ಹೆಸರಿನಲ್ಲಿ, ಭಾಷೆಯಲ್ಲೂ ಜಾತಿ ಧರ್ಮಗಳನ್ನು ಹುಡುಕುವುದು ಒಂದು ವ್ಯಸನ. ಇತ್ತೀಚಿನ ದಶಕಗಳಲ್ಲಿ ಒಂದು ನಿರ್ದಿಷ್ಟ ಭಾಷೆಯೊಡನೆ ಗುರುತಿಸಲಾಗುವ ಉರ್ದು, ನಿಜಕ್ಕೂ ಯಾವ ಜಾತಿಗೆ ಸೇರಿದ್ದು? ಈ ಚರ್ಚೆಗೆ ಕವಿ ಜಾವೇದ್ ಅಖ್ತರ್ ಪ್ರತಿಕ್ರಿಯಿಸಿದ್ದು ಹೀಗೆ… । ಕನ್ನಡಕ್ಕೆ: ಚಿದಂಬರ ನರೇಂದ್ರ
ಉರ್ದು ಭಾಷೆಯ ಜಾತಿ ಯಾವುದು ಎನ್ನುವುದು ಆಗಾಗ ವಿವಾದಕ್ಕೆ ಕಾರಣವಾಗುವಾಗ ಉರ್ದು ಕವಿ ಜಾವೇದ್ ಅಖ್ತರ್ ಹೇಳಿದ ಸಂಗತಿಯೊಂದು ನೆನಪಾಗುತ್ತದೆ.
1798 ಲ್ಲಿ ಇಸ್ಲಾಂನ ಬಹು ದೊಡ್ಡ ವಿದ್ವಾಂಸರಾದ ಶಾಹ್ ಅಬ್ದುಲ ಕಾದಿರ್ ಪವಿತ್ರ ಕುರಾನ್ ನ್ನು ಉರ್ದು ಭಾಷೆಗೆ ತರ್ಜುಮೆ ಮಾಡುತ್ತಾರೆ. ಅಲ್ಲಾಹ್ ನ ಪವಿತ್ರ ನುಡಿಗಳನ್ನು ಹೆಣ್ಣು, ಮದಿರೆ , ಶೃಂಗಾರ ದಲ್ಲಿ ಮುಳುಗಿರುವ ತುಚ್ಛ ಉರ್ದೂ ಭಾಷೆಗೆ ಅನುವಾದ ಮಾಡುವುದೇ ಎಂದು ಕೆಂಡಾಮಂಡಲರಾದ ಅಂದಿನ ಪುರೋಹಿತಶಾಹಿ, ಶಾಹ್ ಅವರ ಮೇಲೆ ಫತ್ವಾ ಹೊರಡಿಸುತ್ತಾರೆ. ಇದಾದ ಕೇವಲ 60-70 ವರ್ಷಗಳ ನಂತರದ ಅವಧಿಯಲ್ಲಿ ಉರ್ದೂ ಭಾಷೆಯ ಮೇಲೆ ಮುಸ್ಲೀಂ ಟೊಪ್ಪಿಗೆ ಇಡಲಾಗುತ್ತದೆ. ಇಂದಿಗೂ ಉರ್ದೂ ಮುಸ್ಲೀಂರ ಭಾಷೆ ಎಂಬ ಆಪಾದನೆಯಿಂದ ಮುಕ್ತವಾಗಿಲ್ಲ.

