ನೀವೇನಾದರೂ ಸುಳ್ಳು ಗುರುವಿನ ಕೈಗೆ ಸಿಕ್ಕಿಹಾಕಿಕೊಂಡಿರಾದರೆ ಸಿಟ್ಟು ಮಾಡಿಕೊಳ್ಳಬೇಡಿ. ನಿಮ್ಮ ಮೂರ್ಖತನದ ಬಗ್ಗೆ ಸ್ವಲ್ಪ ಯೋಚಿಸಿ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.
ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.
ಅವನ ಅಪಾರ ಕರುಣೆಯನ್ನು ಸ್ಮರಿಸು !
ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.
ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.
~ ಶಮ್ಸ್ ತಬ್ರೀಝಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ಯಾವುದೋ ಔಷಧಿ ಮಾರಾಟ ಮಾಡುತ್ತಿದ್ದ, ಅದು ಯಾವ ಔಷಧಿಯೇನಲ್ಲ ಸಕ್ಕೆಯ ಗುಳಿಗೆಗಳು. “ ಈ ಮಾತ್ರೆಗಳನ್ನು ತೆಗೆದುಕೊಂಡವರು ಜಾಣರಾಗುತ್ತಾರೆ” ಎಂದು ನಸ್ರುದ್ದೀನ್ ಪ್ರಚಾರ ಮಾಡುತ್ತಿದ್ದ. ಮಾತ್ರೆ ಖರೀದಿಸಿದ ಯಾರೋ ಒಬ್ಬರು ಮರುದಿನ ಬಂದು ನಸ್ರುದ್ದೀನ್ ನ ತರಾಟೆಗೆ ತೆಗೆದುಕೊಂಡರು, “ ಇವು ಸಕ್ಕರೆಯ ಗುಳಿಗೆಗಳು, ಔಷಧಿ ಅಂತ ಹೇಳಿ ನೀನು ನನಗೆ ಮೋಸ ಮಾಡಿದೆ”.
ಮುಲ್ಲಾ ಉತ್ತರಿಸಿದ, “ ನೋಡಿ, ನೀವು ಈಗ ಜಾಣರಾಗಿದ್ದೀರಿ. ಇದು ಸಕ್ಕರೆಯ ಗುಳಿಗೆ ಅಂತ ನಿನ್ನೆ ನಿಮಗೆ ಗೊತ್ತಿರಲಿಲ್ಲ , ಇವತ್ತು ನಿಮಗೆ ಗೊತ್ತಾಗಿದೆ. ಹಾಗೆಂದ ಮೇಲೆ ನನ್ನ ಮಾತ್ರೆ ತನ್ನ ಕೆಲಸ ಮಾಡಿದೆ”.
ನೀವೇನಾದರೂ ಸುಳ್ಳು ಗುರುವಿನ ಕೈಗೆ ಸಿಕ್ಕಿಹಾಕಿಕೊಂಡಿರಾದರೆ ಸಿಟ್ಟು ಮಾಡಿಕೊಳ್ಳಬೇಡಿ. ನಿಮ್ಮ ಮೂರ್ಖತನದ ಬಗ್ಗೆ ಸ್ವಲ್ಪ ಯೋಚಿಸಿ. ಆ ಗುರು ನಿಮಗ್ಯಾವ ಮೋಸ ಮಾಡಲಿಲ್ಲ, ನಿಮ್ಮ ಮೂರ್ಖತನದ ಕಾರಣವಾಗಿ ನೀವು ಅವನ ಕೈಗೆ ಸಿಕ್ಕಿಹಾಕಿಕೊಂಡಿರಿ. ಈಗಲಾದರೂ ಅವ ಸುಳ್ಳು ಗುರು ಎನ್ನುವುದು ಗೊತ್ತಾಗಿದೆಯೆಂದರೆ, ಅಷ್ಟರಮಟ್ಚಿಗೆ ನಿಮ್ಮನ್ನು ಜಾಣರನ್ನಾಗಿಸಿದ್ದಕ್ಕೆ ನೀವು ಅವನಿಗೆ ಕೃತಜ್ಞರಾಗಿರಿ.
ಮತ್ತು ನಿಮಗೆ ನೆನಪಿರಲಿ, ಸರಿಯಾದ ಬಾಗಿಲಿಗೆ ಬರುವ ಮುನ್ನ ನೀವು ಹಲವಾರು ತಪ್ಪು ಬಾಗಿಲುಗಳನ್ನು ತಟ್ಟ ಬೇಕಾಗಬಹುದು. ಏಕೆಂದರೆ ನಿಜದ ಗುರು ದೊರಕುವುದು, ಯಾವಾಗಲೋ ಒಮ್ಮೆ ಮಾತ್ರ ಸಂಭವಿಸುವ ಒಂದು ಅಪರೂಪದ ವಿದ್ಯಮಾನ. ಇಡೀ ಜಗತ್ತನ್ನು ಹುಡುಕಾಡಿದಾಗ ಮಾತ್ರ ಎಲ್ಲೋ ಒಂದು ಕಡೆ ನಿಮಗೆ ನಿಜದ ಗುರು ಸಿಗಬಹುದು. ಇದಕ್ಕೆ ಮೊದಲು ನಿಮಗೆ ಭೇಟಿಯಾದ ಎಷ್ಟೋ ಕಪಟಿ ಗುರುಗಳು ಕೂಡ ನಿಮಗೆ ಒಂದಲ್ಲ ಒಂದು ರೀತಿಯಲ್ಲಿ ಪಾಠ ಕಲಿಸಿದ್ದಾರೆ. ನೀವು ಅವರನ್ನು ದ್ವೇಷ ಮಾಡುವ ಕಾರಣವಿಲ್ಲ. ಅವರೂ ನಿಮಗೆ ಸಹಾಯ ಮಾಡಿದ್ದಾರೆ.
ತಪ್ಪು ಬಾಗಿಲನ್ನು ತಟ್ಟುವುದು, ಅದು ತಪ್ಪು ಬಾಗಿಲು ಎನ್ನುವುದನ್ನ ಕಂಡುಕೊಳ್ಳುವುದು, ನಿಧಾನವಾಗಿಯಾದರೂ ನಿಮಗೆ ಯಾವುದು ತಪ್ಪು ಎನ್ನುವುದನ್ನ ಗೊತ್ತುಮಾಡುತ್ತದೆ. ಮತ್ತು ಹಾಗೆಯೇ ಎಲ್ಲರೂ ಯಾವುದು ಸರಿ ಎನ್ನುವುದನ್ನ ಕಲಿಯುತ್ತಾರೆ.
Source ~ Ôshô / The ~ Secret / Chapter::2

