ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಹುಣ್ಣಿಮೆಯ ಚಂದ್ರ ನೆತ್ತಿಯ ಮೇಲಿದ್ದ
ಊರ ನಾಯಿಗಳೆಲ್ಲ ತಲೆ ಎತ್ತಿ ಊಳಿಡುತಿದ್ದವು
ಒಂದು ಮಾತ್ರ ಸುಮ್ಮನಿತ್ತು
ಗಂಭೀರವಾದ ದನಿಯಲ್ಲಿ ಮಿಕ್ಕವನ್ನು ಗದರಿಸಿತು
ಮೌನ ಮಲಗಿದೆ
ಊಳಿಟ್ಟು ಮೌನವನ್ನ ಎಬ್ಬಿಸಬೇಡಿ
ಕೂಗಾಡಿ ಊಳಿಟ್ಟು ಚಂದ್ರನನ್ನ ಭೂಮಿಗೆ ಇಳಿಸಬೇಡಿ ಅಂದಿತು
ನಾಯಿಗಳೆಲ್ಲ ಸುಮ್ಮನಾದವು
ಭಯವಾಗುವಂಥ ಮೌನ
ಮಿಕ್ಕ ನಾಯಿಗಳನ್ನು ಗದರಿಸಿದ್ದ ನಾಯಿಗೆ ಮೌನ ಅರಿವಾಗಲೇ ಇಲ್ಲ
ರಾತ್ರಿ ಇಡೀ ಊಳಿಡುತ್ತಲೇ ಇತ್ತು

