ದಾವ್ ಸಂತ, ವಿದ್ವಾಂಸ ಜುವಾಂಗ್ ಜಿಯನ್ನು ಕರೆತರಲು ರಾಜ ಭಟರನ್ನು ಕಳಿಸಿದ. ಆದರೆ ಜುವಾಂಗ್ ಜಿ… (ಮುಂದೆ ಓದಿ) । ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ದಾವ್ ಸಂತ ಚುವಾಂಗ್ ಜಿ ಪು ಕೊಳದಲ್ಲಿ ಮೀನು ಹಿಡಿಯುತ್ತ ತನ್ನ ದಿನಗಳನ್ನು ಕಳೆಯುತ್ತಿದ್ದ.
ಇಂಥಾ ಬುದ್ಧಿವಂತ ಮನುಷ್ಯ ಅಲ್ಲಿ ಕಾಲಹರಣ ಮಾಡುತ್ತಿದ್ದಾನೆ, ಅವನನ್ನು ರಾಜಧಾನಿಗೆ ಕರೆಸಿಕೊಂಡು ಮಹತ್ವದ ಜವಾಬ್ದಾರಿ ವಹಿಸಬೇಕೆಂದು ಚು ಸಾಮ್ರಾಜ್ಯದ ರಾಜನಿಗೆ ಅನ್ನಿಸಿತು. ಅನ್ನಿಸಿದ್ದೇ ತನ್ನ ಭಟರನ್ನು ಕರೆದು ಚುವಾಂಗ್ ಜಿಯನ್ನು ಕರೆತರುವಂತೆ ಆದೇಶ ನೀಡಿದ.
ಬಟರು ಪು ಕೊಳದ ಬಳಿ ಬಂದರು. ಚುವಾಂಗ್ ಜಿ ಮೀನು ಹಿಡಿಯುತ್ತಿದ್ದ. ಭಟರು ಕೂಗಿ ಜರೆದರೂ ತಿರುಗಿ ನೋಡಲಿಲ್ಲ.
ಕೊನೆಗೆ ಭಟರು ನಿಂತಲ್ಲಿಂದಲೇ ರಾಜಾಜ್ಞೆಯನ್ನು ಅರುಹಿದರು.
ಗಾಳಕ್ಕೆ ಕಚ್ಚಿಕೊಂದ ಮೀನನ್ನು ಬುಟ್ಟಿಗೆ ಹಾಕುತ್ತಾ ಚುವಾಂಗ್ ಜಿ, “ಅರಮನೆಯಲ್ಲಿರೋ ಪೂರ್ವಜರ ಕೊಠಡಿಯಲ್ಲೊಂದು ಮೂರು ಸಾವಿರ ವರ್ಷಗಳಷ್ಟು ಪುರಾತನ ಆಮೆಯೊಂದಿದೆ ಎಂದು ಕೇಳಿದ್ದೇನೆ. ಅದನ್ನು ರಾಜ ಜೋಪಾನವಾಗಿರಿಸಿ, ಪ್ರತಿದಿನ ಪೂಜೆ ಮಾಡುತ್ತಾನಂತೆ. ಆ ಆಮೆ ಬದುಕಿದೆಯೋ ಸತ್ತಿದೆಯೋ? ಬದುಕಿದ್ದರೆ ಯಾವುದು ಒಳ್ಳೆಯದು, ಸತ್ತಂತೆ ಒಂದೆಡೆ ಬಿದ್ದುಕೊಂಡು ಪೂಜೆ ಮಾಡಿಸಿಕೊಳ್ಳೋದೋ, ಮಣ್ಣಿನಲ್ಲಿ ಹೊರಳುತ್ತ ಬಾಲ ಅಲ್ಲಾಡಿಸಿಕೊಂಡು ಬದುಕಿರೋದೋ?”
“ಮಣ್ಣಿನಲ್ಲಿ ಹೊರಳುತ್ತ ಬಾಲ ಅಲ್ಲಾಡಿಸಿಕೊಂಡು ಬದುಕಿರೋದು” ಭಟರು ಒಂದು ಕ್ಷಣವೂ ಆಲೋಚಿಸದೆ ಒಕ್ಕೊರಲಿನಲ್ಲಿ ಉತ್ತರಿಸಿದರು. “ಸರಿ ಮತ್ತೆ!” ಚುವಾಂಗ್ ಜಿ ನಗುತ್ತ ನುಡಿದ, “ನಾನೂ ಮಣ್ಣಿನಲ್ಲಿ ಬಾಲ ಅಲ್ಲಾಡಿಸಿಕೊಂಡಿರಲು ಬಯಸ್ತೇನೆ. ಹೋಗಿ ಹೇಳಿ ನಿಮ್ಮ ದೊರೆಗೆ”

