ಯಾರೂ ನಿನ್ನ ಶೋಚನೀಯತೆಗೆ ನೀನು ಮೊದಲ ಹೊಣೆ ಎನ್ನುವುದಿಲ್ಲ. ಎಲ್ಲರೂ ಇನ್ನೊಬ್ಬರ ಮೇಲೆ ಜವಾಬ್ದಾರಿಯನ್ನು ಹೊರಿಸುತ್ತಾರೆ. ಇನ್ನೊಬ್ಬರು ಕಾರಣ ಎಂದಾದರೆ ನೀವು ಖುಶಿಯಾಗಿರುವುದು ಹೇಗೆ ಸಾಧ್ಯ, ನಿಮ್ಮ ಜವಾಬ್ದಾರಿ ಏನು? | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅಹಂ ಇರುವ ಮನುಷ್ಯ ಯಾವಾಗಲೂ ಶೋಚನೀಯ ಪರಿಸ್ಥಿತಿಯಲ್ಲಿ ಇರುತ್ತಾನೆ, ಏಕೆಂದರೆ ಖುಶಿಯಾಗಿರಲು ತಮ್ಮ ಬಳಿ ಇರುವುದರ ಬಗ್ಗೆ ಮೊದಲು ಖುಶಿಯಾಗಿರಬೇಕಾಗುತ್ತದೆ. ನಿಮ್ಮ ಬಳಿ ಇರದೇ ಇರುವುದರ ಬಗ್ಗೆ ಖುಶಿಯಾಗಿರುವುದು ಸಾಧ್ಯವಿಲ್ಲದ ಮಾತು, ಅದರ ಬಗ್ಗೆ ದುಃಖಿತರಾಗಿರಬಹುದು ಅಷ್ಟೇ. ಮತ್ತು ಅಹಂ ಗೆ ಯಾವುಗಲೂ ನಿಮ್ಮ ಬಳಿ ಇರದೇ ಇರುವುದರ ಬಗ್ಗೆ ಮಾತ್ರ ಆಸಕ್ತಿ. ನಿಮ್ಮ ಬಳಿ ಹತ್ತು ಸಾವಿರ ರೂಪಾಯಿ ಇದ್ದರೆ ಅಹಂ ಗೆ ಅದರಲ್ಲಿ ಆಸಕ್ತಿ ಇಲ್ಲ, ಅದಕ್ಕೆ ತನ್ನ ಬಳಿ ಇಪ್ಪತ್ತು ಸಾವಿರ ಇಲ್ಲದಿರುವ ಬಗ್ಗೆ ಸಂಕಟ. ಇಪ್ಪತ್ತು ಸಾವಿರ ಇದ್ದರೆ ಅದಕ್ಕೆ ಮೂವತ್ತು ಸಾವಿರದ ಚಡಪಡಿಕೆ. ಇದು ನಿರಂತರ ಅಹಂ ಇರುವ ತನಕ.
ಅಹಂ ಯಾವಾಗಲೂ ಗುರಿಗಳನ್ನು ನಿರ್ದೇಶಿಸುತ್ತಿರುತ್ತದೆ. ಆದರೆ ಗುರಿಗಳು ಹತ್ತಿರವಾದಾಗ ಅಹಂ ಸಂಭ್ರಮಕ್ಕೆ ಅವಕಾಶಕೊಡದೆ ಗೋಲ್ ಪೋಸ್ಟ್ ನ ಇನ್ನೂ ಮುಂದೆ ಹಾಕುತ್ತದೆ. ಹಾಗಾಗಿ ಮನುಷ್ಯ ಶೋಚನೀಯನಾಗುತ್ತ ಮುಂದುವರೆಯುತ್ತಾನೆ. ನಮ್ಮ ಬದುಕು ಶೋಚನೀಯ ಪರಿಸ್ಥಿತಿಗಳ ಸಂಗ್ರಹಕಾರವಾಗುತ್ತದೆ. ಆದರೆ ನಮಗೆ ಯಾವತ್ತೂ ನಮ್ಮ ಈ ಪರಿಸ್ಥಿತಿಗೆ ನಾವು ಕಾರಣ ಎನ್ನುವುದನ್ನು ನಂಬಲು ಅಹಂ ಅವಕಾಶ ಮಾಡಿಕೊಡುವುದಿಲ್ಲ. ಅದು ಯಾವಾಗಲೂ ಈ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತದೆ.
ನೀವು ಮಿಸರೇಬಲ್ ಆಗಿದ್ದರೆ ನೀವು ಅದಕ್ಕೆ ಸಮಾಜ ಕಾರಣ ಎನ್ನುತ್ತೀರಿ, ನಿಮ್ಮ ತಂದೆ ತಾಯಿಯರ ಮೇಲೆ ಆಪಾದನೆ ಮಾಡುತ್ತೀರಿ. ಫ್ರಾಯ್ಡಿಯನ್ಸ್ ನ ಕೇಳಿದರೆ ಅವರು ತಂದೆ ತಾಯಿಯರು, ಪೇರೆಂಟಿಂಗ್ ಕಾರಣ ಎನ್ನುತ್ತಾರೆ, ಮಾರ್ಕ್ಸಿಸ್ಟಗಳು ಎಲ್ಲದಕ್ಕೂ ಸಾಮಾಜಿಕ ರಚನೆ ಹೊಣೆ ಎನ್ನುತ್ತಾರೆ. ರಾಜಕಾರಣಿಗಳು ತಪ್ಪು ಸರ್ಕಾರಗಳು ಕಾರಣ ಎನ್ನುತ್ತಾರೆ. ಶಿಕ್ಷಣತಜ್ಞರು ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗಳು ಎಲ್ಲ ಸಮಸ್ಯೆಗಳ ಮೂಲ ಎನ್ನುತ್ತಾರೆ.
ಯಾರೂ ನಿನ್ನ ಶೋಚನೀಯತೆಗೆ ನೀನು ಮೊದಲ ಹೊಣೆ ಎನ್ನುವುದಿಲ್ಲ. ಎಲ್ಲರೂ ಇನ್ನೊಬ್ಬರ ಮೇಲೆ ಜವಾಬ್ದಾರಿಯನ್ನು ಹೊರಿಸುತ್ತಾರೆ. ಇನ್ನೊಬ್ಬರು ಕಾರಣ ಎಂದಾದರೆ ನೀವು ಖುಶಿಯಾಗಿರುವುದು ಹೇಗೆ ಸಾಧ್ಯ, ನಿಮ್ಮ ಜವಾಬ್ದಾರಿ ಏನು? ಇದಕ್ಕೆ ಇಡೀ ಜಗತ್ತು ಬದಲಾಗಬೇಕು. ನಿಜ ಜಗತ್ತು ಬದಲಾಗಬೇಕು ಅದಕ್ಕೆ ಶುರುವಾತು ನಮ್ಮಿಂದಲೇ ಆಗಬೇಕು. ಸ್ವತಃ ನಾವೇ ಮಿಸರೇಬಲ್ ಆಗಿರುವಾಗ ಜಗತ್ತು ಬದಲಾಯಿಸುವ ಕ್ಲಾರಿಟಿ ಆಫ್ ಥಾಟ್ ನಮ್ಮೊಳಗೆ ಇರುವುದು ಹೇಗೆ ಸಾಧ್ಯ? ಮೊದಲು ನಮ್ಮ ಸಮಸ್ಯೆಗಳಿಂದ ನಾವು ಸ್ವತಂತ್ರರಾದಾಗ ನಮ್ಮ ಪ್ರಯತ್ನಗಳು ಇನ್ನೂ ಹೆಚ್ಚು ಸ್ಪಷ್ಟತೆಯಿಂದ ಕೂಡಿರುತ್ತವೆ.
ಒಮ್ಮೆ ಯಾರೋ ಮಾರ್ಕ್ ಟ್ವೈನ್ ನ ಕೇಳಿದರಂತೆ, “ ಖುಶಿಯಾಗಿರುವುದಕ್ಕೆ ಮನುಷ್ಯನಿಗೆ ಏನು ಬೇಕು” ಅಂತ.
ಅದಕ್ಕೆ ಮಾರ್ಕ್ ಕೊಟ್ಚ ಉತ್ತರ, “ನಾವು ನಮ್ಮ ತಂದೆ ತಾಯಿಯರನ್ನ ಸರಿಯಾಗಿ ಆಯ್ಕೆ ಮಾಡಿಕೊಳ್ಳ ಬೇಕು” ಅಂತ.
ಇದು ಅಸಾಧ್ಯ, ಏಕೆಂದರೆ ಇದು ಈಗಾಗಲೇ ಆಗಿ ಹೋಗಿದೆ. ತಂದೆ ತಾಯಿಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಹಾಗಾದರೆ ನಾವು ನಮ್ಮ ಸಮಾಜವನ್ನಾದರೂ ಆಯ್ಕೆ ಮಾಡಿಕೊಳ್ಳಬೇಕು. ಇದೂ ಕೂಡ ಅಸಾಧ್ಯ, ಏಕೆಂದರೆ ಇದಕ್ಕೆ ದೊಡ್ಡ ಕ್ರಾಂತಿಯೇ ಬೇಕಾಗಬಹುದು. ಹೌದು ಇದು ಬೇಕು ಕೂಡ ಆದರೆ ಮೊದಲು ಅತೀ ಸುಲಭವಾಗಿ ನಿಮಗೆ ಸಾಧ್ಯವಾಗಬಹುದಾದದ್ದು ನಿಮ್ಮ ಸ್ವಂತದ ಬದಲಾವಣೆ.
ಸ್ವಂತದ ಬದಲಾವಣೆ ಮಾತ್ರ ಸಧ್ಯದ ಭರವಸೆ. ಆದರೆ ಅಹಂಗೆ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಆಸಕ್ತಿ ಇಲ್ಲ. ಅದು ಯಾವಾಗಲೂ ಇನ್ನೊಬ್ಬರನ್ನು ದೂಷಿಸುತ್ತಿರುತ್ತದೆ. ಯಾವಾಗ ನೀವು ಇನ್ನೊಬ್ಬರ ಮೇಲೆ ಜವಾಬ್ದಾರಿಯನ್ನ ವಹಿಸುತ್ತೀರೋ ಆಗ ನೀವು ನಿಮ್ಮ ಸ್ವಾತಂತ್ರ್ಯವನ್ನೂ ಅವರಿಗೆ ಹಸ್ತಾಂತರ ಮಾಡಿಬಿಡುತ್ತೀರಿ. ನಿಮಗೆ ನೆನಪಿರಲಿ ಜವಾಬ್ದಾರರಾಗುವುದೆಂದರೆ ಸ್ವತಂತ್ರರಾಗುವುದು. ಬದಲಾವಣೆಯ ಜವಾಬ್ದಾರಿಯನ್ನ ಇನ್ನೊಬ್ಬರಿಗೆ ವಹಿಸುವುದೆಂದರೆ ಕೈದಿಗಳಾಗುವುದು.

