ನೀವು ಪ್ರಶ್ನೆ ಕೇಳಿ ನಾನು ಉತ್ತರ ಕೊಟ್ಟರೂ ಇದು ಮೂರ್ಖತನವೇ ಏಕೆಂದರೆ ಪ್ರಶ್ನೆ ಕೇಳುತ್ತಿರುವುದು ಒಂದು ಹ್ಯೂಮನ್ ಮೈಂಡ್ ಆದರೆ ಉತ್ತರ ಕೊಡುತ್ತಿರುವುದು ಇನ್ನೊಂದು ಹ್ಯೂಮನ್ ಮೈಂಡ್. ಇದು ಕೇವಲ ಮೈಂಡ್ ನ ಕಣ್ಣು ಮುಚ್ಚಾಲೆಯಾಟ. ಯಾರು ಪ್ರಶ್ನೆ ಕೇಳುತ್ತಾರೆ ಯಾರು ಉತ್ತರ ನೀಡುತ್ತಾರೆ ಎನ್ನುವುದು ಯಾವ ವ್ಯತ್ಯಾಸಕ್ಕೂ ಕಾರಣವಾಗುವುದಿಲ್ಲ... । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಲಿತದ್ದನ್ನು ಬಸಿದು ಖಾಲಿ ಮಾಡಿದಾಗ
ಎದೆ ತಿಳಿಯಾಗುವುದು.
ಸುತ್ತ ಬದುಕಿಗೆ ಸಾಕ್ಷಿಯಾದಾಗ
ಪ್ರಕ್ಷುಬ್ದತೆ ಹೂವಾಗಿ, ಹಣ್ಣಾಗಿ, ಕಳಚಿಕೊಂಡು
ಬೇರಿಗೆ ಶರಣಾಗುವುದು.
ಜಗತ್ತಿನ ಪ್ರತಿ ಬದುಕು ಮೂಲಕ್ಕೆ ಮರಳುತ್ತದೆ
ಮರಳಿದಾಗಲೆ ಅರಳುವುದು ಸಾಧ್ಯ.
ಎಡವಿ ಬಿದ್ದಿದ್ದಾರೆ ಮರಳುವ ಹಾದಿ ಮರೆತವರು,
ನೆನಪಿದ್ದವರು ಮಾತ್ರ
ಸಹಜವಾಗಿ ಸಹಿಷ್ಣುಗಳು, ನಿರಾಸಕ್ತರು,
ಹಿರಿಯಜ್ಜಿಯಂತೆ ಅಂತಃಕರುಣಿಗಳು
ಮಹಾ ರಾಜರಂತೆ ಘನ ಗಂಭೀರರು.
ಅಪರೂಪದ ತಾವೋದಲ್ಲಿ ಮುಳುಗಿದವರು ಮಾತ್ರ
ಬದುಕಿನ ಯಾವ ಸವಾಲಿಗೂ ಸಿದ್ಧರು
ಎದುರಾದರೆ ಸಾವಿಗೂ.
~ ಲಾವೋತ್ಸೇ
ಈ ಮೈಂಡ್ ಎನ್ನುವುದು ಪ್ರಶ್ನೆ ಮತ್ತು ಉತ್ತರಗಳನ್ನು ಹುಟ್ಟುಹಾಕುವ ಯಂತ್ರ. ಯಾವ ಉತ್ತರವೂ ನಿಮ್ಮನ್ನು ತೃಪ್ತಿಗೊಳಿಸುವುದು ಸಾಧ್ಯವಿಲ್ಲ ಏಕೆಂದರೆ, ಯಾಕೆ? ಎನ್ನುವುದನ್ನ ನೀವು ಮತ್ತೆ ಮತ್ತೆ ಕೇಳಬಹುದು, ಇದು ಇನ್ನೂ ಸಾವಿರಾರು ಪ್ರಶ್ನೆಗಳ ಸೃಷ್ಟಿಗೆ ಕಾರಣವಾಗಿದೆ.
ಯಾವಾಗ ಮನುಷ್ಯನ ಮೈಂಡ್ ಆತಂಕಕ್ಕೊಳಗಾಗುತ್ತದೆಯೋ ಆಗ ಅದು ಪ್ರಶ್ನೆಗಳನ್ನು ಸೃಷ್ಟಿ ಮಾಡುತ್ತದೆ ಮತ್ತು ಆ ಪ್ರಶ್ನೆಗಳಿಗೆ ತಾನೇ ಉತ್ತರಗಳನ್ನೂ ಸೂಚಿಸುತ್ತದೆ. ಈ ಪ್ರಶ್ನೆಗಳು ಅರ್ಥಹೀನ ಹಾಗಾಗಿಯೇ ಈ ಪ್ರಶ್ನೆಗಳಿಗೆ ಕೊಡಲಾಗಿರುವ ಉತ್ತರಗಳು ಇನ್ನೂ ಹೆಚ್ಚು ಅರ್ಥಹೀನ. ಆದರೆ ಈ ಪ್ರಶ್ನೆಗಳನ್ನ ನಾವೇ ಕಟ್ಟಿಕೊಂಡಿರುವುದರಿಂದ ಇವುಗಳಿಗೆ ಉತ್ತರಗಳು ಸಿಗುವ ತನಕ ನಮಗೆ ಸಮಾಧಾನವಾಗುವುದಿಲ್ಲ. ಆದ್ದರಿಂದ ನಾವು ಉತ್ತರಗಳನ್ನು ಹುಡುಕುತ್ತಲೇ ಹೋಗುತ್ತೇವೆ ಮತ್ತು ಈ ವಿಷವೃತ್ತವನ್ನು ಜೀವಂತವಾಗಿ ಇಡುತ್ತೇವೆ. ಈ ಪ್ರಕ್ರಿಯೆಯೊಳಗಿನ ಮೂರ್ಖತನವನ್ನು ಗುರುತಿಸುವುದೆಂದರೆ ನಮ್ಮ ಜೊತೆಗೆ ನಾವೇ ಮಾತನಾಡಿಕೊಂಡಂತೆ. ನೀವು ಪ್ರಶ್ನೆ ಕೇಳಿ ನಾನು ಉತ್ತರ ಕೊಟ್ಟರೂ ಇದು ಮೂರ್ಖತನವೇ ಏಕೆಂದರೆ ಪ್ರಶ್ನೆ ಕೇಳುತ್ತಿರುವುದು ಒಂದು ಹ್ಯೂಮನ್ ಮೈಂಡ್ ಆದರೆ ಉತ್ತರ ಕೊಡುತ್ತಿರುವುದು ಇನ್ನೊಂದು ಹ್ಯೂಮನ್ ಮೈಂಡ್. ಇದು ಕೇವಲ ಮೈಂಡ್ ನ ಕಣ್ಣು ಮುಚ್ಚಾಲೆಯಾಟ. ಯಾರು ಪ್ರಶ್ನೆ ಕೇಳುತ್ತಾರೆ ಯಾರು ಉತ್ತರ ನೀಡುತ್ತಾರೆ ಎನ್ನುವುದು ಯಾವ ವ್ಯತ್ಯಾಸಕ್ಕೂ ಕಾರಣವಾಗುವುದಿಲ್ಲ.
ಈ ಪ್ರಶ್ನೋತ್ತರಗಳಿಂದಾಗಿ ನಾವು ಒಂದು ದೊಡ್ಡ ಗೊಂದಲವನ್ನು ಸೃಷ್ಟಿ ಮಾಡಿಕೊಂಡು ಬಿಟ್ಟಿದ್ದೇವೆ. ಆದರೆ ಈ ವರೆಗೂ ಯಾರಿಗೂ ಒಂದು ಸಮಾಧಾನಕರ ಉತ್ತರ ಸಿಕ್ಕಿಲ್ಲ. ಪ್ರಶ್ನೆಗಳು ಮೊದಲು ಎಲ್ಲಿದ್ದವೂ ಇನ್ನೂ ಅಲ್ಲಿಯೇ ಇವೆ. ಈ ಪ್ರಶ್ನೋತ್ತರಗಳ ಪ್ರಕ್ರಿಯೆ ಅರ್ಥಹೀನ, ಉಪಯೋಗಕ್ಕೆ ಬಾರದ್ದು ಎನ್ನುವುದು ನಿಮಗೆ ಮಿಂಚಿನಂತೆ ಹೊಳೆದುಬಿಟ್ಟಿತಾದರೆ, ಮೈಂಡ್ ನ ಈ ಅಸಂಗತತೆಯನ್ನು ನೋಡಿ ನೀವು ನಕ್ಕು ಬಿಡುತ್ತೀರಿ. ಇಂಥದೊಂದು ನಗುವನ್ನು ನಕ್ಕ ಕ್ಷಣದಲ್ಲಿಯೇ ನೀವು ನಿಮ್ಮ ಮೈಂಡ್ ನ ಹತೋಟಿಯನ್ನು ಪೂರ್ಣವಾಗಿ ದಾಟಿ ಬಿಡುತ್ತೀರಿ. ಆಗ ನಿಮ್ಮೊಳಗೆ ಯಾವ ಪ್ರಶ್ನೆಯೂ ಇಲ್ಲ ನಿಮಗೆ ಯಾವ ಉತ್ತರದ ಅವಶ್ಯಕತೆಯೂ ಇಲ್ಲ. ಆಗ ನಿಮಗೆ ಪ್ರೇಮಕ್ಕೊಂದು ಅವಕಾಶ ಸೃಷ್ಟಿಯಾಗುತ್ತದೆ. ಆಗ ಯಾವ ಕಾರ್ಯ ಕಾರಣಗಳೂ ಇಲ್ಲ. ಆಗ ಬದುಕು ಒಂದೇ ಸಾಕಾಗುತ್ತದೆ.
ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು.
ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು.
ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ ಬಂಡೆ ಇದೆಯಲ್ಲಾ, ಅದು ನಿನ್ನ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?
ಶಿಷ್ಯ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ, “ ಝೆನ್ ನಲ್ಲಿ ಎಲ್ಲವೂ ಮನಸ್ಸಿನ ಆಟ, ಮನಸ್ಸು ನಮ್ಮ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಖಂಡಿತವಾಗಿ ಬಂಡೆ ನನ್ನ ಮನಸ್ಸಿನ ಒಳಗಿದೆ.
“ಹಾಗಾದರೆ ಭಾರಿ ಬಂಡೆಯನ್ನು ಹೊತ್ತ ನಿನ್ನ ತಲೆ ತುಂಬ ಭಾರವಾಗಿರಬೇಕಲ್ಲ ? “ ಮಾಸ್ಟರ್ ನಗುತ್ತ ಉತ್ತರಿಸಿದ.
ಮುಂದಿನ ಹಾದಿಯನ್ನು ಇಬ್ಬರೂ ಮಾತಿಲ್ಲದೇ ಸಮಾಧಾನದಿಂದ ಕ್ರಮಿಸಿದರು.

