ಬುದ್ಧತ್ವ ಎನ್ನುವುದು ಅಲ್ಲಿ ಎಲ್ಲೋ ದೂರ ಇರುವ, ಸಾಧನೆ ಮಾಡಿದಾಗ ಮಾತ್ರ ನಿಮಗೆ ಸಿಗುವ ಸಂಗತಿಯಲ್ಲ. YOU ARE IT! ಬುದ್ಧನಾಗಲೂ ಎಲ್ಲಿಗೂ ಹೋಗಬೇಕಿಲ್ಲ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
“ನಾನು ಬುದ್ಧ ಆಗಬೇಕು, ಸಹಾಯ ಮಾಡುತ್ತೀರ?”
ಒಮ್ಮೆ ಒಬ್ಬ ವ್ಯಕ್ತಿ ಝೆನ್ ಮಾಸ್ಟರ್ ನ ಕೇಳಿಕೊಂಡಾಗ, ಮಾಸ್ಟರ್ ನ ಕೋಪ ನೆತ್ತಿಗೇರಿ, ಅವನು ಆ ವ್ಯಕ್ತಿಯ ಕಪಾಳಕ್ಕೆ ಜೋರಾಗಿ ಬಾರಿಸಿದ.
ಮಾಸ್ಟರ್ ನ ವರ್ತನೆಯಿಂದ ಆ ವ್ಯಕ್ತಿ ತಬ್ಬಿಬ್ಬಾದ ಮತ್ತು ಈ ಬಗ್ಗೆ ಮಾಸ್ಚರ್ ನ ಹಿರಿಯ ಶಿಷ್ಯನ ಬಳಿ ಹೋಗಿ ಸಮಜಾಯಿಷಿ ಕೇಳಿದ.
“ಎಂಥ ಒರಟು ಮನುಷ್ಯ ಇವ? ನಾನು ಒಂದು ಸರಳ ಪ್ರಶ್ನೆ ಕೇಳಿದೆ. ಅಂಥ ಕೋಪ ಮಾಡಿಕೊಳ್ಳುವಷ್ಟು ಏನಾಗಿತ್ತು ಇವನಿಗೆ? ಎಷ್ಟು ಜೋರಾಗಿ ನನ್ನ ಕಪಾಳಕ್ಕೆ ಹೊಡೆದ, ಬುದ್ಧ ಆಗಬೇಕೆನ್ನುವುದು ಅಂಥ ಅಪರಾಧವಾ?”
ಆ ವ್ಯಕ್ತಿಯ ಮಾತಿಗೆ ಮಾಸ್ಟರ್ ನ ಶಿಷ್ಯ ಜೋರಾಗಿ ನಕ್ಕುಬಿಟ್ಟ, “ನಿನಗೆ ನನ್ನ ಮಾಸ್ಟರ್ ನ ಅಂತಃಕರಣ ಅರ್ಥ ಆಗಲಿಲ್ಲ. ಈ ಅಂತಃಕರಣದ ಕಾರಣವಾಗಿಯೇ ಅವನು ನಿನ್ನ ಕಪಾಳಕ್ಕೆ ಅಷ್ಟು ಜೋರಾಗಿ ಹೊಡೆದಿರೋದು. ಮಾಸ್ಟರ್ ಗೆ ಈಗ ತೊಂಭತ್ತು ವರ್ಷ ವಯಸ್ಸು. ನಿನ್ನ ಕಪಾಳಕ್ಕೆ ಆಗಿರುವ ನೋವಿಗಿಂತ ಅವನ ಕೈಗೆ ಹೆಚ್ಚು ನೋವಾಗಿದೆ. ನೀನಿನ್ನೂ ಯುವಕ, ಅವನ ಅಂತಃಕರಣ ಅರ್ಥ ಮಾಡಿಕೋ. ವಾಪಸ್ ಹೋಗು ಮೂರ್ಖ”
“ ಸರಿ, ಆದರೆ ನನ್ನ ತಪ್ಪು ಏನು? ಅದನ್ನಾದರೂ ಹೇಳು”. ಆ ವ್ಯಕ್ತಿ, ಶಿಷ್ಯನನ್ನು ಬೇಡಿಕೊಂಡ.
“ಅರ್ಥ ಬಹಳ ಸರಳ. ಸಾಕ್ಷಾತ್ ಬುದ್ಧನೇ ಬಂದು ನಾನು ಬುದ್ಧ ಆಗಬೇಕು ಸಹಾಯ ಮಾಡ್ತೀಯ ಅಂದ್ರೆ ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ? ಮಾಸ್ಟರ್ ನಿನ್ನ ಕಪಾಳಕ್ಕೆ ಹೊಡೆಯದೇ ಬೇರೆ ಏನು ಮಾಡಬೇಕಿತ್ತು? ಎಂಥ ಮೂರ್ಖತನದ ಪ್ರಶ್ನೆ ಇದು? ಗುಲಾಬಿ, ಗುಲಾಬಿ ಆಗಲು ಪ್ರಯತ್ನಿಸುವುದು ಎಂಥ ವ್ಯರ್ಥ ಪ್ರಯತ್ನ, ಅದು ಈಗಾಗಲೇ ಗುಲಾಬಿ, ಮತ್ತೆ ಗುಲಾಬಿ ಯಾಗುವ ಬಯಕೆ ಎಂತ? ಹಾಗೆಯೇ ನೀನು ಈಗಾಗಲೇ ಬುದ್ಧ , ಮತ್ತೆ ಬುದ್ಧ ಆಗಬೇಕು ಎನ್ನುವುದು ಎಂಥ ಹುಚ್ಚುತನ? ಝೆನ್ ಪ್ರಕಾರ, ನೀನು ನಿದ್ದೆಯಲ್ಲಿರುವ ಮನುಷ್ಯ. ನೀನು ಯಾರೆನ್ನುವುದು ನಿನಗೆ ಮರೆತು ಹೋಗಿದೆ ಅಷ್ಟೇ. ನೀನು ಏನೂ ಮಾಡಬೇಕಿಲ್ಲ, ಕೇವಲ ನೀನು ಯಾರು ಎನ್ನುವುದನ್ನ ನೆನಪು ಮಾಡಿಕೋ ಸಾಕು.”
ಮಾಸ್ಟರ್ ನ ಶಿಷ್ಯ, ಆ ವ್ಯಕ್ತಿಗೆ ತಿಳಿಸಿ ಹೇಳಿದ.
ಬುದ್ಧತ್ವ ಎನ್ನುವುದು ಅಲ್ಲಿ ಎಲ್ಲೋ ದೂರ ಇರುವ, ಸಾಧನೆ ಮಾಡಿದಾಗ ಮಾತ್ರ ನಿಮಗೆ ಸಿಗುವ ಸಂಗತಿಯಲ್ಲ. YOU ARE IT! ಬುದ್ಧನಾಗಲೂ ಎಲ್ಲಿಗೂ ಹೋಗಬೇಕಿಲ್ಲ. ನಿಮ್ಮ ಬಗ್ಗೆ ನೀವು ಅರಿವು ಬೆಳಸಿಕೊಂಡರೆ ಸಾಕು. ಆಗಬೇಕಿರುವುದು ಏನೂ ಇಲ್ಲ, ಈಗಾಗಲೇ ನೀವು ಬುದ್ಧ. ಮರೆತುಹೋಗಿರುವುದನ್ನ ನೆನಪು ಮಾಡಿಕೊಳ್ಳುವುದಷ್ಟೇ ನಿಮ್ಮ ಕೆಲಸ.
ಇದನ್ನೇ ನಾನಕ ಹೇಳಿದ್ದು ಸುರತಿ ಎಂದು, ಇದನ್ನೇ ಕಬೀರ ಹೇಳಿದ್ದು ಸುರತಿ ಎಂದು. ಕೇವಲ ನೆನಪಿಸಿಕೊಳ್ಳುವುದು. ನೀವು ಯಾರು ಎನ್ನುವುದನ್ನ ನೆನಪಿಸಿಕೊಳ್ಳುವುದು.
Source: Osho / Zen: The Path of Paradox, Vol 3

