ಮಾಸ್ಟರ್ ಮಾತುಗಳನ್ನ ಮರದೊಳಗೆ ಸುಳಿದು ಹೋದ ಗಾಳಿಯಂತೆ, ನದಿಯ ಕಲರವದಂತೆ, ಹಕ್ಕಿಯ ಹಾಡಿನಂತೆ ಸುಮ್ಮನೇ ಕೇಳಬೇಕು.
ಪಂಡಿತರ ಮಾತುಗಳು ಬುದ್ಧಿಯನ್ನು ಪ್ರಚೋದಿಸಿದರೆ, ಮಾಸ್ಟರ್ ಮಾತುಗಳು ಹೃದಯದೊಳಗಿನ ಏನೋ ಒಂದನ್ನು ಮುಟ್ಟಿ ಜಾಗೃತಗೊಳಿಸುತ್ತವೆ… ~ ಸಂಗ್ರಹಾನುವಾದ : ಚಿದಂಬರ ನರೇಂದ್ರ
ಶಿಷ್ಯರುಗಳಿಗೆ ದೇವರ ಕುರಿತಾಗಿ ಸಾಕಷ್ಟು ಪ್ರಶ್ನೆಗಳಿದ್ದವು.
“ದೇವರು ಅಜ್ಞಾತ (un known), ದೇವರು ತಿಳಿದುಕೊಳ್ಳಲು ಸಾಧ್ಯವಿಲ್ಲದವನು (un knowable). ದೇವರ ಕುರಿತಾದ ಪ್ರತಿ ಹೇಳಿಕೆ, ನಿಮ್ಮ ಪ್ರಶ್ನೆಗಳಿಗೆ ನೀಡಬಹುದಾದ ಪ್ರತಿ ಉತ್ತರ, ಸತ್ಯವನ್ನು ತಿರುಚಿದಂತೆ” ಮಾಸ್ಟರ್ ಹೇಳಿದರು.
“ಹಾಗಾದರೆ ನೀವು ದೇವರ ಬಗ್ಗೆ ಯಾಕೆ ಮಾತನಾಡುತ್ತೀರಿ?” ಶಿಷ್ಯರು ಆಶ್ಚರ್ಯದಿಂದ ಕೇಳಿದರು.
“ ಹಕ್ಕಿ ಯಾಕೆ ಹಾಡುತ್ತದೆ?” ಮಾಸ್ಟರ್ ಪ್ರಶ್ನೆ ಮಾಡಿದರು.
ಹಕ್ಕಿಗೆ ಏನೋ ವಿಷಯ ಹೇಳುವುದಿರುವುದಿಲ್ಲ. ಹಕ್ಕಿಗೆ ಹಾಡು ಹಾಡುವುದಿರುತ್ತದೆ.
ಪಂಡಿತರ, ವಿದ್ವಾಂಸರ ಮಾತುಗಳನ್ನ ಕೇಳಿ ತಿಳಿದುಕೊಳ್ಳಬೇಕು, ಅರ್ಥಮಾಡಿಕೊಳ್ಳ ಬೇಕು.
ಆದರೆ ಮಾಸ್ಟರ್ ಮಾತುಗಳನ್ನ ಅರ್ಥಮಾಡಿಕೊಳ್ಳಬಾರದು, ಸುಮ್ಮನೇ ಕೇಳಬೇಕು.
ಮಾಸ್ಟರ್ ಮಾತುಗಳನ್ನ ಮರದೊಳಗೆ ಸುಳಿದು ಹೋದ ಗಾಳಿಯಂತೆ, ನದಿಯ ಕಲರವದಂತೆ, ಹಕ್ಕಿಯ ಹಾಡಿನಂತೆ ಸುಮ್ಮನೇ ಕೇಳಬೇಕು.
ಪಂಡಿತರ ಮಾತುಗಳು ಬುದ್ಧಿಯನ್ನು ಪ್ರಚೋದಿಸಿದರೆ, ಮಾಸ್ಟರ್ ಮಾತುಗಳು ಹೃದಯದೊಳಗಿನ ಏನೋ ಒಂದನ್ನು ಮುಟ್ಟಿ ಜಾಗೃತಗೊಳಿಸುತ್ತವೆ.
ಒಮ್ಮೆ ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು.
ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು.
ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ.
ಆಮೇಲೆ ಎರಡನೇ ಸನ್ಯಾಸಿ, ವಾದ ಮಾಡಿದ. ಮಾಸ್ಟರ್ ಮಾತು ಯಾಕೆ ತಪ್ಪು ಎಂಬುದನ್ನ ವಿವರವಾಗಿ ಚರ್ಚಿಸಿದ. ಮಾಸ್ಟರ್ ಮತ್ತೆ ಯೋಚನೆ ಮಾಡಿ ಹೇಳಿದ, “ ನೀನು ಹೇಳೋದೂ ಸರಿ”
ಈ ವಾದ ವಿವಾದವನ್ನು ನೋಡುತ್ತಿದ್ದ ಕಿರಿಯ ಸನ್ಯಾಸಿ ಕುತೂಹಲದಿಂದ ಕೇಳಿದ, “ ಇದು ಹೇಗೆ ಮಾಸ್ಟರ್, ಇಬ್ಬರಿಗೂ ನೀವು ಸರಿ ಎಂದು ಹೇಳಿದಿರಿ? ಯಾರೋ ಒಬ್ಬರದು ತಪ್ಪು ಇರಲೇಬೇಕಲ್ವಾ? “
ಮಾಸ್ಟರ್ ಮತ್ತೆ ಧ್ಯಾನ ಮಗ್ನನಾಗಿ ಯೋಚಿಸಿ ಕಿರಿಯ ಸನ್ಯಾಸಿಗೆ ಉತ್ತರಿಸಿದ.
“ ಹೌದು, ನೀನು ಹೇಳೋದೂ ಸರಿನೇ “

