ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ನೀವು ನವೋದಯದ ಕಾಲದಲ್ಲಿ ಬರೆಯಲು ಶುರು ಮಾಡಿದವರು. ನವೋದಯದ ಉತ್ತುಂಗವನ್ನು ಕಂಡವರು ಅದರಲ್ಲಿ ಭಾಗಿಯಾದವರು. ನಂತರ ನವೋದಯಲ್ಲಿ ತುಂಬ ಆದರ್ಶವಾದಿ, ಹುಸಿ ಕವಿತೆಗಳು ಹುಟ್ಟತೊಡಗಿದಾಗ, ಅದನ್ನು ಮೀರಲೆಂದೇ ನವ್ಯ ಮತ್ತು ಬಂಡಾಯ ಕಾವ್ಯಗಳು ಹುಟ್ಟಿಕೊಂಡವು. ಈ ಕಾವ್ಯ ಪ್ರಕಾರ ಮತ್ತು ಅವುಗಳ ಆರೋಗ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅಂತ ಯು. ಆರ್. ಅನಂತಮೂರ್ತಿಯವರು, ಆಗಲೇ 94 ವರ್ಷ ತುಂಬು ಜೀವನ ನಡೆಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಕನ್ನಡದ ಆಸ್ತಿ ಎಂದೇ ಹೆಸರಾಗಿದ್ದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರನ್ನ ಪ್ರಶ್ನೆ ಮಾಡುತ್ತಾರೆ.
“ ಅಲ್ರೀ, ಅಮ್ಮ ಕಸ ಗುಡಿಸಿದ್ರೆ ಅವಳನ್ನ ‘ಕಸ ಗುಡಿಸೊ ಅಮ್ಮ’ ಅಂತೀರಾ? ಅಮ್ಮ ಮುಸುರೆ ಪಾತ್ರೆ ತಿಕ್ಕಿದ್ರೆ, ಅವಳನ್ನ ‘ ಪಾತ್ರೆ ತಿಕ್ಕೊ ಅಮ್ಮ’ ಅಂತಿರೇನು? ಅಮ್ಮ ಏನು ಕೆಲಸ ಮಾಡಿದ್ರೂ ಅವಳು ಅಮ್ಮನೇ ಅಲ್ವಾ? ಹಾಗೇ ಕವಿತೆ. ಅದಕ್ಕೆ ನವೋದಯ, ನವ್ಯ, ಬಂಡಾಯ ಹೀಗೆ ಯಾವ ಲೇಬಲ್ಲೂ ಬೇಡ, ಕವಿತೆ ಅಂದ್ರೆ ಸಾಕು”. ಎನ್ನುತ್ತ ಮಾಸ್ತಿ ಕವಿತೆಯ ಮೇಲಿನ ಎಲ್ಲ ಲೇಬಲ್ ಗಳನ್ನು ನಿರಾಕರಿಸಿಬಿಡುತ್ತಾರೆ.

