ಸೂಫಿಗಳು ಜೀಸಸ್ ನ ಕುರಿತಾದ ಕೆಲವು ಸುಂದರ ಕತೆಗಳನ್ನು ಹೇಳುತ್ತಾರೆ. ಹಾಗೆ ನೋಡಿದರೆ ಸಾಂಪ್ರದಾಯಿಕ ಚರ್ಚ್ ನ ಜನರಿಗಿಂತ ಈ ಸೂಫಿಗಳಿಗೆ ಜೀಸಸ್ ಬಗ್ಗೆ ಹೆಚ್ಚು ಗೊತ್ತು. ಇದು ಒಂದು ಸುಂದರ ಕತೆ. ಈ ಕತೆಯ ಪ್ರಕಾರ, ಭಯದಲ್ಲಿರುವ ಜನರಿಗೆ, ಅಸೂಯೆಯಲ್ಲಿರುವ ಜನರಿಗೆ ದೇವರ ರಾಜ್ಯದಲ್ಲಿ ಪ್ರವೇಶವಿಲ್ಲ. ಆದರೆ ಯಾರು ಅಪಾರ ಸಂಭ್ರಮದಿಂದ ಬದುಕುತ್ತಿದ್ದಾರೋ, ಯಾರಿಗೆ ದೇವರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆ ಇದೆಯೋ ಅವರಿಗೆ ಮಾತ್ರ ದೇವರು ತನ್ನ ರಾಜ್ಯಕ್ಕೆ ಆಹ್ವಾನ ನೀಡುತ್ತಾನೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ಸುಂದರ ಸೂಫಿ ಕತೆ.
ಒಮ್ಮೆ ಜೀಸಸ್ ಒಂದು ಊರಿಗೆ ಬರುತ್ತಾನೆ. ಅಲ್ಲಿ ಅವನಿಗೆ ಅತೀವ ದುಃಖದಿಂದ ಕೂಡಿರುವ ಜನರ ಗುಂಪೊಂದು ಕಾಣಿಸುತ್ತದೆ. ಅವರ ಮುಖದ ಮೇಲೆ ಆಳವಾದ ಸಂಕಟ ಎದ್ದು ಕಾಣುತ್ತಿರುತ್ತದೆ. ಜೀಸಸ್ ಆ ಜನರನ್ನು ಪ್ರಶ್ನೆ ಮಾಡುತ್ತಾನೆ, “ಏನಾಯಿತು ನಿಮಗೆ? ಯಾವ ಅನಾಹುತ ನಿಮ್ಮ ತಲೆ ಮೇಲೆ ಬಿದ್ದಿದೆ?”
ಆ ಜನ ಉತ್ತರಿಸುತ್ತಾರೆ, “ನಮಗೆ ನರಕದ ಭಯ, ನರಕದ ಹೆಸರು ಕೇಳುತ್ತಿದ್ದರೆ ನಾನು ನಡುಗುತ್ತೇವೆ. ನರಕದಿಂದ ಹೇಗೆ ಪಾರಾಗಬೇಕೆನ್ನುವುದು ನಮಗೆ ಗೊತ್ತಿಲ್ಲ. ಈ ಪ್ರಶ್ನೆಗೆ ಉತ್ತರ ದೊರಕುವವರೆಗೆ ನಮಗೆ ಊಟ ನಿದ್ದೆ, ವಿಶ್ರಾಂತಿ ಎನ್ನುವುದು ಇಲ್ಲ”. ಜೀಸಸ್ ಆ ಜನರಿಂದ ದೂರವಾಗಿ ಮುಂದೆ ಬರುತ್ತಾನೆ.
ಅಲ್ಲಿ ಜೀಸಸ್ ಗೆ ಇನ್ನೊಂದು ಜನರ ಗುಂಪು ಕಾಣಿಸುತ್ತದೆ. ಈ ಗುಂಪಿನ ಜನ ಕೂಡ ಮೊದಲ ಗುಂಪಿನ ಜನರ ರೀತಿಯಲ್ಲಿಯೇ ಆತಂಕದಲ್ಲಿ ಮುಳುಗಿ ಹೋಗಿದ್ದಾರೆ. ಜೀಸಸ್ ಆಶ್ಚರ್ಯ ದಿಂದ ಆ ಜನರನ್ನು ಪ್ರಶ್ನೆ ಮಾಡುತ್ತಾನೆ, “ಏನು ವಿಷಯ? ಈ ಊರಿನಲ್ಲಿ ಏನಾಗುತ್ತಿದೆ? ಯಾಕೆ ಇಷ್ಟು ದುಃಖದಲ್ಲಿರುವಿರಿ? ಯಾಕೆ ನಿಮ್ಮ ಮುಖದ ಮೇಲೆ ಇಂಥ ಒತ್ತಡ? ಇದೇ ಸ್ಥಿತಿ ಮುಂದುವರೆದರೆ ನೀವು ಹುಚ್ಚರಾಗಿಬಿಡುತ್ತೀರಿ”.
ಆ ಗುಂಪಿನ ಜನ ಉತ್ತರಿಸಿದರು, “ನಮಗೇನೂ ಆಗಿಲ್ಲ. ನಮಗೆ ಸ್ವರ್ಗವನ್ನು ಕಳೆದುಕೊಳ್ಳುವ ಭಯ. ಸ್ವರ್ಗವನ್ನು ಪ್ರವೇಶಿಸುವುದು ನಮಗೆ ಸಾಧ್ಯವಾಗಲಿಕ್ಕಿಲ್ಲ ಎನ್ನುವ ಆತಂಕ. ಆದರೆ ಶತಾಯುಗತಾಯ ನಾವು ಸ್ವರ್ಗವನ್ನು ಪ್ರವೇಶಿಸಲೇಬೇಕು”. ಇಂಥ ಉತ್ತರ ಕೇಳಿದ ಮೇಲೆ ಜೀಸಸ್ ಗೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ. ಅವ ಅಲ್ಲಿಂದ ಹೊರಟು ಮುಂದೆ ಬರುತ್ತಾನೆ.
ಸೂಫಿಗಳು ಪ್ರಶ್ನೆ ಮಾಡಿಕೊಳ್ಳುತ್ತಾರೆ. ಯಾಕೆ ಜೀಸಸ್ ಈ ಎರಡೂ ಗುಂಪಿನ ಜನರಿಂದ ದೂರ ಆದ? ಈ ಎರಡೂ ಗುಂಪಿನ ಜನರು ಧಾರ್ಮಿಕ ಸ್ವಭಾವದವರು. ಜೀಸಸ್ ಅವರಿಗೆ ಹೇಗೆ ನರಕದಿಂದ ತಪ್ಪಿಸಿಕೊಳ್ಳುವುದು, ಹೇಗೆ ಸ್ವರ್ಗವನ್ನು ಪ್ರವೇಶಿಸುವುದು ಎನ್ನುವುದನ್ನ ಹೇಳಿಕೊಡಬೇಕಾಗಿತ್ತು. ಆದರೆ ಜೀಸಸ್ ಅವರ ಜೊತೆ ಮಾತು ಮುಂದುವರೆಸದೆ ಅವರನ್ನು ದೂರ ಮಾಡಿಬಿಟ್ಟ. ಯಾಕೆ ಹೀಗೆ ಮಾಡಿದ ಜೀಸಸ್?
ಮುಂದೆ ಜೀಸಸ್ ಗೆ ಮೂರನೆಯ ಗುಂಪು ಕಾಣಿಸುತ್ತದೆ. ಒಂದು ಗಾರ್ಡನ್ ನಲ್ಲಿ ಕೆಲವು ಜನ ಕೂಡಿಕಂಡು ಹಾಡುತ್ತ ಕುಣಿಯುತ್ತ ಸಂತೋಷದಿಂದ ಸಂಭ್ರಮಿಸುತ್ತಿದ್ದಾರೆ. ಜೀಸಸ್ ಅವರ ಬಳಿಗೆ ಹೋಗಿ ಅವರನ್ನು ಪ್ರಶ್ನೆ ಮಾಡುತ್ತಾನೆ, “ಯಾವ ಉತ್ಸವ ನಡೆಯುತ್ತಿದೆ ಇಲ್ಲಿ? ಯಾವ ಹಬ್ಬ ಆಚರಿಸುತ್ತಿದ್ದೀರಿ?” ಅಲ್ಲಿನ ಜನ ಉತ್ತರಿಸಿದರು, “ಅಂತ ವಿಶೇಷವೇನಿಲ್ಲ. ಸುಮ್ಮನೇ ದೇವರಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದೀವಿ. ದೇವರು ನಮಗೆ ಎಷ್ಟೆಲ್ಲ ಕೊಟ್ಟಿದ್ದಾನೆ, ನಾವು ಅದಕ್ಕೆಲ್ಲ ಯೋಗ್ಯರಲ್ಲದಿರುವಾಗಲೂ. ಹಾಗಾಗಿ ಎಲ್ಲ ಸೇರಿ ದೇವರಿಗೆ ಥ್ಯಾಂಕ್ಸ್ ಹೇಳುತ್ತಿದ್ದೇವೆ”. ಜೀಸಸ್ ಗೆ ಅವರ ಮಾತು ಕೇಳಿ ಸಂತೋಷವಾಯಿತು. “ನನಗೆ ಇಂಥ ಜನ ಇಷ್ಟ. ನಾನು ನಿಮ್ಮ ಜೊತೆ ಇರಬಯಸುತ್ತೇನೆ. ನಿಮ್ಮ ಜೊತೆ ಮಾತನಾಡಬಯಸುತ್ತೇನೆ. ನೀವು ನನ್ನ ಜನ ” ಎನ್ನುತ್ತ ಜೀಸಸ್ ತಾನೂ ಅವರ ಜೊತೆ ಸೇರಿ ಸಂಭ್ರಮದಲ್ಲಿ ಮುಳುಗಿದ.
ಇದು ಕ್ರಿಶ್ಚಿಯಾನಿಟಿಯ ಕತೆ ಅಲ್ಲ. ಆದರೆ ಸೂಫಿಗಳು ಜೀಸಸ್ ನ ಕುರಿತಾದ ಕೆಲವು ಸುಂದರ ಕತೆಗಳನ್ನು ಹೇಳುತ್ತಾರೆ. ಹಾಗೆ ನೋಡಿದರೆ ಸಾಂಪ್ರದಾಯಿಕ ಚರ್ಚ್ ನ ಜನರಿಗಿಂತ ಈ ಸೂಫಿಗಳಿಗೆ ಜೀಸಸ್ ಬಗ್ಗೆ ಹೆಚ್ಚು ಗೊತ್ತು. ಇದು ಒಂದು ಸುಂದರ ಕತೆ. ಈ ಕತೆಯ ಪ್ರಕಾರ, ಭಯದಲ್ಲಿರುವ ಜನರಿಗೆ, ಅಸೂಯೆಯಲ್ಲಿರುವ ಜನರಿಗೆ ದೇವರ ರಾಜ್ಯದಲ್ಲಿ ಪ್ರವೇಶವಿಲ್ಲ. ಆದರೆ ಯಾರು ಅಪಾರ ಸಂಭ್ರಮದಿಂದ ಬದುಕುತ್ತಿದ್ದಾರೋ, ಯಾರಿಗೆ ದೇವರ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆ ಇದೆಯೋ ಅವರಿಗೆ ಮಾತ್ರ ದೇವರು ತನ್ನ ರಾಜ್ಯಕ್ಕೆ ಆಹ್ವಾನ ನೀಡುತ್ತಾನೆ.
Osho, The Dhammapada – The Way of the Buddha, Vol 3, Ch 9 (excerpt)

