ಮೌನ ಆಸರೆ ನೀಡುವ ಶಕ್ತಿ

ನಿನ್ನ ಮೌನ ಆಸರೆ ನೀನು ನನಗೆ ಕೊಡಬಹುದಾದ ಅತ್ಯಮೂಲ್ಯ ಉಡುಗೊರೆ. ನಾನು ಯಾರು? ನನ್ನ ಸಾಮರ್ಥ್ಯ ಏನು? ಎನ್ನುವುದನ್ನ ನಾನು ಮರೆತ ಕ್ಷಣಗಳಲ್ಲಿ ನಿನ್ನ ಪ್ರೀತಿ ನನಗೆ ಈ ಎಲ್ಲವನ್ನೂ ನೆನಪು ಮಾಡುತ್ತದೆ… ~ ಸಂಗ್ರಹಾನುವಾದ: ಚಿದಂಬರ ನರೇಂದ್ರ

ನಮ್ಮ ಕರಾಳ ಕ್ಷಣಗಳಲ್ಲಿ ನಮಗೆ ಬೇಕಾಗಿರೋದು ನಮ್ಮ ಸಮಸ್ಯೆಗಳಿಗೆ ಪರಿಹಾರಗಳಲ್ಲ, ಸಲಹೆಗಳಲ್ಲ. ಆ ಕ್ಷಣಗಳಲ್ಲಿ ನಾವು ತೀವ್ರವಾಗಿ ಬಯಸೋದು ಮಾನವೀಯ ಸಂಪರ್ಕಗಳನ್ನ ; ಒಂದು ಮೌನ ಹಾಜರಾತಿಯನ್ನ, ಒಂದು ಆಪ್ತ ಸ್ಪರ್ಶವನ್ನ. ಇಂಥ ಸಣ್ಣ ಸಣ್ಣ ಗೆಶ್ಚರ್ ಗಳು, ಸೂಚನೆಗಳು ನಮ್ಮನ್ನು ಈ ಕಷ್ಟ ಜಗತ್ತಿನಲ್ಲಿ ಧೃಡವಾಗಿ ಎದ್ದು ನಿಲ್ಲುವಂತೆ ಮಾಡುತ್ತವೆ.

ದಯಮಾಡಿ ನನಗೆ ಸಹಾಯ ಮಾಡಲು ಮುಂದಾಗಬೇಡಿ. ನನ್ನ ನೋವನ್ನು ನಿಮ್ಮ ಮೇಲೆ ಆವಾಹಿಸಿಕೊಂಡು ನನ್ನ ದುಃಖದಲ್ಲಿ ಭಾಗಿಯಾಗಬೇಡಿ. ನಾನು ನನ್ನೊಳಗಿನ ಬಿರುಗಾಳಿಯನ್ನು ಸಂತೈಸಿಕೊಳ್ಳುತ್ತಿರುವಾಗ ಸುಮ್ಮನೇ ನನ್ನ ಪಕ್ಕದಲ್ಲಿ ಕುಳಿತುಕೊಂಡು ನನ್ನ ಮೌನವನ್ನು ಇನ್ನಷ್ಟು ಫಲವತ್ತಾಗಿಸಿ. ನನಗೆ ನನ್ನ ದಾರಿ ಕಾಣಿಸಿ ನಾನು ಎದ್ದು ನಿಲ್ಲಲು ಪ್ರಯತ್ನಿಸುವಾಗ ನೀವು ನನ್ನ ಕೈಯಳತೆಯಷ್ಚು ದೂರದಲ್ಲಿರಿ. ನೀವು ನನ್ನ ಹತ್ತಿರ ಇರುವುದೇ ನನ್ನ ಧೈರ್ಯ.

ನನ್ನ ನೋವುಗಳು, ನನ್ನ ಸಂಕಟಗಳು ನಾನು ಅನುಭವಿಸಲು ಇರುವಂಥವು. ನನ್ನ ಯುದ್ಧಗಳನ್ನ ನಾನೇ ಮುಂದೆ ನಿಂತು ನಿರ್ವಹಿಸಬೇಕು. ಆದರೆ ನಿಮ್ಮ ಹಾಜರಾತಿ , ಒಮ್ಮೊಮ್ಮೆ ಅಪಾಯಕಾರಿಯಾಗಿರುವ ಈ ಜಗತ್ತಿನಲ್ಲಿ ನಾನು ಒಬ್ಬಂಟಿಯಲ್ಲ ಎನ್ನುವುದನ್ನ ನನಗೆ ಮನಗಾಣಿಸುತ್ತದೆ, ಇಷ್ಟು ಸಾಕು ನನಗೆ. ಇಂಥ ದುಸ್ಥಿತಿಯಲ್ಲಿ ಇರುವಾಗಲೂ ನಾನು ನಿಮ್ಮ ಪ್ರೀತಿಗೆ ಅರ್ಹ ಎನ್ನುವುದನ್ನ ಇದು ಸದ್ದು ಮಾಡದೇ ನನಗೆ ನೆನಪಿಸುತ್ತದೆ.

ಹಾಗಾಗಿ ಅಂಥ ಕರಾಳ ಗಳಿಗೆಗಳಲ್ಲಿ ನೀನು ನನ್ನ ಜೊತೆಯಿರುವೆಯಾ? ನನ್ನ ಪಾರು ಮಾಡಲು ಅಲ್ಲ, ನನ್ನ ಸಂಗಾತಿಯಾಗಿ? ಮತ್ತೆ ಬೆಳಕು ಹರಿಯುವವರೆಗೆ ನನ್ನ ಕೈ ಹಿಡಿದುಕೊಂಡಿರು, ನನಗೆ ನನ್ನ ಸಾಮರ್ಥ್ಯವನ್ನು ನೆನಪು ಮಾಡಿಕೊಡುತ್ತ.

ನಿನ್ನ ಮೌನ ಆಸರೆ ನೀನು ನನಗೆ ಕೊಡಬಹುದಾದ ಅತ್ಯಮೂಲ್ಯ ಉಡುಗೊರೆ. ನಾನು ಯಾರು? ನನ್ನ ಸಾಮರ್ಥ್ಯ ಏನು? ಎನ್ನುವುದನ್ನ ನಾನು ಮರೆತ ಕ್ಷಣಗಳಲ್ಲಿ ನಿನ್ನ ಪ್ರೀತಿ ನನಗೆ ಈ ಎಲ್ಲವನ್ನೂ ನೆನಪು ಮಾಡುತ್ತದೆ.

ಜಪಾನ್ ನ ಮಹತ್ವದ ಝೆನ್ ಸಾಧಕರಲ್ಲಿ ಮಾಸ್ಟರ್ ಬಾಂಕಿಯೂ ಒಬ್ಬ. ವರ್ಷಗಟ್ಟಲೆ ಋಷಿಯಂತೆ ಬದುಕಿದ್ದ ಬಾಂಕಿ, ತನಗೆ ಜ್ಞಾನೋದಯವಾದ ಮೇಲೂ , ಝೆನ್ ಸಂಸ್ಥಾನಗಳ ಗೌರವ ಪದವಿಗಳನ್ನು ತಿರಸ್ಕರಿಸಿ, ಅಡುಗೆ ಮನೆಯಲ್ಲಿ ಬಾಣಸಿಗರಿಗೆ ಸಹಾಯ ಮಾಡುತ್ತ, ತನ್ನ ಶಿಷ್ಯರಿಗೆ ಪಾಠ ಹೇಳಿಕೊಂಡು ಸಾಮಾನ್ಯರಂತೆ ಬದುಕಿದ್ದ. ಬಾಂಕಿಯ ಅಪಾರ ಜ್ಞಾನದ ಅರಿವಿದ್ದ ಜನ ದೂರದ ಊರುಗಳಿಂದ ಅವನ ಮಾತು ಕೇಳಲು ಬರುತ್ತಿದ್ದರು.

ಹೀಗಿರುವಾಗ ಒಮ್ಮೆ ಅವನ ಶಿಷ್ಯನೊಬ್ಬ ಕಳ್ಳತನ ಮಾಡುವಾಗ ಉಳಿದ ಶಿಷ್ಯರ ಕೈಗೆ ಸಿಕ್ಕು ಬಿದ್ದ. ಒಬ್ಬ ಯುವ ಸನ್ಯಾಸಿ ಕಳ್ಳ ಶಿಷ್ಯನನ್ನು ಎಳೆದುಕೊಂಡು ಬಂದು ಬಾಂಕಿಯ ಮುಂದೆ ನಿಲ್ಲಿಸಿದ. ಆ ಕಳ್ಳ ಶಿಷ್ಯನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವುದು ಉಳಿದ ಎಲ್ಲರ ಅಪೇಕ್ಷೆಯಾಗಿತ್ತು. ಆದರೆ ಮಾಸ್ಟರ್ ಬಾಂಕಿ ತನ್ನ ಶಿಷ್ಯರ ದೂರನ್ನು ನಿರ್ಲಕ್ಷ ಮಾಡಿದ.

ಕೆಲ ದಿನಗಳ ನಂತರ ಕಳ್ಳ ಶಿಷ್ಯ ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ. ಈ ಬಾರಿಯೂ ಬಾಂಕಿ ಕಳ್ಳನನ್ನು ಆಶ್ರಮದಿಂದ ಹೊರಗೆ ಹಾಕಬೇಕು ಎನ್ನುವ ಇತರೆ ಶಿಷ್ಯರ ಫಿರ್ಯಾದನ್ನು ವಜಾ ಮಾಡಿದ.

ಬಾಂಕಿಯ ಈ ವರ್ತನೆಯಿಂದ ಅಸಮಾಧಾನಗೊಂಡ ಶಿಷ್ಯರೆಲ್ಲ ಸೇರಿ ಮಾಸ್ಟರ್ ಬಾಂಕಿಗೊಂದು ಪತ್ರ ಬರೆದರು. ಆ ಕಳ್ಳನನ್ನು ಆಶ್ರಮ ಬಿಟ್ಟು ಹೊರಗೆ ಹಾಕದಿದ್ದರೆ, ತಾವೆಲ್ಲ ಆಶ್ರಮ ತೊರೆದು ಹೋಗುವುದಾಗಿ ಬೆದರಿಕೆ ಹಾಕಿದ್ದರು.

ಪತ್ರ ಓದಿದ ಮಾಸ್ಟರ್ ಬಾಂಕಿ ತನ್ನ ಎಲ್ಲ ಶಿಷ್ಯರನ್ನೂ ಸುತ್ತ ಕೂರಿಸಿಕೊಂಡು ಮಾತನಾಡತೊಡಗಿದ.

“ ನೀವೆಲ್ಲ ಜ್ಞಾನಿಗಳಿದ್ದೀರಿ, ನಿಮಗೆ ಸರಿ ತಪ್ಪುಗಳ ಅರಿವಾಗುತ್ತದೆ. ಬೇಕಾದರೆ, ನೀವು ಬೇರೆ ಆಶ್ರಮಕ್ಕೆ ಹೋಗಿ ಅಭ್ಯಾಸ ಮುಂದುವರೆಸಬಹುದು. ಆದರೆ ನೀವು ಯಾರನ್ನ ಕಳ್ಳ ಎಂದು ದೂಷಿಸುತ್ತಿದ್ದೀರೋ ಆ ಪಾಪದ ಮನುಷ್ಯನಿಗೆ ಸರಿ – ತಪ್ಪು ಗಳು ಗೊತ್ತಾಗುವುದಿಲ್ಲ. ನಾನೂ ಅವನನ್ನು ಆಶ್ರಮದಿಂದ ಹೊರಗೆ ಕಳುಹಿಸಿ ಬಿಟ್ಟರೆ, ಅವನಿಗೆ ಬೇರೆ ಯಾರು ಹೇಳಿಕೊಡುತ್ತಾರೆ? ಅವನಿಗೆ ಸರಿ ತಪ್ಪುಗಳ ನಡುವೆ ತಾರತಮ್ಯ ಮಾಡುವುದು ಗೊತ್ತಾಗುವ ತನಕ ನಾನು ಅವನನ್ನು ಬಿಟ್ಟು ಕೊಡುವುದಿಲ್ಲ. “

ಮಾಸ್ಟರ್ ಬಾಂಕಿಯ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ, ಕಳ್ಳ ಶಿಷ್ಯನ ಕಣ್ಣುಗಳು ತುಂಬಿ ಬಂದವು. ಆ ಕ್ಷಣದಲ್ಲಿಯೇ ಅವನ ಕಳ್ಳತನದ ಚಟ ಕರಗಿ ಹೋಗಿ ಬಿಟ್ಟಿತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.