ಮಕ್ಕಳ ಮೇಲಿನ ಅತಿರೇಕದ ಪ್ರೀತಿಯಿಂದ ಮಕ್ಕಳು ದಾರಿತಪ್ಪುವ ಸಾಧ್ಯತೆಯೂ ಇಲ್ಲದಿಲ್ಲ. ಜಗತ್ತಿನ ಪುರಾಣಗಳ ತುಂಬೆಲ್ಲ ಧೃತರಾಷ್ಟ್ರರ ಕತೆಗಳಿವೆ, ಕೈಕೇಯಿಯ ಕತೆಗಳಿವೆ. ನಮ್ಮ ಕಣ್ಣೆದುರೇ ರಾಜಕಾರಣಿಗಳು, ಉದ್ಯಮಿಗಳು ತಮ್ಮ ಕುಡಿಗಳನ್ನು ಅತಿರೇಕದ ಪ್ರೀತಿಯ ಬಾವಿಗೆ ತಳ್ಳಿ ಹಾಳುಗೆಡವುತ್ತಿದ್ದಾರೆ, ನಾವೂ ನೋಡುತ್ತಿದ್ದೇವೆ. ಕೆಲವೊಮ್ಮೆ ಇಂಥವರು ನಮ್ಮೆದುರಿನ ಕನ್ನಡಿಯಲ್ಲೂ ಕಾಣುವುದುಂಟು! ಈಗಿನ್ನೂ ಚಿಗಿತ ಮೊಳಕೆಗೆ ಕೊಡಗಟ್ಟಲೆ ನೀರು ಸುರಿದರೆ ಅದು ಕೊಳೆಯುವುದು ಸಹಜ. ಆಮೇಲೆ ನಾನು ಕಾಳಜಿಯಿಂದ ಅಷ್ಟು ನೀರು ಸುರಿದೆ, ಬೆಳೆದು ನೆರಳು ಕೊಡಲೇ ಇಲ್ಲ ಎಂದು ದೂರಿದರೆ ತಪ್ಪು ಯಾರದ್ದು? । ಚೇತನಾ ತೀರ್ಥಹಳ್ಳಿ
ಇಲ್ಲಿ ಇನ್ನೂ ಒಂದು ಅಂಶವಿದೆ. ತಾಯ್ತಂದೆಯರನ್ನು ಮಕ್ಕಳನ್ನು ಪ್ರೀತಿಸುವುದು, ಅವರ ಮನಸ್ಸಿನ ಮೇಲೆ ಭಾರ ಹೊರಿಸದೆ ಅವರನ್ನು ಬೆಳೆಸುವುದು ಇತ್ಯಾದಿ ಸಹಜ ಕ್ರಿಯೆಯ ಹೊರತಾಗಿ ಕೆಲವರು ತಮ್ಮ ಸಾಮರ್ಥ್ಯ ಮೀರಿ ಮಕ್ಕಳಿಗಾಗಿ ದುಡಿಯುತ್ತಾರೆ.
ತಮ್ಮ ಕಿಡ್ನಿ ಮಾರಿ ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೊಂದಿಸಿದವರನ್ನು ನಾವು ನೋಡಿದ್ದೇವೆ. ಮತ್ತೊಬ್ಬರ ಕೈಕಾಲಿಗೆ ಬಿದ್ದು ಮಕ್ಕಳಿಗೆ ಕೆಲಸ ಕೊಡಿಸುವ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಕ್ಕಳಿಗೆ ಸವಲತ್ತು ಹೊಂದಿಸುವ ಜನರನ್ನೂ ನೋಡಿದ್ದೇವೆ.
ಇಂಥಾ ತಾಯ್ತಂದೆಯರದ್ದು ನಿಜವಾಗಿಯೂ ಪ್ರೀತಿಯೇ?
ಕೆಲವೊಮ್ಮೆ ಇವರ ಮಕ್ಕಳು ಇವರು ಪಟ್ಟ ಕಷ್ಟಕ್ಕೆ ಕನಿಷ್ಠ ಕೃತಜ್ಞತೆಯನ್ನೂ ತೋರುವುದಿಲ್ಲ. ಅವರದ್ದು ಮಹಾಪಾಪ ಅಲ್ಲವೆ?
ಮೇಲ್ನೋಟಕ್ಕೆ ನೋಡಿದರೆ, ಹೌದು.
ಒಳಹೊಕ್ಕು ನೋಡಿದರೆ ಅಲ್ಲ.
ಇಲ್ಲಿ ತಪ್ಪು ತಂದೆತಾಯಿಯರದ್ದೇ.
ತಮ್ಮ ಬದುಕನ್ನು ನರಕ ಮಾಡಿಕೊಂಡು ಮಕ್ಕಳನ್ನು ಸುಖವಾಗಿಡುವ ತಂದೆ ತಾಯಿಯರು ಪ್ರೀತಿಯನ್ನೂ ದಾಟಿದ ವ್ಯಾಮೋಹಕ್ಕೆ ಒಳಗಾದವರು.
ಪ್ರೀತಿಗೂ ವ್ಯಾಮೋಹಕ್ಕೂ ಕೂದಲೆಳೆಯ ಅಂತರ. ಅತಿಯಾದರೆ ಅಮೃತವೂ ವಿಷವಾಗುವಂತೆ ಅತಿಯಾದ ಪ್ರೀತಿ ವ್ಯಾಮೋಹಕ್ಕೆ ತಿರುಗಿ ತನ್ನ ಬೆಲೆ ಕಳೆದುಕೊಳ್ಳತೊಡಗುವುದು.
ಮಕ್ಕಳಿಗೆ ತಮ್ಮ ಕೈಮೀರಿದ ಸವಲತ್ತು ಒದಗಿಸುವ ಮೂಲಕ ಈ ತಾಯ್ತಂದೆಯರು ಮಕ್ಕಳ ಹಾದಿ ತಪ್ಪಿಸುತ್ತಾರೆ ಹೊರತು ಅವರ ಉದ್ಧಾರ ಮಾಡುವುದಿಲ್ಲ.
ತಾಯ್ತಂದೆಯರು ತಮ್ಮ ಮಕ್ಕಳನ್ನು ‘ಎಲ್ಲರಂತೆ’ ಬೆಳೆಸುವ ಬದಲು ತಮ್ಮ ಕೈಲಾದಂತೆ ಬೆಳೆಸುವುದು ಸರಿಯಾದ ದಾರಿ. ಮಕ್ಕಳ ಬೇಡಿಕೆಗಳನ್ನು ಪೂರೈಸಲು ಯಾವ ತಾಯ್ತಂದೆಯರೂ ಮತ್ತೊಬ್ಬರ ಮುಂದೆ ಕೈಯೊಡ್ಡಿ ಬೇಡುವಂತಾಗಬಾರದು (ಅನಾರೋಗ್ಯ ಸಂದರ್ಭದಲ್ಲಿ ಚಿಕಿತ್ಸೆ ಖರ್ಚಿನ ವಿನಾ). ಹೀಗೆ ಕೈಯೊಡ್ಡುವ ತಾಯ್ತಂದೆಯರು ಸಮಾಜದ ಕಣ್ಣಲ್ಲಿ ಮಾತ್ರವಲ್ಲ, ಯಾರಿಗಾಗಿ ತಾವು ಅಷ್ಟೆಲ್ಲ ಮಾಡುತ್ತಿದ್ದಾರೋ ಆ ಮಕ್ಕಳ ಕಣ್ಣಲ್ಲೂ ಕೆಳಗಿಳಿಯುತ್ತಾರೆ.
ತಾಯ್ತಂದೆಯರು ಮಕ್ಕಳಿಗಾಗಿ ತಮ್ಮ ಕೈಮೀರಿ ದುಡಿಯುವುದೂ ಮತ್ತೊಂದು ಬಗೆಯ ಹೊರೆ. ಮತ್ತೊಂಡು ಬಗೆಯ ಋಣಭಾರ. ಇಲ್ಲಿ ತಾಯ್ತಂದೆಯರು ಮಕ್ಕಳಿಂದ ನಮಗೇನೂ ನಿರೀಕ್ಷೆಯಿಲ್ಲ, ಅವರ ಬದುಕು ಚೆನ್ನಾಗಿರಲೆಂದು ಈ ಪ್ರಯತ್ನ ಅನ್ನಬಹುದು. ಅವರ ಈ ಪ್ರಯತ್ನ ಮಕ್ಕಳಿಗಾಗಿ ಮಾಡುವ ತ್ಯಾಗದಂತೆಯೂ ತೋರಬಹುದು. ಅವರ ಈ ತ್ಯಾಗವನ್ನು ಕಣ್ಣಾರೆ ಕಂಡು, ಅನುಭವಿಸಿದ ಮಕ್ಕಳು ತಮ್ಮ ಪ್ರತಿಯೊಂದು ಸುಖದಲ್ಲೂ ಅವರ ನಿಟ್ಟುಸಿರು ಕೇಳತೊಡಗಿದರೆ ರೇಜಿಗೆಬಿದ್ದು ಹೋಗುವರು. ಕೆಲವು ಅಸೂಕ್ಷ್ಮ ಮನಸ್ಸಿನ ಮಕ್ಕಳು ಅವರ ಈ ತ್ಯಾಗವನ್ನು ತಮ್ಮದೇ ಹೆಚ್ಚುಗಾರಿಕೆಯೆಂದು ತಿಳಿದು ಅವರನ್ನು ಬದಿಗೊತ್ತಿ ಮುಂದೆ ನಡೆಯುವರು.
ಮಕ್ಕಳ ಮೇಲಿನ ಅತಿರೇಕದ ಪ್ರೀತಿಯಿಂದ ಮಕ್ಕಳು ದಾರಿತಪ್ಪುವ ಸಾಧ್ಯತೆಯೂ ಇಲ್ಲದಿಲ್ಲ. ಜಗತ್ತಿನ ಪುರಾಣಗಳ ತುಂಬೆಲ್ಲ ಧೃತರಾಷ್ಟ್ರರ ಕತೆಗಳಿವೆ, ಕೈಕೇಯಿಯ ಕತೆಗಳಿವೆ. ನಮ್ಮ ಕಣ್ಣೆದುರೇ ರಾಜಕಾರಣಿಗಳು, ಉದ್ಯಮಿಗಳು ತಮ್ಮ ಕುಡಿಗಳನ್ನು ಅತಿರೇಕದ ಪ್ರೀತಿಯ ಬಾವಿಗೆ ತಳ್ಳಿ ಹಾಳುಗೆಡವುತ್ತಿದ್ದಾರೆ, ನಾವೂ ನೋಡುತ್ತಿದ್ದೇವೆ. ಕೆಲವೊಮ್ಮೆ ಇಂಥವರು ನಮ್ಮೆದುರಿನ ಕನ್ನಡಿಯಲ್ಲೂ ಕಾಣುವುದುಂಟು!
ಈಗಿನ್ನೂ ಚಿಗಿತ ಮೊಳಕೆಗೆ ಕೊಡಗಟ್ಟಲೆ ನೀರು ಸುರಿದರೆ ಅದು ಕೊಳೆಯುವುದು ಸಹಜ. ಆಮೇಲೆ ನಾನು ಕಾಳಜಿಯಿಂದ ಅಷ್ಟು ನೀರು ಸುರಿದೆ, ಬೆಳೆದು ನೆರಳು ಕೊಡಲೇ ಇಲ್ಲ ಎಂದು ದೂರಿದರೆ ತಪ್ಪು ಯಾರದ್ದು?
ಇದೊಂದು ಕತೆಯನ್ನು ನೀವು ಓದಿರುತ್ತೀರಿ ಅಥವಾ ಕೇಳಿರುತ್ತೀರಿ.
ಒಂದೂರಿನಲ್ಲಿ ಒಬ್ಬ ಮಗ ಆಸ್ತಿಯ ಆಸೆಗಾಗಿ ತಾಯಿಯನ್ನು ಕೊಂದು ಹೆಣ ವಿಲೇವಾರಿ ಮಾಡಲು ಒಯ್ಯುತ್ತಿದ್ದನಂತೆ. ದಾರಿಯಲ್ಲಿ ಎಡವಿಬಿದ್ದ ಅವನನ್ನು ಸತ್ತ ತಾಯಿಯ ಜೀವಂತ ಕರುಳು, “ಮಗಾ, ಪೆಟ್ಟಾಯಿತೇನಪ್ಪ?” ಅಂತ ಕೇಳಿತಂತೆ.
ತಾಯಿಯ ಮೇಲೆ ಇಂಥ ಕೆಲಸಕ್ಕೆ ಬಾರದ ವಾತ್ಸಲ್ಯ ಹೇರುವುದನ್ನು ನಿಲ್ಲಿಸಬೇಕು. ಮಕ್ಕಳ ಮೇಲೆ ವ್ಯಾಮೋಹ ಇರುವ ತಾಯಿಯಷ್ಟೇ ಇಂಥಾ ಪ್ರಶ್ನೆ ಕೇಳಬಲ್ಲಳು. ನಿಜವಾದ ಪ್ರೀತಿ ಇದ್ದಿದ್ದರೆ ಆ ತಾಯಿಯ ಭೂತ ಬಂದು ಆ ಮಗನ ಕೆನ್ನೆಗೆ ಹೊಡೆಯುತ್ತಿತ್ತು! (ಕರುಳು ಮಾತಾಡುತ್ತದೆ ಎಂದಾದರೆ ಭೂತವೂ ಬರಬಹುದು!)
ಮುಂದುವರಿಯುವುದು….
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2024/11/21/prema-12/

