ಇಲ್ಲಿ ಬಾತುಕೋಳಿ ನಿಮ್ಮ ಪ್ರಜ್ಞೆಗೆ, ನಿಮ್ಮ ಮುಕ್ತ ಚೈತನ್ಯಕ್ಕೆ, ನಿಮ್ಮ ಅತ್ಯಂತಿಕ ಸತ್ಯಕ್ಕೆ ರೂಪಕವಾದರೆ, ಬಾಟಲಿ ನಿಮ್ಮ ಮೈಂಡ್ ನ ಸಂಕೇತ. .. ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಅಧಿಕಾರಿ ರಿಕೋ , ಝೆನ್ ಮಾಸ್ಟರ್ ನ್ಯಾನ್ ಸೆನ್ ನ ಈ ಪ್ರಸಿದ್ಧ ಸಮಸ್ಯೆಯ ಬಗ್ಗೆ ವಿವರಿಸುವಂತೆ ಕೇಳಿಕೊಂಡ.
“ಒಂದು ಬಾತುಕೋಳಿಯ ಮರಿಯನ್ನ ಬಾಟಲಿಯಲ್ಲಿ ಹಾಕಿ, ಅಲ್ಲಿಯೇ ಅದನ್ನು ಪೋಷಿಸಿ, ಅದು ಪೂರ್ತಿ ದೊಡ್ಡದಾದ ಮೇಲೆ ಅದನ್ನು ಬಾಟಲಿಯಿಂದ ಹೊರಗೆ ತೆಗೆಯುವುದು ಹೇಗೆ? ಬಾತುಕೋಳಿಗೂ ಏನೂ ಆಗಬಾರದು, ಬಾಟಲಿಯೂ ಒಡೆಯಬಾರದು”.
ಮಾಸ್ಟರ್ ನ್ಯಾನ್ ಸೆನ್ ಒಮ್ಮೆ ಜೋರಾಗಿ ಚಪ್ಪಾಳೆ ಬಾರಿಸಿ ಕೂಗಿದ, “ರಿಕೋ”
“ಯಸ್ ಮಾಸ್ಟರ್?”
“ನೋಡು ಬಾತುಕೋಳಿ ಬಾಟಲಿಯಿಂದ ಹೊರಬಂತು”
ಇಲ್ಲಿ ಬಾತುಕೋಳಿ ನಿಮ್ಮ ಪ್ರಜ್ಞೆಗೆ, ನಿಮ್ಮ ಮುಕ್ತ ಚೈತನ್ಯಕ್ಕೆ, ನಿಮ್ಮ ಅತ್ಯಂತಿಕ ಸತ್ಯಕ್ಕೆ ರೂಪಕವಾದರೆ, ಬಾಟಲಿ ನಿಮ್ಮ ಮೈಂಡ್ ನ ಸಂಕೇತ. ಬೇರೆ ಮಾತುಗಳಲ್ಲಿ ಹೇಳುವುದಾದರೆ ನಿಮ್ಮ ಪ್ರಜ್ಞೆ ನಿಮ್ಮ ಮೈಂಡ್ ನ ಮಾನಸಿಕ ರಚನೆಯೊಳಗೆ ಸಿಕ್ಕಿಹಾಕಿಕೊಂಡಿದೆ. ಮತ್ತು ನಿಮಗೆ ಶುದ್ಧ ಪ್ರಜ್ಞೆಯ, ಶುದ್ಧ ಧ್ಯಾನದ, ಶುದ್ಧ ಬಿಡುಗಡೆಯ ಆತ್ಯಂತಿಕ ಸ್ವಾತಂತ್ರ್ಯದ ಅನುಭವ ಆಗಬೇಕಾದರೆ ಈ ಸಮಸ್ಯೆಗೆ ಒಂದು ಒಳ್ಳೆಯ ಉತ್ತರವನ್ನು ಕಂಡುಕೊಳ್ಳಬೇಕು.
ರಿಕೋ “ಯಸ್ ಮಾಸ್ಟರ್” ಎಂದಾಗ
ಅವನ ಪ್ರಜ್ಞೆ ಯಾವ ಲೇಯರ್ ಗಳಿಲ್ಲದೆ ಶುದ್ಧವಾಗಿತ್ತು. ಆ ಕ್ಷಣದಲ್ಲಿ ರಿಕೋ ದೇಹವಾಗಿರಲಿಲ್ಲ. ಆ ಕ್ಷಣದಲ್ಲಿ ರಿಕೋ ಮೈಂಡ್ ಆಗಿರಲಿಲ್ಲ. ಆ ಕ್ಷಣದಲ್ಲಿ ರಿಕೋ ಕೇವಲ ಅರಿವು ಆಗಿದ್ದ. ಆ ಕ್ಷಣದಲ್ಲಿ ರಿಕೋ ಗೆ ಯಾವ ನೆನಪುಗಳಿರಲಿಲ್ಲ, ಯಾವ ನಿರೀಕ್ಷೆಗಳಿರಲಿಲ್ಲ. ಆ ಕ್ಷಣದಲ್ಲಿ ರಿಕೋ ಗೆ ಯಾವುದರೊಂದಿಗೂ ಹೋಲಿಕೆಗಳಿರಲಿಲ್ಲ.
ಮಾಸ್ಟರ್ ನ್ಯಾನ್ ಸೆನ್ “ರಿಕೋ” ಎಂದು ಕೂಗಿದ ಕ್ಷಣದಲ್ಲಿ, ಅವನು ಸಹಜ ಅರಿವು ಆಗಿದ್ದ, ಯಾವ ಕಂಟೆಂಟ್ ಇಲ್ಲದೇ ಯಾವ ಕಂಡೀಷನಿಂಗ್ ಇಲ್ಲದೆ. ಆ ಗಳಿಗೆಯಲ್ಲಿ ಅವನು ಯಂಗ್ ಆಗಿರಲಿಲ್ಲ ಅವನು ಓಲ್ಡ್ ಕೂಡ ಆಗಿರಲಿಲ್ಲ, ಅವನು ಸುಂದರನೂ ಆಗಿರಲಿಲ್ಲ, ಕುರೂಪಿಯೂ ಆಗಿರಲಿಲ್ಲ. ಆ ಗಳಿಗೆಯಲ್ಲಿ ಅವನು ಜಾಣನೂ ಆಗಿರಲ್ಲ ಮೂರ್ಖನೂ ಆಗಿರಲಿಲ್ಲ. ಎಲ್ಲ ಲೇಯರ್ ಗಳು ಮಾಯವಾಗಿದ್ದವು. ಅವನು ಕೇವಲ ಅರಿವಿನ ಜ್ವಾಲೆಯಾಗಿದ್ದ.
ಝೆನ್ ನಿತ್ಯ ಬದುಕಿನ ತಾರ್ಕಿಕತೆಯನ್ನ ತಮಾಷೆ ಮಾಡುತ್ತದೆ. ಸಮಸ್ಯೆಯನ್ನು ಪರಿಹರಿಸಲು ನಾವು ಮೈಂಡ್ ನ ತರ್ಕವನ್ನು ಅವಲಂಬಿಸಿದರೆ, ಯಾವ ಪರಿಹಾರವೂ ದೊರಕುವುದಿಲ್ಲ. ಬದಲಿಗೆ ಆ ಬಾತುಕೋಳಿಯನ್ನು ಬಾಟಲಿಯೊಳಗೆ ಹಾಕಿದ್ದು, ನಮ್ಮ ಮೈಂಡ್ ತಾನೇ! ಆಗ ಅದನ್ನು ಹಾಕಿ ಈಗ ಹೊರಗೆ ತೆಗಿ ಎನ್ನುವ ಸಮಸ್ಯೆಗೆ ಉತ್ತರ ಹೇಗೆ ಕಂಡುಹಿಡಿಯುವುದು? ಬಾಟಲಿಯಲ್ಲಿ ಬಾತುಕೋಳಿಯನ್ನು ಹಾಕದಿದ್ದರಾಯಿತು ಅಷ್ಟೇ.
ಮೈಂಡ್ ನಿಂದ ಯಾವ ಧ್ಯಾನ ಸಾಧ್ಯವಾಗುವುದಿಲ್ಲ. ಮೈಂಡ್ ನ ಅನುಪಸ್ಥಿತಿಯೇ ಧ್ಯಾನ. ಯಾನಾಗ ಮೈಂಡ್ ಸ್ಟಾಪ್ ಆಗುತ್ತದೆಯೋ ಅದು ಧ್ಯಾನ. ಧ್ಯಾನ ಸಂಭವಿಸುವುದು ಮೈಂಡ್ ನ ಹೊರಗೆ ಅಲ್ಲ, ಮೈಂಡ್ ನ ಮೀರಿ ಆಚೆಗೆ.

