ಯಾವಾಗ ನಿಮ್ಮಲ್ಲಿ ಅರಿವು ಇರುತ್ತದೆಯೋ ಆಗ ನಿಮಗೆ ಪ್ರೇಮದ ಅವಶ್ಯಕತೆ ಇರುವುದಿಲ್ಲ. ಯಾವಾಗ ನಿಮಗೆ ಪ್ರೇಮದ ಅವಶ್ಯಕತೆ ಇರವುದಿಲ್ಲವೋ ಆಗ ನೀವು ಪ್ರೇಮಿಸಲು ಸಮರ್ಥರಾಗಿರುತ್ತೀರಿ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬ ಮಹಾ ಋಷಿ ಇದ್ದ. ಅವನು ಯಾರಿಗೂ ದೀಕ್ಷೆ ಕೊಡುತ್ತಿರಲಿಲ್ಲ. ಯಾರನ್ನೂ ತನ್ನ ಶಿಷ್ಯರನ್ನಾಗಿ ಸ್ವೀಕರಿಸುತ್ತಿರಲಿಲ್ಲ. ಅವನ ಪ್ರಸಿದ್ಧಿ ಬಹಳ ದೂರದವರೆಗೆ ಹಬ್ಬಿತ್ತಾದ್ದರಿಂದ ಅವನ ಬೆಟ್ಟದ ಮೇಲಿನ ಆಶ್ರಮಕ್ಕೆ ಪ್ರತಿವರ್ಷ ಸಾವಿರಾರು ಜನ ಬರುತ್ತಿದ್ದರು. ಅವನ ಕಾಲಿಗೆ ಬಿದ್ದು, ತಮಗೆ ಸನ್ಯಾಸದ ದೀಕ್ಷೆ ಕೊಟ್ಟು ತಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸು ಎಂದು ಬೇಡಿಕೊಳ್ಳುತ್ತಿದ್ದರು. ನಾವು ಬಾಯಾರಿಕೆಯಿಂದ ಬಳಲುತ್ತಿದ್ದೇವೆ, ನಿನ್ನ ದೇವಾಲಯದ ಬಾಗಿಲನ್ನು ನಮಗಾಗಿ ತೆರೆದು, ನಮಗೂ ಸತ್ಯದ ರುಚಿ ತೋರಿಸು ಎಂದು ದೀನರಾಗಿ ಕೇಳಿಕೊಳ್ಳುತ್ತಿದ್ದರು.
ಈ ಮಾತುಗಳನ್ನು ಕೇಳಿ ಋಷಿ ಕಠಿಣನಾಗಿಬಿಡುತ್ತಿದ್ದ. ನೀವು ನನ್ನ ಶಿಷ್ಯರಾಗಲು ಅರ್ಹರಾಗಿಲ್ಲ. ಮೊದಲು ಆ ಯೋಗ್ಯತೆಯನ್ನು ಸಂಪಾದಿಸಿಕೊಂಡು ಬನ್ನಿ ಎನ್ನುತ್ತ ಅವರ ಎದುರು ತನ್ನ ಕಂಡಿಷನ್ ಗಳನ್ನು ಮಂಡಿಸುತ್ತಿದ್ದ. ಅವನ ಕಂಡಿಷನ್ ಗಳು ಎಷ್ಟು ಕಠಿಣವಾಗಿದ್ದವೆಂದರೆ ಯಾರಿಗೂ ಅವನ್ನು ಪೂರೈಸುವುದು ಸಾಧ್ಯವಾಗುತ್ತಿರಲಿಲ್ಲ. ಮೂರು ವರ್ಷ ಒಂದೂ ಸುಳ್ಳು ಮಾತನಾಡಬಾರದು. ಮೂರು ವರ್ಷ ಕಠಿಣ ಬ್ರಹ್ಮಚರ್ಯ ಆಚರಿಸಬೇಕು, ಯಾವ ಹೆಣ್ಣು ಅಥವಾ ಗಂಡಿನ ಕಲ್ಪನೆಯೂ ಮನಸ್ಸಿನಲ್ಲಿ ಸುಳಿಯಕೂಡದು. ಹೀಗೆ ಆ ಋಷಿಯ ಕಂಡಿಷನ್ ಗಳು ಕಠಿಣತಮವಾಗಿದ್ದವು.
ಋಷಿಯ ಷರತ್ತುಗಳನ್ನು ಪೂರೈಸುವುದು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಹೆಚ್ಚು ಪ್ರಯತ್ನ ಮಾಡಿದಷ್ಟು ಆ ಷರತ್ತುಗಳು ಇನ್ನೂ ಹೆಚ್ಚು ಕಠಿಣವಾಗುತ್ತಿದ್ದವು. ಅದರ ಬಗ್ಗೆ ಯೋಚಿಸದಿದ್ದರೆ, ಬ್ರಹ್ಮಚರ್ಯ ಆಚರಿಸಬಹುದು ಆದರೆ, ಬ್ರಹ್ಮಚರ್ಯದ ಬಗ್ಗೆ ಹೆಚ್ಚು ಯೋಚಿಸಿದಷ್ಟು ಮನಸ್ಸಿನಲ್ಲಿ ಲೈಂಗಿಕ ಭಾವನೆಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳುತ್ತವೆ.
ಬಹಳಷ್ಟು ಜನ ಋಷಿಯ ಷರತ್ತುಗಳನ್ನು ಪೂರ್ಣ ಮಾಡಲು ಪ್ರಯತ್ನ ಮಾಡಿದ್ದರಾದರೂ ಯಾರೂ ಸಫಲರಾಗಿರಲಿಲ್ಲ ಹಾಗಾಗಿ ಯಾರಿಗೂ ಋಷಿಯ ಶಿಷ್ಯತ್ವ ಸಿಕ್ಕಿರಲಿಲ್ಲ.
ಕೊನೆಗೆ ಸಾವು ಹತ್ತಿರವಾಗಿ ಋಷಿ ಸಾವಿನ ಹಾಸಿಗೆಯ ಮೇಲಿದ್ದಾಗ ಅವನು ತನ್ನ ಸುತ್ತಲಿನ ಎಲ್ಲ ಜನರಿಗೆ ಹೇಳಿದ, “ ನನ್ನ ಸಾವಿಗೆ ಮೂರು ದಿನ ಮಾತ್ರ ಬಾಕಿ ಇದೆ. ಯಾರಿಗೆಲ್ಲ ನನ್ನ ಶಿಷ್ಯತ್ವ ಬೇಕೋ ಅವರನ್ನೆಲ್ಲ ಕರೆದುಕೊಂಡು ಬನ್ನಿ. ನಾನು ಎಲ್ಲರಿಗೂ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನೆಲ್ಲ ನನ್ನ ಶಿಷ್ಯರನ್ನಾಗಿ ಸ್ವೀಕರಿಸುತ್ತೇನೆ”
“ಹಾಗಾದರೆ, ನಿನ್ನ ಷರತ್ತುಗಳು ಏನಾದವು?” ಋಷಿಯ ಮಾತು ಕೇಳಿ ಜನರಿಗೆ ಆಶ್ಚರ್ಯವಾಯಿತು.
“ ಆ ಷರತ್ತುಗಳನ್ನೆಲ್ಲ ಮರೆತುಬಿಡಿ. ಅವನ್ನೆಲ್ಲ ನಾನು ಸುಮ್ಮನೇ ಹಾಕಿದ್ದೆ. ನಿಜ ಹೇಳಬೇಕೆಂದರೆ, ಇಷ್ಟು ದಿನ ನಿಮಗೆಲ್ಲ ದೀಕ್ಷೆ ನೀಡಲು ನಾನೇ ಅರ್ಹನಾಗಿರಲಿಲ್ಲ. ಆದ್ದರಿಂದ ನಾನು ಆ ಕಂಡಿಷನ್ ಗಳನ್ನು ಹೇಳುತ್ತಿದ್ದೆ. ಈಗ ನಾನು ಪೂರ್ಣನಾಗಿದ್ದೇನೆ. ದೀಕ್ಷೆ ನೀಡಲು ಅರ್ಹನಾಗಿದ್ದೇನೆ. ಯಾರಿಗೆಲ್ಲ ದೀಕ್ಷೆ ಬೇಕೋ, ಎಲ್ಲ ಬನ್ನಿ. ಕೇವಲ ಮೂರು ದಿನ ಬಾಕಿ ಇವೆ”.
ಋಷಿ ಎಲ್ಲರಿಗೂ ದೀಕ್ಷೆ ಕೊಟ್ಟು, ಎಲ್ಲರನ್ನೂ ತನ್ನ ಶಿಷ್ಯರನ್ನಾಗಿ ಸ್ವೀಕರಿಸಿದ. ಜನರಿಗೆ ಋಷಿಯ ವರ್ತನೆ ನೋಡಿ ಆಶ್ಚರ್ಯವಾಯಿತು. ಅವರಿಗೆ ತಮ್ಮ ಕಣ್ಣುಗಳನ್ನು ನಂಬಲಾಗಲಿಲ್ಲ. “ ಏನು ಮಾಡುತ್ತಿದ್ದೀಯ, ನಾವು ಪಾಪಿಗಳು, ನಮಗೆ ನೀನು ದೀಕ್ಷೆ ಕೊಡಬಹುದೆ?” ಜನ ಬೆರಗಿನಿಂದ ಋಷಿಯನ್ನು ಪ್ರಶ್ನೆ ಮಾಡಿದರು.
“ಅದನ್ನೆಲ್ಲ ಮರೆತು ಬಿಡಿ. ಇವತ್ತಿನವರೆಗೆ ನಾನು ಸಂತನಾಗಿರಲಿಲ್ಲ. ನಿಮಗೆ ದೀಕ್ಷೆ ನೀಡಲು ಇದೇ ಮುಖ್ಯ ಸಮಸ್ಯೆಯಾಗಿತ್ತು. ನಾನೇ ಬಾಗಿಲ ಹೊರಗೆ ನಿಂತಿದ್ದೆ, ಹಾಗಿರುವಾಗ ನಾನು ನಿಮ್ಮನ್ನು ಹೇಗೆ ಬಾಗಿಲು ತೆರೆದು ಒಳಗೆ ಕರೆದುಕೊಳ್ಳಲಿ? ನಾನು ಈಗ ಹಂಚಲು ಸಿದ್ಧನಾಗಿದ್ದೇನೆ. ಈಗ ಯಾವ ಷರತ್ತುಗಳೂ ಇಲ್ಲ, ಯಾವ ಪ್ರಶ್ನೆಗಳೂ ಇಲ್ಲ”.
ಯಾವಾಗ ನಿಮ್ಮಲ್ಲಿ ಅರಿವು ಇರುತ್ತದೆಯೋ ಆಗ ನಿಮಗೆ ಪ್ರೇಮದ ಅವಶ್ಯಕತೆ ಇರುವುದಿಲ್ಲ. ಯಾವಾಗ ನಿಮಗೆ ಪ್ರೇಮದ ಅವಶ್ಯಕತೆ ಇರವುದಿಲ್ಲವೋ ಆಗ ನೀವು ಪ್ರೇಮಿಸಲು ಸಮರ್ಥರಾಗಿರುತ್ತೀರಿ. ಇದು ಒಂದು ಬಹಳ ದೊಡ್ಡ ದ್ವಂದ್ವ. ಯಾವಾಗ ನಿಮಗೆ ಅವಶ್ಯಕತೆ ಇರುತ್ತದೆಯೋ ಆಗ ನೀವು ಸಮರ್ಥರಾಗಿರುವುದಿಲ್ಲ.

