ನಟ ಮನೋಜ್ ಬಾಜಪೈ ಬನಾರಸ್ ಶಹರದ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯನ್ನು ಹೇಳುತ್ತಾರೆ …. । ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ
ಇಡೀ ಭಾರತದಲ್ಲಿಯೇ ಬನಾರಸ್ ನಂಥ ಊರು ಇನ್ನೊಂದಿಲ್ಲ. ಇಲ್ಲಿಯ ಜನ ಭಗವಂತ ಶಿವನಿಗೂ ಆಶೀರ್ವಾದ ಮಾಡುತ್ತಾರೆ. ಶಿವ ತಮ್ಮ ಮನೆಯ ಸದಸ್ಯನೇ ಎನ್ನುವ ನಂಬಿಕೆ ಇವರದು.
ಒಂದು ದಿನ ಬೆಳ ಬೆಳಿಗ್ಗೆ, ನಾನು ನೋಡ ನೋಡುತ್ತಿದ್ದಂತೆಯೇ, ಅವಸರದಲ್ಲಿ ಬರುತ್ತಿದ್ದ ಒಬ್ಬ ವೃದ್ಧ ಬಾಬಾ ಒಂದು ಪುಟ್ಟ ಶಿವ ದೇವಾಲಯದ ಎದುರು ನಿಂತರು. ನಾನು ಕುತೂಹಲದಿಂದ ಅವರನ್ನೇ ಗಮನಿಸುತ್ತಿದ್ದೆ. ಬಾಬಾ ತಮ್ಮ ಕಮಂಡಲದೊಳಗಿಂದ ನೀರು ಬಗ್ಗಿಸಿಕೊಂಡು ದೇವರ ಮೂರ್ತಿಯತ್ತ ಚಿಮುಕಿಸಿ ಆಶೀರ್ವಾದ ಮಾಡಿದರು, “ ನಿನಗೆ ಒಳ್ಳೆಯದಾಗಲಿ, ಖುಶಿಯಿಂದಿರು”. ಇದನ್ನು ನೋಡಿ ನಾನು ಅವಾಕ್ಕಾದೆ.
ಬದುಕಿನಲ್ಲಿ ಒಮ್ಮೆಯಾದರೂ ಜನ ಬನಾರಸ್ ನೋಡಬೇಕು. ಸುಮ್ಮನೇ ಹತ್ತು ದಿನ ಅಲ್ಲಿ ಇದ್ದು ಎಲ್ಲವನ್ನೂ ಗಮನಿಸಬೇಕು. ಅಲ್ಲಿಯ ಜನ ಬದುಕನ್ನು ಹೇಗೆ ಸಂಭ್ರಮಿಸುತ್ತಾರೆ ಎನ್ನುವುದನ್ನ ನೋಡಿ ಕಲಿಯಬೇಕು.

