ಖಲೀಲ್ ಗಿಬ್ರಾನನ ಕತೆಗಳು #19 : ಅನ್ವೇಷಣೆ

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಸಾವಿರ ವರ್ಷದ ಹಿಂದೆ ಲೆಬನಾನ್ ಬೆಟ್ಟದ ಇಳಿಜಾರಿನಲ್ಲಿ ಇಬ್ಬರು ತತ್ವಶಾಸ್ತ್ರಿಗಳು ಭೇಟಿಯಾದರು
ಎತ್ತ ಹೊರಟಿರಿ ಎಂದು ಒಬ್ಬರನ್ನೊಬ್ಬರು ಕೇಳಿದರು

ಈ ಬೆಟ್ಟದಲ್ಲೇ ಎಲ್ಲೋ ಚಿರ ಯೌವನದ ಚಿಲುಮೆ ಇದೆ
ಅದನ್ನ ಹುಡುಕುತಿದ್ದೇನೆ
ಎಳೆ ಬಿಸಿಲಲ್ಲಿ ಚಿಮ್ಮಿ ಹರಿಯುವುದು ಅನ್ನುವುದನ್ನ ಪುಸ್ತಕಗಳಲ್ಲಿ ಬರೆದಿದ್ದಾರೆ
ನೀವೇನು ಇತ್ತ ಬಂದದ್ದು ಅಂತ ಒಬ್ಬ ಇನ್ನೊಬ್ಬನನ್ನು ಕೇಳಿದ

ಸಾವಿನ ನಿಗೂಢತೆಯನ್ನು ಅರಿಯಲು ತಪಸು ಮಾಡಲೆಂದು ಬಂದಿದೇನೆ ಅಂದ ಇನ್ನೊಬ್ಬನು
ತತ್ವ ಅರಿಯದ ಮೂಢ
ಆಧ್ಯಾತ್ಮವ ಕಾಣದ ಕುರುಡ
ಎಂದು ಒಬ್ಬರು ಇನ್ನೊಬ್ಬರ ಬಗ್ಗೆ ಅಂದುಕೊಂಡು

ನಿಮ್ಮ ಅನ್ವೇಷಣೆ ವ್ಯರ್ಥ
ನಿಮ್ಮ ಅನ್ವೇಷಣೆ ವ್ಯರ್ಥ ಅನ್ನುವ ಜಗಳಕ್ಕೇ ಇಳಿದರು

ಬೆಟ್ಟದ ಮೇಲಿದ್ದ ಊರಿನವನೊಬ್ಬ ಅತ್ತ ಬರುತಿದ್ದ
ಅವನೂರಿನ ಬಲು ದೊಡ್ಡ ಮೂರ್ಖನೆಂಬ ಖ್ಯಾತಿ ಅವನಿಗಿತ್ತು
ಹಾಗೇ ನಿಂತು ತತ್ವಶಾಸ್ತ್ರಿಗಳ ಜಗಳಕ್ಕೆ ಕಿವಿಕೊಟ್ಟ

ಅವರ ಹತ್ತಿರಕ್ಕೆ ಬಂದು ಹೇಳಿದ
ಸ್ವಾಮೀ, ನೀವಿಬ್ಬರೂ ಹುಡುಕುತಿರುವುದು ಒಂದೇ ಅನಿಸತ್ತೆ
ಒಂದೇ ವಿಷಯವನ್ನ ಬೇರೆ ಮಾತಿನಲ್ಲಿ ಹೇಳುತಿದೀರಿ
ಒಬ್ಬರಿಗೆ ಚಿರ ಯೌವನದ ಚಿಲುಮೆ ಬೇಕು
ಇನ್ನೊಬ್ಬರಿಗೆ ಸಾವಿನ ರಹಸ್ಯ ತಿಳಿಯಬೇಕು
ಎರಡೂ ಒಂದೇನೇ
ಎರಡೂ ನಿಮ್ಮೊಳಗೇ ಇವೆ ಅಂದ
ಮೆಲುವಾಗಿ ನಕ್ಕು ಹೊರಟು ಹೋದ

ತತ್ವಶಾಸ್ತ್ರಿಗಳು ಮೌನವಾದರು. ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರಿಗೂ ನಗು ಬಂದು ನಕ್ಕರು. ‘ಒಟ್ಟಿಗೆ ನಡೆಯೋಣ, ಒಟ್ಟಿಗೆ ಹುಡುಕೋಣ, ಒಟ್ಟಿಗೆ ತಿಳಿಯೋಣ, ಅಂದರು ಇಬ್ಬರೂ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.