ಸುಮ್ಮನೇ ಗಮನಿಸಿ, ಭಯ ಎಂದು ಅದನ್ನ ಗುರುತಿಸಬೇಡಿ, ಹಾಗೆ ಅದಕ್ಕೆ ಆ ಹೆಸರು ಇಡಬೇಡಿ. ಭಯ ನಿಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳಲಿ, ನಡುಗಿಸಲಿ – ಅದ್ಭುತ ಅನುಭವ ಇದು! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಯದ ಕುರಿತಾಗಿ ಯಾವ ದೃಷ್ಟಿಕೋನವನ್ನೂ ಬೆಳೆಸಿಕೊಳ್ಳಬೇಡಿ. ನನ್ನ ಮಾತು ನೀವು ಕೇಳುವುದಾದರೆ ಭಯವನ್ನು ನೀವು ಆ ಹೆಸರಿನಿಂದ ಕರೆಯಲೇಬೇಡಿ. ನೀವು ಅದನ್ನ ಭಯ ಎಂದು ಗುರುತಿಸಿದ ಕ್ಷಣದಲ್ಲಿಯೇ ನೀವು ಅದರ ಕುರಿತಾಗಿ ನಿಮ್ಮ ಅಭಿಪ್ರಾಯವೊಂದನ್ನ ರೂಪಿಸಿಕೊಂಡು ಬಿಟ್ಚಿದ್ದೀರಿ.
ಎಲ್ಲ ಅನುಭವಗಳಿಗೂ ಒಂದೊಂದು ಹೆಸರನ್ನಿಡುವುದನ್ನ ನಾವು ಮೊದಲು ನಿಲ್ಲಿಸಬೇಕು. ಆ ಅನುಭವವನ್ನ ಸುಮ್ಮನೇ ಗಮನಿಸಿ ಅದು ಇರುವ ಹಾಗೆ. ಅದು ನಿಮ್ಮನ್ನು ಆವರಿಸಿಕೊಳ್ಳಲಿ, ಅದಕ್ಕೆ ಯಾವ ಹೆಸರು ಕೊಡಬೇಡಿ. ಈ ವಿಷಯದಲ್ಲಿ ಅಜ್ಞಾನಿಗಳಾಗಿಬಿಡಿ. ಹಾಗೆ ನೋಡಿದರೆ ಅಜ್ಞಾನ (ignorance) ಎನ್ನುವುದು ಒಂದು ಪ್ರಚಂಡವಾದ ಧ್ಯಾನಸ್ಥ ಸ್ಥಿತಿ. ಹಾಗೇ ಇರಲು ಪ್ರಯತ್ನ ಮಾಡಿ. ಮೈಂಡ್ ಗೆ ಯಾವ ಮ್ಯಾನುಪ್ಯುಲೇಷನ್ ಮಾಡಲಿಕ್ಕೂ ಅವಕಾಶ ಮಾಡಿಕೊಡಬೇಡಿ. ಈ ಅನುಭವಗಳನ್ನು ವಿವರಿಸುವ ಸಲುವಾಗಿ, ಭಾಷೆ ಬಳಸಲು, ಪದಗಳನ್ನು ಉಪಯೋಗಿಸಲು, ವಿಭಾಗಗಳನ್ನು ಮಾಡಲು ಮೈಂಡ್ ಗೆ ಅನುಮತಿ ನೀಡಬೇಡಿ, ಏಕೆಂದರೆ ಇದು ಒಂದು ಇಡೀ ಹೊಸ ಪ್ರಕ್ರಿಯೆಯ ಶುರುವಾತಿಗೆ ಕಾರಣವಾಗುತ್ತದೆ. ಒಂದು ಇನ್ನೊಂದಕ್ಕೆ ಕಾರಣವಾಗುತ್ತ ಸಂಕಟಗಳ ಜಾಲ ಸೃಷ್ಟಿಯಾಗುತ್ತದೆ.
ಸುಮ್ಮನೇ ಗಮನಿಸಿ, ಭಯ ಎಂದು ಅದನ್ನ ಗುರುತಿಸಬೇಡಿ, ಹಾಗೆ ಅದಕ್ಕೆ ಆ ಹೆಸರು ಇಡಬೇಡಿ. ಭಯ ನಿಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳಲಿ, ನಡುಗಿಸಲಿ – ಅದ್ಭುತ ಅನುಭವ ಇದು. ಮೂಲೆಯಲ್ಲಿ ಹೋಗಿ ಅಡಗಿಕೊಳ್ಳಿ, ಚಾದರ ಹೊದ್ದುಕೊಳ್ಳಿ. ಭಯ ಆದಾಗ ಪ್ರಾಣಿಗಳು ಏನು ಮಾಡುತ್ತವೆಯೋ ಹಾಗೆ ಮಾಡಿ. ಭಯ ನಿಮ್ಮನ್ನು ಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಂಡಿತೆಂದರೆ ಆ ದಿಗ್ಭ್ರಮೆಯಲ್ಲಿ ಕೊನೆಗೆ ನಿಮ್ಮ ಮೈ ಮೇಲಿನ ಕೂದಲು ಎದ್ದು ನಿಲ್ಲುತ್ತವೆ. ಆಗ ನಿಮಗೆ ಗೊತ್ತಾಗುತ್ತದೆ ಭಯ ಎಂತಹ ಸುಂದರ ವಿದ್ಯಮಾನ ಎನ್ನುವುದು. ಆ ಪ್ರಕ್ಷುಭ್ತತೆಯ ಕ್ಷಣದಲ್ಲಿ, ಆ ಚಂಡಮಾರುತದ ಗಳಿಗೆಯಲ್ಲಿ ನಿಮಗೆ ಅರಿವಾಗುತ್ತದೆ, ನಿಮ್ಮಳಗೊಂದು ಇನ್ನೂ ಯಾವ ಸ್ಪರ್ಶಕ್ಕೂ ತೆರೆದುಕೊಳ್ಳದ ಬಿಂದು ಇದೆ ಎನ್ನುವುದು.
ಒಮ್ಮೆ, ಒಬ್ಬ ಹೆಣ್ಣುಮಗಳು ತನ್ನ ಮಗನೊಂದಿಗೆ ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಳು.
“ ಹಿರಿಯರೇ, ಈ ನನ್ನ ಮಗ ತುಂಬಾ ಹಟಮಾರಿಯಾಗುತ್ತಿದ್ದಾನೆ, ಒರಟನಾಗುತ್ತಿದಿದ್ದಾನೆ ಏನಾದರೂ ಮಾಡಿ ಅವನೊಳಗೆ ಸ್ವಲ್ಪ ಹೆದರಿಕೆಯನ್ನು ಹುಟ್ಟಿಸಿ, ಇಲ್ಲವಾದರೆ ಅವನು ನನ್ನ ಕೈಮೀರಿ ಹೋಗುತ್ತಾನೆ “
ಮುಲ್ಲಾ ಕ್ರೂರವಾಗಿ ಆ ಮಗನ ಕಣ್ಣಲ್ಲೊಮ್ಮೆ ದಿಟ್ಟಿಸಿ ನೋಡಿ ಅಮ್ಮನ ಮಾತು ಕೇಳುವಂತೆ ಆದೇಶ ಮಾಡಿದ. ಆಮೇಲೆ ತನ್ನ ಮುಖವನ್ನು ಭಯಂಕರವಾಗಿ ಕಿವಿಚಿ, ಕಣ್ಣುಗುಡ್ಡೆಗಳನ್ನು ತಿರುಗಿಸುತ್ತ ಆ ಮಗನ ಮುಖವನ್ನೇ ದಿಟ್ಟಿಸಿ ನೋಡತೊಡಗಿದ. ಅವನು ಎಷ್ಟು ಭೀಕರವಾಗಿ ಕಾಣಿಸುತ್ತಿದ್ದನೆಂದರೆ ತಾಯಿ ಹೆದರಿ ಮೂರ್ಛೆ ಹೋಗಿಬಿಟ್ಟಳು. ಮುಲ್ಲಾ ಕೋಣೆಯಿಂದ ಹೊರಗೆ ಓಡಿ ಹೋಗಿಬಿಟ್ಟ.
ತಾಯಿ ಮೂರ್ಛೆಯಿಂದ ಹೊರಗೆ ಬಂದ ಮೇಲೆ ನಸ್ರುದ್ದೀನ್ ನನ್ನು ತರಾಟೆಗೆ ತೆಗೆದುಕೊಂಡಳು, “ ನಿಮಗೆ ನನ್ನ ಮಗನಲ್ಲಿ ಹೆದರಿಕೆ ತುಂಬುವಂತೆ ಕೇಳಿಕೊಂಡಿದ್ದೆ ನನ್ನಲ್ಲಲ್ಲ “
ತಾಯಿಯ ಮಾತಿಗೆ ಮುಲ್ಲಾ ಉತ್ತರಿಸತೊಡಗಿದ “ ಅಮ್ಮಾ ಒಮ್ಮೆ ಭಯವನ್ನು ಹುಟ್ಟಿಸಿದ ಮೇಲೆ ಅದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಭಯಕ್ಕೆ ವಿಶೇಷ ಪ್ರೀತಿ ಪಾತ್ರರು ಯಾರೂ ಇಲ್ಲ. ನೀವು ನೋಡಲಿಲ್ಲ ಅನಿಸತ್ತೆ ನಾನೂ ಕೋಣೆ ಬಿಟ್ಟು ಓಡಿ ಹೊಗಿದ್ದೆ “
ÕshŌ. / 365 Daily Meditation* For The Hereand Now/ Day: 33

