ಒಮ್ಮೆ ತಮಾಷೆಗೆ ಕಾರಂತರು ಕರ್ನಾಟಕದಲ್ಲಿ ಹಿಟ್ಲರ್ ಅಂತ ಒಂದು ವಿಡಂಬನಾತ್ಮಕ ಪ್ರಬಂಧ ಬರೀತಾರೆ. ಅದರಲ್ಲಿ ಕರ್ನಾಟಕದ ಜರ್ಮನೀಕರಣ ಆದರೆ ಆಗ ಇಲ್ಲಿನ ಪ್ರಮುಖ ಸಾಹಿತಿಗಳ ಹೆಸರು ಹ್ಯಾಗೆ ಬದಲಾಗ್ತದೆ ಅಂತ ಬರೆದಿರ್ತಾರೆ… । ಚಿದಂಬರ ನರೇಂದ್ರ
ಕನ್ನಡಿಗರಿಗೆ ಬಹಳ ಪ್ರಿಯವಾಗಿರುವ ಬೇಂದ್ರೆಯವರ ಪದ್ಯ “ಒಂದೇ ಒಂದೇ ಒಂದೇ ಕರ್ನಾಟಕವೊಂದೆ” ಯ ಹುಟ್ಟಿನ ಬಗ್ಗೆಯ ಮಾಹಿತಿಯನ್ನು ಡಾ. ಜಿ.ವಿ ಕುಲಕರ್ಣಿಯವರು ಬೇಂದ್ರೆ ಮಾಸ್ತರ್ ಗೆ ನಮಸ್ಕಾರ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ಯವರೊಂದಿಗೆ ಹಂಚಿಕೊಂಡಿದ್ದು ಹೀಗೆ……
ಒಮ್ಮೆ ತಮಾಷೆಗೆ ಕಾರಂತರು ಕರ್ನಾಟಕದಲ್ಲಿ ಹಿಟ್ಲರ್ ಅಂತ ಒಂದು ವಿಡಂಬನಾತ್ಮಕ ಪ್ರಬಂಧ ಬರೀತಾರೆ. ಕರ್ನಾಟಕದ ಜರ್ಮನೀಕರಣ ಆದರೆ ಆಗ ಇಲ್ಲಿನ ಪ್ರಮುಖ ಸಾಹಿತಿಗಳ ಹೆಸರು ಹ್ಯಾಗೆ ಬದಲಾಗ್ತದೆ, ಆಗ ಆರ್ ವಿ ಜಹಗೀರದಾರರು (ಶೀರಂಗ) ಹರ್ ಜಡೀರ್ ಆಗ್ತಾರೆ, ಕಾರಂತರ ಹೆಸರು ಹರ್ ರಾಂಟ್ ಆಗ್ತದ ಮತ್ತು ಬೇಂದ್ರೆಯವರು ಹರ್ ಬಂಡರ್ ಆಗ್ತಾರ ಅಂತ ವಿನೋದಮಯ ವಾಗಿ ಬರೆಯುತ್ತ ಹರ್ ಬಂಡರ್ ಕನ್ನಡದ ರಾಷ್ಟ್ರಕವಿ ಎಂದು ಘೋಷಿಸಿದ್ದರು.
ಇದು ಬೇಂದ್ರೆಯವರಿಗೆ ಗೊತ್ತಾದಾಗ ಬೇಂದ್ರೆ ತಮಾಷೆಗೆ, ಹರ್ ಬಂಡರ್ ಬರೆದ ಕನ್ನಡದ ರಾಷ್ಟ್ರಗೀತೆ ಅಂತ “ ಒಂದೇ ಒಂದೇ ಒಂದೇ ಕರ್ನಾಟಕವೊಂದೆ” ಪದ್ಯ ತಕ್ಷಣ ಬರೆದುಬಿಡ್ತಾರೆ. ಅದರಲ್ಲಿ ಒಂದು ಕೊನೆ ಸಾಲು ಬರ್ತದ “ಉಗ್ಗಡಿಸಿರಿ ನಾಸ್ತಿಗೆ ಜಯ ಜಯ ಜಯವೆಂದೇ” ಅಂತ. ಅದರ ಆಗಿನ ಅರ್ಥ ನಾಝಿಯಿಸಂ (ನಾಸ್ತಿಪಂಥ) ಗೆ ಜಯವಾಗಲಿ ಅಂತ.
ಆದರೆ ಬೇಂದ್ರೆ ಈ ಪದ್ಯನ 15 ವರ್ಷ ಪ್ರಿಂಟ್ ಮಾಡೋದಿಲ್ಲ . ಮುಂದೆ ಈ ಪದ್ಯವನ್ನ ಬೇರೆ ಅರ್ಥದಿಂದ ಓದ ಬಹುದು, ನಾಸ್ತಿಗೆ ಬೇರೆ ಅರ್ಥವೂ ಇದೆ ಎಂದು ಅವರಿಗೆ ಅನಿಸಿದಾಗ ಆ ಪದ್ಯವನ್ನ ಅವರು ತಮ್ಮ ಗಂಗಾವತರಣ ಸಂಕಲನದಲ್ಲಿ ಪದ್ಯ ಪ್ರಿಂಟ್ ಮಾಡ್ತಾರೆ. ಹಾಗಾಗಿ ಇದು ಹರ್ ಬಂಡರ್ ಎನ್ನುವ ಕಾಲ್ಪನಿಕ ಹೆಸರಿನ ಕವಿ ವಿನೋದಕ್ಕಾಗಿ ಬರೆದ ಪದ್ಯ.

