ನಿಮಗೆ ಬೆರಗಾಗುವಂತೆ ದುಃಖ ತನ್ನ ರಹಸ್ಯಗಳನ್ನು ನಿಮ್ಮ ಎದುರು ಅನಾವರಣಗೊಳಿಸುತ್ತದೆ. ಮತ್ತು ಈ ರಹಸ್ಯಗಳು ಅಮೂಲ್ಯವಾದವು. ಒಮ್ಮೆ ತನ್ನ ರಹಸ್ಯಗಳನ್ನು ಅನಾವರಣಗೊಳಿಸಿದ ಮೇಲೆ ದುಃಖ ಮಾಯವಾಗುತ್ತದೆ! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗಲೂ ಧ್ಯಾನ ( ಹಾಗೆಂದರೆ ಪೂರ್ಣವಾಗಿ ರಿಲ್ಯಾಕ್ಸ್) ಮಾಡುತ್ತಿರಿ ನಿರ್ದಿಷ್ಟ ಸಂಗತಿಗಳ ಮೇಲೆ.
ನಿರ್ದಿಷ್ಟ ಸಂಗತಿಗಳು ಎಂದರೇನು? ದುಃಖ, ಅಸೂಯೆ, ಕೋಪ, ಕಾಮ ಮುಂತಾದ ಋಣಾತ್ಮಕ ಸಂಗತಿಗಳು ಮತ್ತು ಪ್ರೇಮ, ಅಂತಃಕರಣ, ಚೆಲುವು, ಖುಶಿ, ಸ್ವಾತಂತ್ರ್ಯ ಮುಂತಾದ ಧನಾತ್ಮಕ ಸಂಗತಿಗಳು.
ಋಣಾತ್ಮಕ ಸಂಗತಿಗಳಿಂದಲೇ ಶುರು ಮಾಡಿ. ನೀವಿರುವುದು ಋಣಾತ್ಮಕ ಜಗತ್ತಿನಲ್ಲಿ ಅಲ್ಲವೇ. ನಿಮಗೆ ದುಃಖ ಆದಾಗ, ದುಃಖದ ಮೇಲೆ ಧ್ಯಾನ ಮಾಡಿ.
ದುಃಖದಿಂದ ಕಳಚಿಕೊಳ್ಳಲು ಅವಸರ ಮಾಡಬೇಡಿ. ದುಃಖವನ್ನು ಮರೆಯುವುದಕ್ಕಾಗಿ ಬೇರೆ ಸಂಗತಿಗಳಲ್ಲಿ ತೊಡಗಿಕೊಳ್ಳುವ ಗಡಿಬಿಡಿ ಮಾಡಬೇಡಿ. ಹಾಗೆ ಮಾಡುವುದರಿಂದ ನೀವು ಸುವರ್ಣ ಅವಕಾಶವೊಂದನ್ನು ಕಳೆದುಕೊಳ್ಳುತ್ತೀರಿ. ಏಕೆಂದರೆ ದುಃಖಕ್ಕೆ ತನ್ನದೇ ಆದ ಆಳವಿದೆ, ತನ್ನದೇ ಆದ ಚೆಲುವು ಇದೆ, ತನ್ನದೆ ಆದ ರುಚಿ ಇದೆ. ದುಃಖವನ್ನು ಸಂಪೂರ್ಣವಾಗಿ ಬದುಕಿ. ದುಖದಲ್ಲಿ ರಿಲ್ಯಾಕ್ಸ ಮಾಡಿ. ಅದರಿಂದ ಪಾರಾಗುವ ಯಾವ ಪ್ರಯತ್ನ ಮಾಡದೇ ಸ್ವತಃ ನೀವೇ ದುಃಖವಾಗಿಬಿಡಿ. ದುಃಖ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲಿ, ದುಃಖವನ್ನು ಎಂಜಾಯ್ ಮಾಡಿ. ಆಗ ನಿಮ್ಮ ಅಸ್ತಿತ್ವದ ಅರುಳುವಿಕೆ ಶುರುವಾಗುತ್ತದೆ. ಹೌದು ದುಃಖ ಕೂಡ ನಿಮ್ಮ ಅಸ್ತಿತ್ವದ ಅರಳುವಿಕೆ.
ಆಗ ನಿಮಗೆ ಬೆರಗಾಗುವಂತೆ ದುಃಖ ತನ್ನ ರಹಸ್ಯಗಳನ್ನು ನಿಮ್ಮ ಎದುರು ಅನಾವರಣಗೊಳಿಸುತ್ತದೆ. ಮತ್ತು ಈ ರಹಸ್ಯಗಳು ಅಮೂಲ್ಯವಾದವು. ಒಮ್ಮೆ ತನ್ನ ರಹಸ್ಯಗಳನ್ನು ಅನಾವರಣಗೊಳಿಸಿದ ಮೇಲೆ ದುಃಖ ಮಾಯವಾಗುತ್ತದೆ. ಅದರ ಕೆಲಸ ಮುಗಿಯಿತು. ಅದು ತನ್ನ ಮೆಸೇಜ್ ನಿಮಗೆ ತಲುಪಿಸಿಯಾಯ್ತು. ಮತ್ತು ಯಾವಾಗ ದುಃಖ ಮಾಯವಾಗುತ್ತದೆಯೋ ಅದೇ ಜಾಗದಲ್ಲಿ ಖುಶಿಯ ಅವತಾರವಾಗುತ್ತದೆ.
ಧ್ಯಾನ ಕಾರಣವಾಗಿ ದುಃಖ ಮಾಯವಾದಾಗ ಆ ಜಾಗವನ್ನು ಖುಶಿ ತುಂಬಿಕೊಳ್ಳುತ್ತದೆ ; ಇದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ತನ್ನ ಸುತ್ತ ಇದ್ದ ದುಃಖದ ಐಸ್ ನ ಬ್ರೇಕ್ ಮಾಡಿದಾಗ ಖುಶಿ ಆವರಿಸಿಕೊಳ್ಳುತ್ತದೆ. ದುಃಖ ಅನ್ನೋದು ಖುಶಿಯ ಬೀಜವನ್ನು ಸುತ್ತವರೆದಿರುವ ರಕ್ಷಣಾತ್ಮಕ ಕವಚ. ಅದು ಖುಶಿಯ ವೈರಿಯಲ್ಲ, ಅದು ಖುಶಿಯನ್ನು ನಿಮಗಾಗಿ ರಕ್ಷಿಸಿಕೊಂಡು ಬಂದಿದೆ. ಒಮ್ಮೆ ಬೀಜದ ಸುತ್ತ ಇರುವ ರಕ್ಷಣೆ ಮಾಯವಾಯಿತೆಂದರೆ, ಬೀಜ ನೇರವಾಗಿ ಮಣ್ಣಿನ ಸಂಪರ್ಕಕ್ಕೆ ಬರುತ್ತದೆ. ಆಗ ಮಾತ್ರ ಖುಶಿ ಚಿಗುರೊಡೆಯುತ್ತದೆ.
ನಿಮ್ಮೊಳಗೂ ಥೇಟ್ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ. ಯಾವುದೇ ಋಣಾತ್ಮಕ ಸಂಗತಿಯ ಮೇಲೆ ಧ್ಯಾನ ಮಾಡಿ, ನಿಮಗೆ ಅಚ್ಚರಿಯಾಗುವಂತೆ ನಿಧಾನವಾಗಿ ದುಃಖ, ಖುಶಿಯಾಗಿ ಬದಲಾಗುತ್ತದೆ, ಕೋಪ ಕಾರುಣ್ಯವಾಗಿ ಪರಿವರ್ತಿತಗೊಳ್ಳುತ್ತದೆ, ದುರಾಸೆ ಹಂಚಿಕೊಳ್ಳುವಿಕೆಯಾಗಿ ಮಾರ್ಪಾಡಾಗುತ್ತದೆ. ಹೀಗೇ ಅನೇಕ ಋಣಾತ್ಮಕ ಸಂಗತಿಗಳು ಧನಾತ್ಮಕವಾಗಿ ಬದಲಾಗುತ್ತವೆ. ಇದು ಅಂತರಂಗದ ರಸವಿದ್ಯೆ.

