ಗೌರವ ವ್ಯಕ್ತಿಗಲ್ಲ, ಅಧಿಕಾರಕ್ಕೆ! : ಓಶೋ ವ್ಯಾಖ್ಯಾನ

ತನ್ನ ಎದುರು ಜನ ತಲೆಬಾಗಿಸುತ್ತಿದ್ದದ್ದು ತನಗಲ್ಲ ತನ್ನ ಮೇಲಿದ್ದ ದೇವರ ಮೂರ್ತಿಗಳಿಗೆ ಎನ್ನುವುದು ಕತ್ತೆಗೆ ಗೊತ್ತಾಗಲೇ ಇಲ್ಲ. ಅದು ಜನ ತನಗೇ ನಮಸ್ಕಾರ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಹೆಮ್ಮೆಯಿಂದ ಬಿಗುತ್ತಿತ್ತು. ಅದೇ ರೀತಿ ನಾವೂ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಬ್ಬ ಹಳ್ಳಿಯ ಕುಂಬಾರ ಗಡಿಗೆಗಳನ್ನ, ಹೂವಿನ ಕುಂಡಗಳನ್ನ ತಯಾರಿಸುತ್ತಿದ್ದ. ತಾನು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಅವನು ಹತ್ತಿರದ ಶಹರದ ಮಾರುಕಟ್ಟೆಗೆ ಹೋಗುತ್ತಿದ್ದ. ಅವನು ತನ್ನ ಬಳಿ ಇದ್ದ ಕತ್ತೆಯ ಮೇಲೆ ತನ್ನ ಎಲ್ಲ ಮಾರಾಟದ ವಸ್ತುಗಳನ್ನ ಹೇರಿಕೊಂಡು ಹೋಗುತ್ತಿದ್ದ.

ದೀಪಾವಳಿ ಹತ್ತಿರ ಬರುತ್ತಿತ್ತಾದ್ದರಿಂದ ಶಹರದ ಮಾರುಟ್ಟೆಯಲ್ಲಿ ಮಾರಾಟ ಮಾಡಲು ಕುಂಬಾರ ಲಕ್ಷ್ಮಿ ಮತ್ತು ಗಣಪತಿಯ ವಿಗ್ರಹಗಳನ್ನು ತಯಾರಿಸಲು ನಿರ್ಧರಿಸಿದ. ಅವನು ಸುಂದರವಾದ ಮೂರ್ತಿಗಳನ್ನು ತಯಾರು ಮಾಡಿ ದಟ್ಟ ಬಣ್ಣಗಳಿಂದ ಅವುಗಳನ್ನ ಅಲಂಕಾರ ಮಾಡಿದ. ನಂತರ ಅವನು ಆ ಮೂರ್ತಿಗಳನ್ನೆಲ್ಲ ತನ್ನ ಕತ್ತೆಯ ಮೇಲೆ ಹೇರಿಕೊಂಡು ಮಾರಾಟಕ್ಕೆಂದು ಶಹರಕ್ಕೆ ಹೊರಟ.

ದಾರಿಯಲ್ಲಿ ಅವನಿಗೆ ಎದುರಾದ ಜನರೆಲ್ಲ ಲಕ್ಷ್ಮಿ, ಗಣಪತಿಯ ವಿಗ್ರಹಗಳಿಗೆ ನಮಸ್ಕಾರ ಮಾಡಿ ಮುಂದೆ ಹೋಗುತ್ತಿದ್ದರು. ಶಹರ ತಲುಪುವುದರೊಳಾಗಿ ಸಾಕಷ್ಟು ಜನ ದೇವರ ಮೂರ್ತಿಗಳಿಗೆ ನಮಸ್ಕಾರ ಮಾಡಿ ಗೌರವ ಸಲ್ಲಿಸಿದ್ದರು.

ಅವನು ಕಲಾಕೃತಿಗಳನ್ನು ಮಾರಾಟ ಮಾಡುವ ಮಳಿಗೆ ತಲುಪಿ ತನ್ನ ಎಲ್ಲ ವಸ್ತುಗಳನ್ನು ಮಾರಾಟಕ್ಕೆ ಆರೇಂಜ್ ಮಾಡಿದ. ಬಹುಬೇಗ ಅವನು ತಂದಿದ್ದ ಮೂರ್ತಿಗಳೆಲ್ಲ ಮಾರಾಟವಾದವು ಹಾಗಾಗಿ ಕುಂಬಾರನಿಗೆ ಬಹಳ ಸಂತೋಷವಾಯಿತು.

ಸಂಜೆಯ ಹೊತ್ತಿಗೆ ಕುಂಬಾರ ವ್ಯಾಪಾರ ಮುಗಿಸಿ ಕತ್ತೆಯೊಂದಿಗೆ ತನ್ನ ಊರಿಗೆ ಹೊರಟ. ಪ್ರತಿಬಾರಿ ಯಾರಾದರೂ ಎದುರಾದಾಗ ಕತ್ತೆ ನಿಂತುಕೊಂಡು ಅವರ ಗಮನ ಸೆಳೆಯುವಂತೆ ಗೋಣು ಅಲ್ಲಾಡಿಸುತ್ತಿತ್ತು. ಆದರೆ ಯಾರೂ ಕತ್ತೆಯನ್ನು ಗಮನಿಸುತ್ತಲೇ ಇರಲಿಲ್ಲ. ಕತ್ತೆಯ ಮುಂದೆ ಯಾರೂ ತಲೆ ಬಾಗಿಸುತ್ತಲೇ ಇರಲಿಲ್ಲ. ಜನರ ಈ ವರ್ತನೆಯಿಂದ ಬೇಸರಗೊಂಡ ಕತ್ತೆ ಅವರ ಗಮನ ಸೆಳೆಯಲು ಜೋರಾಗಿ ಕಿರುಚಲು ಶುರು ಮಾಡಿತು.

ಹೀಗೆ ಹಾಗೆ ಕಿರುಚಾಡುತ್ತ ಕತ್ತೆಯ ಸವಾರಿ ಹೊರಟಾಗ ಜನ ಸಿಟ್ಟಿಗೆದ್ದು ಅದರ ಮೇಲೆ ಕಲ್ಲು ಎಸೆಯತೊಡಗಿದರು. ಆಗ ಕುಂಬಾರನಿಗೆ ಗಾಬರಿಯಾಗತೊಡಗಿತು.

ಬೆಳಿಗ್ಗೆ ತನ್ನ ಎದುರು ಜನ ತಲೆಬಾಗಿಸುತ್ತಿದ್ದದ್ದು ತನಗಲ್ಲ ತನ್ನ ಮೇಲಿದ್ದ ದೇವರ ಮೂರ್ತಿಗಳಿಗೆ ಎನ್ನುವುದು ಕತ್ತೆಗೆ ಗೊತ್ತಾಗಲೇ ಇಲ್ಲ. ಅದು ಜನ ತನಗೇ ನಮಸ್ಕಾರ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡು ಹೆಮ್ಮೆಯಿಂದ ಬಿಗುತ್ತಿತ್ತು. ಅದೇ ಜನ ಸಂಜೆ ತನ್ನತ್ತ ಕಲ್ಲು ಬೀಸತೊಡಗಿದಾಗ ಅದಕ್ಕೆ ತಡೆದುಕೊಳ್ಳಲಾರದಷ್ಟು ದುಃಖವಾಗತೊಡಗಿತು.

ನಾವು ಬಹಳಷ್ಟು ಜನ ಇದೇ ತಪ್ಪು ಮಾಡುತ್ತೇವೆ. ಅಧಿಕಾರದ ಖುರ್ಚಿಯಲ್ಲಿ ಕುಳಿತವರು ಜನ ತಮಗೆ ಗೌರವ ಸಲ್ಲಿಸುತ್ತಿರುವುದನ್ನು ಆನಂದಿಸುತ್ತಾರೆ. ಆದರೆ ಜನರ ಈ ಗೌರವ ತಮಗೇ ಎಂದು ಅವರು ತಿಳಿದುಕೊಂಡಿದ್ದರೆ, ಅವರು ಮೇಲಿನ ಕತೆಯ ಕತ್ತೆಯಂತೆ ಮೂರ್ಖರ ಸ್ವರ್ಗದಲ್ಲಿ ವಾಸ ಮಾಡುತ್ತಿದ್ದಾರೆ.

ಜನರ ಗೌರವ ಸಲ್ಲುತ್ತಿರುವುದು ಅವರಿಗಲ್ಲ ಅವರು ಕುಳಿತಿರುವ ಅಧಿಕಾರದ ಖುರ್ಚಿಗೆ. ಯಾವಾಗ ಅವರು ಆ ಖುರ್ಚಿಯಿಂದ ಕೆಳಗೆ ಇಳಿಯುತ್ತಾರೋ ಆಗ ಅವರ ಸುತ್ತ ಜಯಕಾರ ಮಾಡುತ್ತಿದ್ದ ಜನ ತಕ್ಷಣ ಮಾಯವಾಗುತ್ತಾರೆ.

ಕಪ್ಪೆಗಳು ಸದ್ದು ಮಾಡುವುದು ಮಳೆ ಸುರಿಯುತ್ತಿದ್ದಾಗ ಮಾತ್ರ, ಮಳೆ ನಿಂತ ಮೇಲೆ ಕಪ್ಪೆಗಳು ಮಾಯವಾಗಿಬಿಡುತ್ತವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.