ಸಮಾಧಿ ಎಂತಹ ಸ್ಥಿತಿ ಎಂದರೆ ನಿಮ್ಮೊಳಗೆ ಅರಿವು ಇದೆ ಆದರೆ ನಿಮ್ಮೊಳಗೆ ಅರಿವು ಹೊಂದುವಂಥ ಯಾವ ಸಂಗತಿಯೂ ಇಲ್ಲ. ಇರುವುದು ಕೇವಲ ಸಾಕ್ಷಿ ಮಾತ್ರ ಆದರೆ ಸಾಕ್ಷಿಯಾಗುವಂಥದು ಏನೂ ಇಲ್ಲ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಮೆಡಿಟೇಶನ್ ನಲ್ಲಿ ಎರಡು ಭಾಗಗಳು, ಆರಂಭ ಮತ್ತು ಕೊನೆ. ಆರಂಭವನ್ನು ಧ್ಯಾನ ಎನ್ನುತ್ತಾರೆಯಾದರೆ ಕೊನೆಯದು ಸಮಾಧಿ. ಧ್ಯಾನ ಬೀಜವಾದರೆ ಸಮಾಧಿ ಹೂವು. ಧ್ಯಾನ ಎಂದರೆ ಬುದ್ಧಿ-ಮನಸ್ಸಿನ ( mind) ಎಲ್ಲ ಕಾರ್ಯಾಚರಣೆಗಳ ಬಗ್ಗೆ, ಎಲ್ಲ ಲೇಯರ್ ಗಳ ಬಗ್ಗೆ, ನಿಮ್ಮ ನೆನಪುಗಳ ಬಗ್ಗೆ, ನಿಮ್ಮ ಬಯಕೆಗಳ ಬಗ್ಗೆ, ನಿಮ್ಮ ಕನಸುಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು. ನಿಮ್ಮೊಳಗೆ ನಡೆಯುವ ಎಲ್ಲ ಸಂಗತಿಗಳ ಬಗ್ಗೆ ಅರಿವು ಹೊಂದುವುದು.
ಧ್ಯಾನ ಅರಿವು ಆದರೆ, ಯಾವಾಗ ಈ ಅರಿವು ಆಳವಾಗಿ, ಗಾಢವಾಗಿ, ಪರಿಪೂರ್ಣವಾಗಿ ಬೆಂಕಿಯ ಥರ ಮೈಂಡ್ ನ ಎಲ್ಲ ಕಾರ್ಯಾಚರಣೆಗಳನ್ನ ನುಂಗಿ ನೀರು ಕುಡಿಯತ್ತದೆಯೋ ಆಗ ನೀವು ಸಮಾಧಿಯನ್ನ ತಲುಪುತ್ತೀರಿ. ಸಮಾಧಿ ನಿಮ್ಮ ವಿಚಾರಗಳನ್ನ, ಬಯಕೆಗಳನ್ನ, ಮಹತ್ವಾಕಾಂಕ್ಷೆಗಳನ್ನ, ನಿರೀಕ್ಷೆಗಳನ್ನ, ಕನಸುಗಳನ್ನ, ಮೈಂಡ್ ತನ್ನೊಳಗೆ ತುಂಬಿಕೊಂಡಿರುವ ಎಲ್ಲವನ್ನೂ ಇಲ್ಲವಾಗಿಸುತ್ತದೆ.
ಸಮಾಧಿ ಎಂತಹ ಸ್ಥಿತಿ ಎಂದರೆ ನಿಮ್ಮೊಳಗೆ ಅರಿವು ಇದೆ ಆದರೆ ನಿಮ್ಮೊಳಗೆ ಅರಿವು ಹೊಂದುವಂಥ ಯಾವ ಸಂಗತಿಯೂ ಇಲ್ಲ. ಇರುವುದು ಕೇವಲ ಸಾಕ್ಷಿ ಮಾತ್ರ ಆದರೆ ಸಾಕ್ಷಿಯಾಗುವಂಥದು ಏನೂ ಇಲ್ಲ.
ಧ್ಯಾನ ದಿಂದ ಶುರು ಮಾಡಿ, ಸಮಾಧಿಯೊಂದಿಗೆ, ಆನಂದದಲ್ಲಿ ಕೊನೆಯಾಗಿ ಆಗ ನಿಮಗೆ ಗೊತ್ತಾಗುತ್ತದೆ ದೈವಿಕತೆಯ ಬಗ್ಗೆ.
ಇದು ಕಲ್ಪಿತ ಸಿದ್ಧಾಂತವಲ್ಲ ಅನುಭವ. ಇದನ್ನು ಗೊತ್ತು ಮಾಡಿಕೊಳ್ಳಲು ನೀವು ಇದನ್ನು ಬದುಕಬೇಕೇ ಹೊರತು ಬೇರೆ ದಾರಿ ಇಲ್ಲ.
ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.
“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “
“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.
ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,
“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “
ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”
Source: ØshØ / I• Am• That – Isha `Upanishad/ Chapter;2

