದಲ್ಲಿ ಕಾಯಿಲೆ ಮತ್ತು ಉತ್ತಮ ಆರೋಗ್ಯ ಒಂದೇ ಸಂಗತಿಯ ಎರಡು ಭಾಗಗಳು ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

‘ಚೆಲುವು’ ಎಂದು ತೀರ್ಮಾನಿಸಿದಾಗಲೇ
ಹುಟ್ಟಿಕೊಂಡದ್ದು ಕುರೂಪ.
‘ಒಳ್ಳೆಯದು’ ಎಂದು ಹೆಸರಿಟ್ಟಾಗಲೇ
ಕೆಡುಕಿನ ನಾಮಕರಣ ಕೂಡ.

ಇರುವುದು ಮತ್ತು ಇರದಿರುವುದು
ಹುಟ್ಟಿಸುತ್ತವೆ ಒಂದನ್ನೊಂದು.
ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು.
ದೂರ – ಸಮೀಪ
ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು.
ಆಳ ಮತ್ತು ಎತ್ತರ
ಸವಾರಿ ಮಾಡುತ್ತವೆ, ಒಂದರ ಮೇಲೊಂದು.
ಭೂತ ಮತ್ತು ಭವಿಷ್ಯ
ಹಿಂಬಾಲಿಸುತ್ತವೆ, ಒಂದನ್ನೊಂದು.

ಆದ್ದರಿಂದಲೇ ಸಂತನ ಕೆಲಸದಲ್ಲಿ
ದುಡಿಮೆ ಇಲ್ಲ,
ಕಲಿಸುವಿಕೆಯಲ್ಲಿ ಮಾತಿಲ್ಲ.
ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ
ಹೆಣ ಹೊರುವಲ್ಲಿಯೂ,
ತಾಯಿಯಾಗಲೊಲ್ಲ, ಕವಿಯಾಗಲೊಲ್ಲ,
ಬೀಜ ಬಿತ್ತಿ, ಪಾತಿ ಮಾಡಿ, ನೀರು ಉಣಿಸಿ
ಸುಮ್ಮನಾಗುತ್ತಾನೆ.
ಅಂತೆಯೇ ತಾವೋ ಅನನ್ಯ, ಅವಿನಾಶಿ.

~ ಲಾವೋತ್ಸೇ


ಲಾವೋತ್ಸೇ ಯ ಪ್ರಕಾರ ಭೂಮಿಯ ಮೇಲೆ ವಿರುದ್ಧ ಶಕ್ತಿಗಳು (ಅಪೋಸಿಂಗ್ ಫೋರ್ಸಸ್ ) ಎನ್ನುವುದು ಇಲ್ಲ. ಆದರೆ ಅವು ಹಾಗೆ ಕಾಣಿಸಿಕೊಳ್ಳುತ್ತವೆ ಮಾತ್ರ. ಕಾಯಿಲೆ, ಆರೋಗ್ಯಕ್ಕೆ ವಿರುದ್ಧ ಅಲ್ಲ. ನಾವು ವೈದ್ಯಕೀಯ ಶಾಸ್ತ್ರವನ್ನು ಕೇಳಿದರೆ ಅಲ್ಲಿ ಕಾಯಿಲೆ, ಆರೋಗ್ಯಕ್ಕೆ ವಿರುದ್ಧ ಅಲ್ಲ, ಬದಲಾಗಿ ಕಾಯಿಲೆ ಆರೋಗ್ಯದ ಭಾಗ. ನಮಗೆ ಕಾಯಿಲೆ ಬರಬೇಕಾದರೆ ಮೊದಲು ನಾವು ಆರೋಗ್ಯವಂತರಾಗಿರಬೇಕು. ನಾವು ಆರೋಗ್ಯವಂತರಾಗಿರದಿದ್ದರೆ ನಮಗೆ ಕಾಯಿಲೆ ಬರುವುದು ಸಾಧ್ಯವಿಲ್ಲ. ಆದ್ದರಿಂದಲೇ ಸತ್ತ ಮನುಷ್ಯನಿಗೆ ಕಾಯಿಲೆ ಬರುವುದಿಲ್ಲ. ಆದ್ದರಿಂದ ಒಂದು ನಿರ್ದಿಷ್ಟ ವಯಸ್ಸು ಆದ ಮೇಲೆ ಸಾವು ಕಠಿಣವಾಗುತ್ತದೆ. ಮನುಷ್ಯ ಸಾಯಲಿಕ್ಕೆ ಬೇಕಾಗುವಷ್ಟು ಕೂಡ ಉತ್ತಮ ಆರೋಗ್ಯವನ್ನು ಹೊಂದಿರದಿದ್ದರೆ, ಪರಿಸ್ಥಿತಿ ತುಂಬ ಕಠಿಣವಾಗುತ್ತದೆ. 80-90 ವರ್ಷ ವಯಸ್ಸಿನ ನಂತರ ಸಾವು ಕೂಡ ಅಂಬೆಗಾಲು ಇಡುತ್ತ ಬರುತ್ತದೆ.

ಲ್ಯೂಕ್ ಮನ್ ಹೇಳುವ ಪ್ರಕಾರ, ಮನುಷ್ಯನಿಗೆ ಒಮ್ಮೆಯೂ ಕಾಯಿಲೆ ಬಂದಿರದಿದ್ದರೆ, ಅವನು ಮೊದಲ ಕಾಯಿಲೆಯಲ್ಲಿಯೇ ತೀರಿಕೊಳ್ಳುತ್ತಾನೆ. ಅವನು ಎಷ್ಟು ಜೀವಂತವಾಗಿದ್ದಾನೆಂದರೆ ಮೊದಲ ಕಾಯಿಲೆಯೇ ಅವನನ್ನು ಕೊಂದುಬಿಡುತ್ತದೆ. ಬಹಳಷ್ಟು ಕಾಯಿಲೆಗಳನ್ನು ಅನುಭವಿಸಿದ ಮನುಷ್ಯ ಅಷ್ಟು ಸುಲಭವಾಗಿ ಸಾಯುವುದಿಲ್ಲ. ತಕ್ಷಣ ಸಾಯಲು ಅವನು ಅಪ್ರತಿಮ ಆರೋಗ್ಯವಂತನಾಗಿರಬೇಕು.

ಇದು ಬಹಳ ದ್ವಂದ್ವಾತ್ಮಕ ಅನಿಸಬಹುದು. ನಾವು ಕಾಯಿಲೆಯನ್ನ ಆರೋಗ್ಯಕ್ಕೆ ವಿರುದ್ಧವಾಗಿ ನೋಡುತ್ತೇವೆ. ಆದರೆ ನಾವು ಒಳಗನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಾಯಿಲೆ, ನಮ್ಮ ಆರೋಗ್ಯದ ರಕ್ಷಣೆಯ ಒಂದು ಕಾರಣವಾಗಿರುತ್ತದೆ. ನಮ್ಮ ಆರೋಗ್ಯವನ್ನು ರಕ್ಷಿಸಲು ನಮ್ಮ ದೇಹ ತೆಗೆದುಕೊಳ್ಳುವ ಕಠಿಣ ಕ್ರಮಗಳನ್ನೇ ನಾವು ಕಾಯಿಲೆ ಎಂದು ಗುರುತಿಸುತ್ತೇವೆ. ಮನುಷ್ಯನಿಗೆ ಜ್ವರ ಬಂದಿದೆಯೆಂದರೆ, ನಿಮ್ಮ ಆರೋಗ್ಯವನ್ನು ರಕ್ಷಿಸುವ ಪ್ರಯತ್ನದಲ್ಲಿ ದೇಹದ ಟೆಂಪರೇಚರ್ ಸ್ವಲ್ಪ ಜಾಸ್ತಿ ಆಗಿದೆ ಅಷ್ಟೇ. ದೇಹ ನಿಮ್ಮ ಆರೋಗ್ಯಕ್ಕಾಗಿ ಟಫ್ ಫೈಟ್ ಮಾಡುತ್ತಿದೆ ಮತ್ತು ಈ ಪ್ರಯತ್ನದಲ್ಲಿ ಆಯಾಸಗೊಂಡಿದೆ ಎಂದು ಅರ್ಥ. ಅಸ್ತಿತ್ವದಲ್ಲಿ ಕಾಯಿಲೆ ಮತ್ತು ಉತ್ತಮ ಆರೋಗ್ಯ ಒಂದೇ ಸಂಗತಿಯ ಎರಡು ಭಾಗಗಳು.

ಲಾವೋತ್ಸೇ ಯ ಪ್ರಕಾರ, ಎಲ್ಲ ದ್ವಂದ್ವಗಳು, ಎಲ್ಲ ವೈರುಧ್ಯಗಳು ವಾಸ್ತವದಲ್ಲಿ ಹಾಗೆ ಅಲ್ಲ. ಮನುಷ್ಯ ತನಗೆ ಅಪಮಾನವಾಗಬಾರದೆಂದು ಬಯಸುತ್ತಾನಾದರೆ, ಅವನಿಗೆ ಗೊತ್ತಿರಬೇಕು ಅವನಿಗೆ ಗೌರವವೂ ಸಿಗುವುದಿಲ್ಲ ಎನ್ನುವುದು. ಯಾರು ಗೌರವವನ್ನು ನಿರೀಕ್ಷಿಸುತ್ತಿದ್ದಾರೋ ಅವರು ಅಪಮಾನಗಳಿಗೂ ಸಿದ್ಧರಾಗಿರಬೇಕು. ಹಲವು ಅಪಮಾನಗಳನ್ನು ಅನುಭವಿಸಿದವ ಮಾತ್ರ ಗೌರವಕ್ಕೂ ಅರ್ಹನಾಗುತ್ತಾನೆ. ಆದ್ದರಿಂದಲೆ ಲಾವೋತ್ಸೇ ಹೇಳುತ್ತಾನೆ,

“ಯಾರು ಅಪಮಾನವನ್ನು ಬಯಸುವುದಿಲ್ಲವೋ ಅವರು ಗೌರವವನ್ನೂ ಬಯಸುವ ಹಾಗಿಲ್ಲ. ಆಗ ಮಾತ್ರ ಅವನಿಗೆ ಅಪಮಾನವಾಗುವುದಿಲ್ಲ”.


Source: Osho / The Way Of The Tao/Volume: /Chapter: 6

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.