ಇವತ್ತೂ ಕೂಡ ನಮ್ಮ ಕಡೆ ಮಹಾಭಾರತದ ಪ್ರವಚನ ಆಗೋ ಜಾಗದಾಗ ಒಂದು ಮಣೆ ಖಾಲಿ ಇಟ್ಟಿರ್ತಾರಂತ. ಯಾಕೆ ಗೊತ್ತಾ? : ಚಿದಂಬರ ನರೇಂದ್ರ
ಹಿಂದೊಮ್ಮೆ ಗದುಗಿನ ವೀರನಾರಾಯಣನ ಗುಡಿಯೊಳಗ ಮಹಾಭಾರತದ ಸಪ್ತಾಹ ನಡೀತಂತ.
ಕೊನೆ ದಿನ ಎಲ್ಲಾ ಮುಗದ ಮ್ಯಾಲೆ ಎಲ್ಲಾರಿಗೂ ಊಟಕ್ಕ ಎಲಿ ಹಾಕಿದರು. ಊಟ ಸಾಂಗವಾಗಿ ಸಾಗೋ ವ್ಯಾಳ್ಯಾದಾಗ ಯಾಕೋ ಒಬ್ಬ ಸಣ್ಣ ಹುಡುಗ ಅವರವ್ವನ್ನ ಭಾಳ ಕಾಡ್ಲಿಕೆ ಸುರು ಮಾಡಿದ. ಎಷ್ಟು ಸಮಾಧಾನ ಮಾಡಿದ್ರೂ ಸುಮ್ನಾಗವಲ್ಲ.
ಅವರವ್ವಗ ಭಾರಿ ಸಿಟ್ಟು ಬಂದು “ಯಾಕ ದುಷ್ಟ ದುರ್ಯೋಧನನ ಹಂಗ ಹಟ ಮಾಡ್ಲಿಕತ್ತೀ” ಅಂತ ಮಗನ ಬೆನ್ನ ಮ್ಯಾಲ ಬಾರಿಸಿದಳಂತ. ಅಕೀ ಹಿಂಗ ಅಂದದ್ದ ತಡ ಊಟಕ್ಕ ಕೂತಿದ್ದ ಒಬ್ಬ ತೇಜಸ್ವಿ ಯುವಕ ಸಿಟ್ಟಿಗೆದ್ದು ಅರ್ಧಕ್ಕ ಹೊಂಟ ಬಿಟ್ಟ. ಕುತೂಹಲಕ್ಕ ಅವನ ಹಿಂದ ಇನ್ನೊಬ್ಬನೂ ಬೆನ್ನುಹತ್ತಿದ.
ಭಾಳ ಧೂರ ಹೋದ ಮ್ಯಾಲೆ ಗೊತ್ತಾತಂತ, ಹಾಂಗ ಸಿಟ್ಟಿಗೆದ್ದು ಹೊರಟ ಯುವಕ ಚಿರಂಜೀವಿ ಅಶ್ವತ್ಥಾಮ ಅಂತ. ಅಶ್ವತ್ಥಾಮಗ ಆ ಸಾಧಾರಣ ಹಳ್ಳಿ ಹೆಂಗಸು ತನ್ನ ಬಾಸ್ ದುರ್ಯೋಧನಗ ಅಪಮಾನ ಮಾಡಿದ್ದು ಕೇಳಿ ಕೆಂಡದಂಥ ಸಿಟ್ಟು ಬಂದಿತ್ತು. ಅವನ ಬೆನ್ನು ಹತ್ತಿ ಹೋಗಿ ಅವನ (ಮಹಾಭಾರತದ) ಕಥಿ ಕೇಳಿದಾಂವ ಬ್ಯಾರೆ ಯಾರೂ ಅಲ್ಲ ಕೋಳಿವಾಡದ ನಾರಾಣಪ್ಪ. ಮುಂದ ಕುಮಾರವ್ಯಾಸ ಅಂತ ಪ್ರಸಿದ್ಧ ಆದ.
ಇವತ್ತೂ ಕೂಡ ನಮ್ಮ ಕಡೆ ಮಹಾಭಾರತದ ಪ್ರವಚನ ಆಗೋ ಜಾಗದಾಗ ಒಂದು ಮಣೆ ಖಾಲಿ ಇಟ್ಟಿರ್ತಾರಂತ. ಅಶ್ವತ್ಥಾಮ ಅಲ್ಲಿ ಬಂದು ಕೂಡ್ತಾನ ಅನ್ನೋ ನಂಬಿಕಿ.
ಇದು ನಾ ಸಣ್ಣಾಂವ ಇದ್ದಾಗ ನಮ್ಮ ಅಜ್ಜಿ ಹೇಳಿದ ಪ್ರಸಂಗ.

