ಸತ್ಯ ನಿಮಗೆ ಕೇಳಿಸಿದಾಗ, ನಿಮಗೆ ಸತ್ಯದ ಹಾಜರಾತಿಯ ಅನುಭವ ಆದಾಗ, ಸತ್ಯದ ಕೊಡುಕೊಳ್ಳುವಿಕೆಗೆ ನೀವು ಹತ್ತಿರವಾದಾಗ, ನಿಮ್ಮೊಳಗಿನ ಏನೋ ಒಂದು ಅದನ್ನು ತಕ್ಷಣ ಗುರುತಿಸುತ್ತದೆ, ಯಾವ ವಾದಗಳಿಗೂ ಮುಂದಾಗದೆ. ಇದು ಒಪ್ಪಿಕೊಳ್ಳುವ, ನಂಬುವ ವಿಷಯ ಅಲ್ಲ ಇದು Re-cognise ಮಾಡುವ ವಿಷಯ. । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
RE – COGNITION
RE – COLLECTION
RE – MEMBRANCE
ಮಾಸ್ಟರ್ ನ ಕೆಲಸ ನಿಮಗೆ ನೆನಪು ( Re-membrance) ಮಾಡಿಸುವುದು. ಮೈಂಡ್ ಗೆ Re-mind ಮಾಡಬೇಕಾಗುತ್ತದೆ knowing ಎಂದರೆ ಬೇರೇನೂ ಅಲ್ಲ, ಅದು Re-cognition, Re-collection, ಮತ್ತು Re-membrance ಎನ್ನುವುದನ್ನ. ನಿಮಗೆ ಸತ್ಯ ಎದುರಾದಾಗ, ನಿಮಗೆ ಮಾಸ್ಟರ್ ಎದುರಾದಾಗ, ನೀವು ಅವನ ಇರುವಿಕೆಯಲ್ಲಿನ ಸತ್ಯವನ್ನು ಗಮನಿಸಬಲ್ಲಿರಾದರೆ, ನಿಮ್ಮೊಳಗಿನ ಏನೋ ಒಂದು ಥಟ್ಟನೇ ಅದನ್ನು Re-cognise ಮಾಡುತ್ತದೆ. ಒಂದೇ ಒಂದು ಕ್ಷಣ ಕೂಡ ತಡ ಮಾಡುವುದಿಲ್ಲ. ನೀವು ಅದರ ಬಗ್ಗೆ ಯೋಚಿಸುವುದೇ ಇಲ್ಲ, ಅದು ನಿಜವೋ ಅಲ್ಲವೋ ಎನ್ನುವುದನ್ನ – ಯೋಚಿಸುವುದಕ್ಕೆ ಸಮಯ ಬೇಕು.
ಸತ್ಯ ನಿಮಗೆ ಕೇಳಿಸಿದಾಗ, ನಿಮಗೆ ಸತ್ಯದ ಹಾಜರಾತಿಯ ಅನುಭವ ಆದಾಗ, ಸತ್ಯದ ಕೊಡುಕೊಳ್ಳುವಿಕೆಗೆ ನೀವು ಹತ್ತಿರವಾದಾಗ, ನಿಮ್ಮೊಳಗಿನ ಏನೋ ಒಂದು ಅದನ್ನು ತಕ್ಷಣ ಗುರುತಿಸುತ್ತದೆ, ಯಾವ ವಾದಗಳಿಗೂ ಮುಂದಾಗದೆ. ಇದು ಒಪ್ಪಿಕೊಳ್ಳುವ, ನಂಬುವ ವಿಷಯ ಅಲ್ಲ ಇದು Re-cognise ಮಾಡುವ ವಿಷಯ. ಮತ್ತು ನಿಮಗೆ ಅದನ್ನು ಹೀಗೆ Re-cognise ಮಾಡುವುದು ಸಾಧ್ಯವಾಗುವುದಿಲ್ಲ, ಅದು ಹೇಗೋ, ಎಲ್ಲೋ, ನಿಮ್ಮ ಆಳದಲ್ಲಿ ನಿಮಗೆ ಗೊತ್ತಿರದೇ ಹೋದರೆ.
ಇದು ಝೆನ್ ನ ಮೂಲಭೂತ ಅನುಸಂಧಾನ.
ಜಪಾನ್ ನ ಮಹತ್ವದ ಝೆನ್ ಸಾಧಕರಲ್ಲಿ ಮಾಸ್ಟರ್ ಬಾಂಕಿಯೂ ಒಬ್ಬ. ವರ್ಷಗಟ್ಟಲೆ ಋಷಿಯಂತೆ ಬದುಕಿದ್ದ ಬಾಂಕಿ, ತನಗೆ ಜ್ಞಾನೋದಯವಾದ ಮೇಲೂ , ಝೆನ್ ಸಂಸ್ಥಾನಗಳ ಗೌರವ ಪದವಿಗಳನ್ನು ತಿರಸ್ಕರಿಸಿ, ಅಡುಗೆ ಮನೆಯಲ್ಲಿ ಬಾಣಸಿಗರಿಗೆ ಸಹಾಯ ಮಾಡುತ್ತ, ತನ್ನ ಶಿಷ್ಯರಿಗೆ ಪಾಠ ಹೇಳಿಕೊಂಡು ಸಾಮಾನ್ಯರಂತೆ ಬದುಕಿದ್ದ. ಬಾಂಕಿಯ ಅಪಾರ ಜ್ಞಾನದ ಅರಿವಿದ್ದ ಜನ ದೂರದ ಊರುಗಳಿಂದ ಅವನ ಮಾತು ಕೇಳಲು ಬರುತ್ತಿದ್ದರು.
ಹೀಗಿರುವಾಗ ಒಮ್ಮೆ ಅವನ ಶಿಷ್ಯನೊಬ್ಬ ಕಳ್ಳತನ ಮಾಡುವಾಗ ಉಳಿದ ಶಿಷ್ಯರ ಕೈಗೆ ಸಿಕ್ಕು ಬಿದ್ದ. ಒಬ್ಬ ಯುವ ಸನ್ಯಾಸಿ ಕಳ್ಳ ಶಿಷ್ಯನನ್ನು ಎಳೆದುಕೊಂಡು ಬಂದು ಬಾಂಕಿಯ ಮುಂದೆ ನಿಲ್ಲಿಸಿದ. ಆ ಕಳ್ಳ ಶಿಷ್ಯನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವುದು ಉಳಿದ ಎಲ್ಲರ ಅಪೇಕ್ಷೆಯಾಗಿತ್ತು. ಆದರೆ ಮಾಸ್ಟರ್ ಬಾಂಕಿ ತನ್ನ ಶಿಷ್ಯರ ದೂರನ್ನು ನಿರ್ಲಕ್ಷ ಮಾಡಿದ.
ಕೆಲ ದಿನಗಳ ನಂತರ ಕಳ್ಳ ಶಿಷ್ಯ ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ. ಈ ಬಾರಿಯೂ ಬಾಂಕಿ ಕಳ್ಳನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವ ಇತರೆ ಶಿಷ್ಯರ ಫಿರ್ಯಾದನ್ನು ವಜಾ ಮಾಡಿದ.
ಬಾಂಕಿಯ ಈ ವರ್ತನೆಯಿಂದ ಅಸಮಾಧಾನಗೊಂಡ ಶಿಷ್ಯರೆಲ್ಲ ಸೇರಿ ಮಾಸ್ಟರ್ ಬಾಂಕಿಗೊಂದು ಪತ್ರ ಬರೆದರು. ಆ ಕಳ್ಳನನ್ನು ಆಶ್ರಮ ಬಿಟ್ಟು ಹೊರಗೆ ಹಾಕದಿದ್ದರೆ, ತಾವೆಲ್ಲ ಆಶ್ರಮ ತೊರೆದು ಹೋಗುವುದಾಗಿ ಬೆದರಿಕೆ ಹಾಕಿದ್ದರು.
ಪತ್ರ ಓದಿದ ಮಾಸ್ಟರ್ ಬಾಂಕಿ ತನ್ನ ಎಲ್ಲ ಶಿಷ್ಯರನ್ನೂ ಸುತ್ತ ಕೂರಿಸಿಕೊಂಡು ಮಾತನಾಡತೊಡಗಿದ.
“ ನೀವೆಲ್ಲ ಜ್ಞಾನಿಗಳಿದ್ದೀರಿ, ನಿಮಗೆ ಸರಿ ತಪ್ಪುಗಳ ಅರಿವಾಗುತ್ತದೆ. ಬೇಕಾದರೆ, ನೀವು ಬೇರೆ ಆಶ್ರಮಕ್ಕೆ ಹೋಗಿ ಅಭ್ಯಾಸ ಮುಂದುವರೆಸಬಹುದು. ಆದರೆ ನೀವು ಯಾರನ್ನ ಕಳ್ಳ ಎಂದು ದೂಷಿಸುತ್ತಿದ್ದೀರೋ ಆ ಪಾಪದ ಮನುಷ್ಯನಿಗೆ ಸರಿ – ತಪ್ಪು ಗಳು ಗೊತ್ತಾಗುವುದಿಲ್ಲ. ನಾನೂ ಅವನನ್ನು ಆಶ್ರಮದಿಂದ ಹೊರಗೆ ಕಳುಹಿಸಿ ಬಿಟ್ಟರೆ, ಅವನಿಗೆ ಬೇರೆ ಯಾರು ಹೇಳಿಕೊಡುತ್ತಾರೆ? ಅವನಿಗೆ ಸರಿ ತಪ್ಪುಗಳ ನಡುವೆ ತಾರತಮ್ಯ ಮಾಡುವುದು ಗೊತ್ತಾಗುವ ತನಕ ನಾನು ಅವನನ್ನು ಬಿಟ್ಟು ಕೊಡುವುದಿಲ್ಲ. “
ಮಾಸ್ಟರ್ ಬಾಂಕಿಯ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ, ಕಳ್ಳ ಶಿಷ್ಯನ ಕಣ್ಣುಗಳು ತುಂಬಿ ಬಂದವು. ಆ ಕ್ಷಣದಲ್ಲಿಯೇ ಅವನ ಕಳ್ಳತನದ ಚಟ ಕರಗಿ ಹೋಗಿ ಬಿಟ್ಟಿತು.
~ Osho / Ah This! / Chapter: 1

