ಯಾರು ಕೇವಲ ಬೌದ್ಧಿಕ ಝೆನ್ ನ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೋ ಅವರಿಗೆ ಈ ದಿಕ್ಕಿನಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ. ಧ್ಯಾನ ಮಾಡುವಾಗಲೂ ಅವರು ತಮ್ಮ ಸಿದ್ಧಾಂತಗಳ ಹೊರೆಯನ್ನು ಹೊತ್ತುಕೊಂಡಿರುತ್ತಾರೆ. ಅವರು ತಮ್ಮ ಜಾಣತನದ ಐಡಿಯಾಗಳನ್ನು ಪ್ರೊಜೆಕ್ಟ್ ಮಾಡಿಕೊಳ್ಳುತ್ತ ತಮ್ಮ ದಾರಿಗೆ ತಾವೇ ಅಡ್ಡಗಾಲಾಗಿರುತ್ತಾರೆ ~ Zen Master Kusan Sunim, ‘The Way of Korean Zen’ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ಪ್ರಸಿದ್ಧ ಹೇಳಿಕೆ ಇದೆ, “ ಜಾಣರಿಗೆ ಮತ್ತು ಲೌಕಿಕ ಜ್ಞಾನದಲ್ಲಿ ಪಾರಂಗತರಾದವರಿಗೆ ಬೌದ್ಧ ಧರ್ಮ ವನ್ನು ಆಚರಿಸುವುದು ಕಷ್ಟವಾಗುತ್ತದೆ”.
ಝೆನ್ ನ ಪ್ರ್ಯಾಕ್ಟೀಸ್ ಮಾಡುತ್ತಿರುವ ಬಹಳಷ್ಟು ಜನ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರು ಕೇವಲ ಪರಿಕಲ್ಪನೆಗಳ ಮೂಲಕ ಝೆನ್ ತಿಳುವಳಿಕೆಯನ್ನ ಅರಿಯುವ ಪ್ರಯತ್ನ ಮಾಡುತ್ತಾರೆ. ಅವರು ತಮ್ಮ ಆಲೋಚನೆಗಳ ಪ್ರಕಾರವೇ ವಾಸ್ತವ ಇದೆಯೆಂದು ಒತ್ತಾಯ ಮಾಡುತ್ತಾರೆ.
ಆದರೆ ಇಂಥ ಲೌಕಿಕ ಜಾಣತನ, ಸತ್ಯವನ್ನು ಬೇರೆ ಮಾಡಿಬಿಡುತ್ತದೆ. ತಂತ್ರ ಮತ್ತು ಊಹೆಗಳು ಕೇವಲ ಜಾಣತನವನ್ನ ಸೃಷ್ಟಿಸುತ್ತವೆ. ಇಂಥ ಬೌದ್ಧಿಕತೆಯಿಂದ ಹೊರತಾಗದ ಹೊರತು ಬುದ್ಧ ಧರ್ಮವನ್ನು ಆಚರಿಸುವುದು ಕಷ್ಟಸಾಧ್ಯವಾಗುತ್ತದೆ.
ಈ ಕಾರಣವಾಗಿಯೇ ಯಾರು ಕೇವಲ ಬೌದ್ಧಿಕ ಝೆನ್ ನ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೋ ಅವರಿಗೆ ಈ ದಿಕ್ಕಿನಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ. ಧ್ಯಾನ ಮಾಡುವಾಗಲೂ ಅವರು ತಮ್ಮ ಸಿದ್ಧಾಂತಗಳ ಹೊರೆಯನ್ನು ಹೊತ್ತುಕೊಂಡಿರುತ್ತಾರೆ. ಅವರು ತಮ್ಮ ಜಾಣತನದ ಐಡಿಯಾಗಳನ್ನು ಪ್ರೊಜೆಕ್ಟ್ ಮಾಡಿಕೊಳ್ಳುತ್ತ ತಮ್ಮ ದಾರಿಗೆ ತಾವೇ ಅಡ್ಡಗಾಲಾಗಿರುತ್ತಾರೆ.
ಎಲ್ಲ ಸಿಧ್ಧಾಂತಗಳನ್ನ, ಎಲ್ಲ ಪರಿಕಲ್ಪನೆಗಳನ್ನ ಒಂದೇ ಬಾರಿ ನಿರಾಕರಿಸಿದಾಗ ಮಾತ್ರ ನಿಮಗೆ ಯಾವ ಅಡೆತಡೆಯಿಲ್ಲದಂತೆ ಝೆನ್ ನ ಪ್ರ್ಯಾಕ್ಟೀಸ್ ಸಾಧ್ಯವಾಗುತ್ತದೆ. ಹೇಗೆ ಮೋಡಗಳು ಸೂರ್ಯನ ಬೆಳಕಿಗೆ ಅಡೆತಡೆಯಾಗಿರುತ್ತವೋ ಹಾಗೆ, ಸಿದ್ಧಾಂತಗಳು, ಪರಿಕಲ್ಪನೆಗಳು ನಿಮ್ಮ ಮೂಲ ಸ್ವಭಾವದ ಪ್ರಖರ ಬೆಳಕು ಹೊಳೆಯಲು ಅಡ್ಡಿ ಮಾಡುತ್ತಿರುತ್ತವೆ.
ಸಾವನ್ನು ಎದುರು ನೋಡ್ತಾ ಇರೋ ಝೆನ್ ಮಾಸ್ಟರ್, ತನ್ನ ಶಿಷ್ಯರನ್ನು ಎದುರು ಕೂರಿಸಿಕೊಂಡು ಒಂದು ಕೊನೆಯ ಮಾತು ಹೇಳೋದು ಝೆನ್’ಲ್ಲಿ ಒಂದು ಬಹು ಮುಖ್ಯ ಸಂಪ್ರದಾಯ. ಹೀಗೆ ಝೆನ್ ಮಾಸ್ಟರ್’ಗಳು ಹೇಳಿದ ಕೊನೆಯ ಮಾತುಗಳನ್ನ, ಪದ್ಯಗಳನ್ನ, ಝೆನ್ ವಿದ್ಯಾರ್ಥಿಗಳು ತುಂಬ ಆಸಕ್ತಿಯಿಂದ ಅಧ್ಯಯನ ಮಾಡುತ್ತಾರೆ.
ಝೆನ್ ಮಾಸ್ಟರ್ ಬಾಂಕಿ ಸಾವಿನ ಹಾಸಿಗೆಯಲ್ಲಿದ್ದ. ಅವನ ಶಿಷ್ಯರೆಲ್ಲ ಬಾಂಕಿಯ ಸುತ್ತ ನೆರೆದಿದ್ದರು. ಸಾವಿಗೂ ಮೊದಲು ಕೊನೆಯದಾಗಿ ಒಂದು ಜ್ಞಾನದ ಮಾತು ಹೇಳುವಂತೆ ಹಿರಿಯ ಶಿಷ್ಯ, ಮಾಸ್ಟರ್ ಬಾಂಕಿಯನ್ನು ಕೇಳಿಕೊಂಡ.
ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಿದ ಬಾಂಕಿ ಕೊನೆಯದಾಗಿ ಮಾತನಾಡಿದ,
“ ಸಾಯಲು ನನಗೆ ಭಯವಾಗುತ್ತಿದೆ “
ಈ ಮಾತು ಹೇಳಿತ್ತಿದ್ದಂತೆಯೇ ಬಾಂಕಿ, ಕೊನೆಯ ಉಸಿರೆಳೆದ.
ಈ ಮಾತು ಕೇಳುತ್ತಿದ್ದಂತೆಯೇ ಸುತ್ತ ಸೇರಿದ್ದ ಶಿಷ್ಯರಿಗೆಲ್ಲ ಆಶ್ಚರ್ಯ, ಆಘಾತ ಆಯಿತು. ಆಗ ಅಲ್ಲಿಗೆ ಬಂದ ಇನ್ನೊಬ್ಬ ಝೆನ್ ಮಾಸ್ಟರ್ ಗೆ, ಶಿಷ್ಯರು ಪ್ರಶ್ನೆ ಮಾಡಿದರು.
“ಮಾಸ್ಟರ್ ಬಾಂಕಿಗೆ ಜ್ಞಾನೋದಯವಾಗಿದ್ದರೆ, ಅವನು ಈ ಥರ ಉತ್ತರ ಕೊಡುತ್ತಿರಲಿಲ್ಲ ಅಲ್ಲವೆ? “
ಮಾಸ್ಟರ್ ಗದ್ಗದಿತನಾಗಿ ಉತ್ತರ ಕೊಟ್ಟ.
“ಬಾಂಕಿಯ ಉತ್ತರ ಕೇಳಿದ ಮೇಲೆ ನನಗಂತೂ ಒಂದು ವಿಷಯ ಸ್ಪಷ್ಚವಾಯಿತು, ಬಾಂಕಿಗೆ ನಿಜವಾಗಿಯೂ ಜ್ಞಾನೋದಯವಾಗಿತ್ತು. ಏಕೆಂದರೆ ಝೆನ್’ಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ಜ್ಞಾನವೆಂದರೆ ಅದು ಪ್ರಾಮಾಣಿಕತೆ”

