ನಿಮಗೆ ಇನ್ನೊಬ್ಬರ ಜೊತೆಯನ್ನು ಸಂಬಂಧದ ಮಟ್ಟಕ್ಕೆ ಇಳಿಸದೆ, ನೀವು ಅವರಿಗೆ ಕೇವಲ ರಿಲೇಟ್ ಆಗುವುದು ಸಾಧ್ಯವಾಗುವುದಾದರೆ, ಆಗ ಆ ಇನ್ನೊಬ್ಬರು ನಿಮಗೆ ಕನ್ನಡಿಯಾಗುತ್ತಾರೆ. ಅವರನ್ನು ಶೋಧಿಸುವ ಮೂಲಕ, ನಿಮಗೇ ಗೊತ್ತಿಲ್ಲದಂತೆ ನೀವು ನಿಮ್ಮನ್ನೂ ಶೋಧಿಸಿಕೊಳ್ಳುತ್ತೀರಿ. ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಕ್ಕೆ ತನ್ನ ಖ್ಯಾತಿಯ ಬಗ್ಗೆ
ಅಂಥ ಕಾಳಜಿ ಏನಿಲ್ಲ,
ಬರುವಾಗ ಹರಿತ ಚೂರಿಯೊಂದಿಗೆ
ಬರುತ್ತದೆಯೇ ಹೊರತು
ಸಂಕೋಚದ ಪ್ರಶ್ನೆಗಳ ಜೊತೆಗಲ್ಲ.
ಈ ಮಾತುಗಳನ್ನ ಹೇಳಿ
ನಿಮ್ಮನ್ನು ಬೆಚ್ಚಿ ಬೀಳಿಸಬೇಕು ಎನ್ನುವ
ಯಾವ ಆಸಕ್ತಿಯೂ ನನಗಿಲ್ಲ,
ದಯವಿಟ್ಟು ಅಂತಃಕರಣದಿಂದ
ಒಪ್ಪಿಸಿಕೊಳ್ಳಿ.
ಬೆತ್ತಲಾಗಿ, ವಿಷ ಕುಡಿದು,
ಈಗ ತಣ್ಣಗೆ ಸರ್ವನಾಶಕ್ಕೆ ಸಿದ್ಧವಾಗಿ,
ತನ್ನ ಹುಚ್ಚು ಯೋಜನೆಗಳನ್ನು
ಕಾರ್ಯರೂಪಕ್ಕೆ ತರಲು
ಎಲ್ಲ ತಂತ್ರಗಳನ್ನೂ ಬಳಸುತ್ತಿದೆ
ಚಾಣಾಕ್ಷ ಉನ್ಮಾದಿ ಪ್ರೇಮ.
ಪುಟ್ಟ ಜೇಡ
ಭಯಂಕರ ಚೇಳನ್ನು ಕಟ್ಟಿ ಹಾಕುತ್ತದೆ.
ಪ್ರವಾದಿ ಮಲಗಿದ ಗುಹೆಯ ಸುತ್ತ ಹೆಣೆಯಲಾದ
ಜೇಡರ ಬಲೆಯನ್ನು ನೆನಪಿಸಿಕೊಳ್ಳಿ.
ಪ್ರೇಮದಲ್ಲಿ ಹೇಗೆ
ಮುದ ನೀಡುವ ಕಥೆಗಳಿವೆಯೋ
ಹಾಗೆಯೇ ಗುರುತು ಕೂಡ ಇರದಂತೆ
ಒರೆಸಿ ಹಾಕುವ ಅನಾಹುತಗಳೂ ಉಂಟು.
ಒದ್ದೆಯಾಗಬಾರದೆಂದು
ಧರಿಸಿದ ಅರಿವೆಗಳನ್ನು
ಮೊಣ ಕಾಲವರೆಗೆ ಎತ್ತಿಕೊಂಡು
ಸಮುದ್ರದ ತೀರದಲ್ಲಿ ಪ್ರಯಾಣ ಮಾಡುತ್ತಿದ್ದೀರಿ.
ಆಳಕ್ಕೆ ಧುಮುಕಬೇಕು ನೀವು
ಸಾವಿರ ಪಟ್ಟು ಆಳಕ್ಕೆ.
~ ರೂಮಿ
ನಿಮ್ಮ ಮಧುಚಂದ್ರ ಮುಂದುವರೆಯಲಿ………
ಇನ್ನೊಬ್ಬರನ್ನು ಯಾವಾಗಲೂ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳಬೇಡಿ. ಅವರಿಗೆ ರಿಲೇಟ್ ಆಗಿ, ಮತ್ತೆ ಮತ್ತೆ ರಿಲೇಟ್ ಆಗಿ, ಮತ್ತೆ ಹೊಸದಾಗಿ ಶುರು ಮಾಡಿ. ರಿಲೇಟಿಂಗ್ ಎಂದರೆ, ಯಾವಾಗಲೂ ನೀವು ಹೊಸದಾಗಿ ಶುರು ಮಾಡುತ್ತಿದ್ದೀರಿ, ನೀವು ನಿರಂತರವಾಗಿ ಹೊಂದಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀರಿ. ಮತ್ತೆ ಮತ್ತೆ ನೀವು ಪರಸ್ಪರರಿಗೆ ಪರಿಚಯ ಮಾಡಿಕೊಳ್ಳುತ್ತಿದ್ದೀರಿ. ನೀವು ಇನ್ನೊಬ್ಬರ ವ್ಯಕ್ತಿತ್ವದ ಹಲವಾರು ಮುಖಗಳನ್ನು ಗುರುತು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ನೀವು ಆ ಇನ್ನೊಬ್ಬರ ಅಂತರಂಗದ ಭಾವನೆಗಳನ್ನು , ಅವರ ವ್ಯಕ್ತಿತ್ವದ ಖಾಲಿಯನ್ನು ಆಳವಾಗಿ ಇನ್ನೂ ಆಳವಾಗಿ ಪೆನಿಟ್ರೇಟ್ ಮಾಡಲು ಪ್ರಯತ್ನ ಮಾಡುತ್ತಿದ್ದೀರಿ. ಯಾವ ನಿಗೂಢವನ್ನು ಅನಾವರಣ ಮಾಡುವುದು ಸಾಧ್ಯವಿಲ್ಲವೋ ಆ ನಿಗೂಢವನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತಿದ್ದೀರಿ.
ಇದು ಪ್ರೀತಿ ಸಾಧ್ಯಮಾಡುವ ಆನಂದ : ಪ್ರಜ್ಞೆಯ ಶೋಧಿಸುವಿಕೆ. ನಿಮಗೆ ಇನ್ನೊಬ್ಬರ ಜೊತೆಯನ್ನು ಸಂಬಂಧದ ಮಟ್ಟಕ್ಕೆ ಇಳಿಸದೆ, ನೀವು ಅವರಿಗೆ ಕೇವಲ ರಿಲೇಟ್ ಆಗುವುದು ಸಾಧ್ಯವಾಗುವುದಾದರೆ, ಆಗ ಆ ಇನ್ನೊಬ್ಬರು ನಿಮಗೆ ಕನ್ನಡಿಯಾಗುತ್ತಾರೆ. ಅವರನ್ನು ಶೋಧಿಸುವ ಮೂಲಕ, ನಿಮಗೇ ಗೊತ್ತಿಲ್ಲದಂತೆ ನೀವು ನಿಮ್ಮನ್ನೂ ಶೋಧಿಸಿಕೊಳ್ಳುತ್ತೀರಿ. ಇನ್ನೊಬ್ಬರನ್ನು ಆಳವಾಗಿ ಪ್ರವೇಶಿಸುವ ಮೂಲಕ, ಅವರ ಭಾವನೆಗಳನ್ನ, ಅವರ ವಿಚಾರಗಳನ್ನ, ಅವರ ಆಳದ ಹೊಯ್ದಾಟಗಳನ್ನ ಅರ್ಥಮಾಡಿಕೊಳ್ಳುವ ಮೂಲಕ, ನೀವು ನಿಮ್ಮ ಆಳದ ಹೊಯ್ದಾಟಗಳಿಗೂ ಅರ್ಥ ಕಂಡುಕೊಳ್ಳುತ್ತೀರಿ. ಆಗ ಪ್ರೇಮಿಗಳು ಪರಸ್ಪರರಿಗೆ ಕನ್ನಡಿಯಾಗುತ್ತಾರೆ ಮತ್ತು ಪ್ರೇಮ ಅವರ ಧ್ಯಾನವಾಗುತ್ತದೆ.
ನಿಮ್ಮ ಮಧುಚಂದ್ರ ನಿರಂತರವಾಗಿ ಮುಂದುವರೆಯುತ್ತಲಿರಲಿ. ಒಬ್ಬರೊನ್ನೊಬ್ಬರು ಹುಡುಕುವ, ತಲುಪುವ ನಿಮ್ಮ ಪ್ರಯತ್ನ ಸದಾ ಮುಂದುವರೆಯಲಿ, ಪ್ರೇಮಿಸುವ ಹೊಸ ಹೊಸ ವಿಧಾನಗಳನ್ನು ಹುಡುಕುತ್ತ, ಪರಸ್ಪರರ ಜೊತೆ ಇರುವ ಹೊಸ ಹೊಸ ರೀತಿಗಳನ್ನ ಶೋಧಿಸುತ್ತ. ಪ್ರತಿ ವ್ಯಕ್ತಿಯೂ ಅಗಣಿತ, ಅಕ್ಷಯ, ಅಗ್ರಾಹ್ಯ ರಹಸ್ಯಗಳನ್ನು ಒಳಗೊಂಡ ವಿಶಿಷ್ಟರು. ನಿಮಗೆ ಎಂದೂ “ಅವಳು ನನಗೆ ಪೂರ್ತಿ ಗೊತ್ತು” ಅಥವಾ “ಅವನ ಬಗ್ಗೆ ನನಗೆ ಎಲ್ಲ ಗೊತ್ತು” ಎಂದು ಹೇಳುವುದು ಸಾಧ್ಯವಾಗುವುದಿಲ್ಲ. ಜಾಸ್ತಿ ಜಾಸ್ತಿ ನೀವು ಏನು ಹೇಳಬಹುದೆಂದರೆ, “ನನಗೆ ಸಾಧ್ಯವಾದ ಎಲ್ಲ ಪ್ರಯತ್ನವನ್ನೂ ಮಾಡಿದೆ ಆದರೂ ರಹಸ್ಯ, ಇನ್ನೂ ನಿಗೂಢವಾಗಿಯೇ ಇದೆ”.
ಇನ್ನೂ ಮುಂದುವರೆದು ಹೇಳಬಹುದಾದರೆ, ನಿಮಗೆ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೆಚ್ಚು ಹೆಚ್ಚು ಗೊತ್ತಾದಷ್ಟು, ಆ ವ್ಯಕ್ತಿ ಇನ್ನೂ ನಿಗೂಢವಾಗುತ್ತ ಹೋಗುತ್ತಾರೆ. ಆಗ ಪ್ರೇಮ ಒಂದು ನಿರಂತರ ಸಾಹಸದ ಸಂಗತಿ.
Source: Osho / The Book of Wisdom

