ಪರಿಪೂರ್ಣತೆಯೆಂಬುದು ಒಂದು ಮಹಾ ಸುಳ್ಳು! : ಓಶೋ ವ್ಯಾಖ್ಯಾನ

ಪರಿಪೂರ್ಣತೆ ಒಂದು ಮಹಾ ಬೋರಿಂಗ್ ವಿಷಯ ಇದು ಪ್ರೇಮವನ್ನು ಚಾಲೇಂಜ್ ಮಾಡುವುದಿಲ್ಲ. ಚಾಲೆಂಜ್ ಇಲ್ಲದಾಗ ಪ್ರೇಮ ಕೂಡ ಪೂರ್ಣವಾಗಿ ಅನಾವರಣಗೊಳ್ಳುವುದಿಲ್ಲ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ನಮ್ಮ ಆರ್ದ್ರ ಪ್ರೇಮದೊಳಗಿರುವ
ಕೆಲ ಅಪರೂಪದ ಕ್ಷಣಗಳನ್ನು ಕಂಡು,
ಸ್ವರ್ಗಕ್ಕೂ ಹೊಟ್ಟೆಕಿಚ್ಚಾಗುತ್ತದಂತೆ.

ಭೂಮಿಯ ಮೇಲೆ ನಾವು ಮಾಡುವ
ಪ್ರೇಮದ ರೀತಿ ಅಷ್ಟು ಅನನ್ಯ.

ಮನುಷ್ಯನ ನೋವನ್ನು ಅರಿಯುವ ಎದೆಗಳಿಗಾಗಿ
ತಮ್ಮ ಬದುಕನ್ನೇ ಮಾರಲು ಸಿದ್ಧರಾಗಿರುವ
ಕೆಲ ದೇವರುಗಳಿದ್ದಾರಂತೆ
ಸ್ವರ್ಗದಲ್ಲಿ.

ಅವರಿಗೆ ಚೆನ್ನಾಗಿ ಗೊತ್ತು
ನಮ್ಮ ನೋವುಗಳು ಒಂದು ದಿನ ನಮ್ಮನ್ನು
ಅವರಿಗಿಂತಲೂ ಹೆಚ್ಚು ಎತ್ತರಕ್ಕೆ
ಕರೆದೊಯ್ಯುತ್ತವೆ ಎನ್ನುವುದು

  • ಹಾಫಿಜ್

ಪರಿಪೂರ್ಣತೆಯೆಂಬುದು ಒಂದು ಮಹಾ ಸುಳ್ಳು. ನಮ್ಮನ್ನು ಮನುಷ್ಯರನ್ನಾಗಿಸುವುದು, ಸುಂದರವಾಗಿಸುವುದು ನಮ್ಮ ಪರಿಪೂರ್ಣತೆಗಳಲ್ಲ ಬದಲಾಗಿ ನಮ್ಮ ಅಪರಿಪೂರ್ಣತೆಗಳು. ಪರಿಪೂರ್ಣತೆ ಒಂದು ಮಹಾ ಬೋರಿಂಗ್ ವಿಷಯ ಇದು ಪ್ರೇಮವನ್ನು ಚಾಲೇಂಜ್ ಮಾಡುವುದಿಲ್ಲ. ಚಾಲೆಂಜ್ ಇಲ್ಲದಾಗ ಪ್ರೇಮ ಕೂಡ ಪೂರ್ಣವಾಗಿ ಅನಾವರಣಗೊಳ್ಳುವುದಿಲ್ಲ.

ಒಬ್ಬ ಮನುಷ್ಯ ತನ್ನ ಇಡೀ ಬದುಕನ್ನ ಮದುವೆಯಿಲ್ಲದೆ ಕಳೆದ. ಅವನಿಗೆ ತೊಂಭತ್ತು ವರ್ಷ ವಯಸ್ಸಾಗಿ ಆತ ಸಾವಿನ ಹಾಸಿಗೆಯಲ್ಲಿದ್ದಾಗ ಅವನನ್ನು ಪ್ರಶ್ನೆ ಮಾಡಲಾಯಿತು.

“ ನೀನು ನಿನ್ನ ಇಡೀ ಜೀವನವನ್ನ ಮದುವೆಯಿಲ್ಲದೆ ಕಳೆದೆಯಲ್ಲ , ಆದರೆ ಯಾಕೆ ಹೀಗೆ ಅಂತ ನೀನು ಎಲ್ಲೂ ಯಾವಾಗಲೂ ಹೇಳಿಯೇ ಇಲ್ಲ. ಯಾಕೆ ಮದುವೆ ಆಗಲಿಲ್ಲ ನೀನು? ಈಗಲಾದರೂ ನಿಜ ಕಾರಣ ಹೇಳು. ಇನ್ನೇನು ನಿನ್ನ ಸಾವು ಹತ್ತಿರವಾಗಿದೆ, ಈ ರಹಸ್ಯವನ್ನು ಮುಚ್ಚಿಡಬೇಡ. ಈ ರಹಸ್ಯ ಈಗ ಯಾರಿಗಾದರೂ ಗೊತ್ತಾದರೆ ಅದರಿಂದ ನಿನಗೇನೂ ತೊಂದರೆ ಇಲ್ಲ”.

ಆ ವಯಸ್ಸಾದ ವ್ಯಕ್ತಿ ಉತ್ತರಿಸತೊಡಗಿದ….

“ ಹೌದು ಖಂಡಿತ ರಹಸ್ಯ ಇದೆ. ನಾನೇನು ಮದುವೆಗೆ ವಿರುದ್ಧವಾಗಿರಲಿಲ್ಲ. ಆದರೆ ನಾನು ಪರಿಪೂರ್ಣ ಹೆಣ್ಣೊಬ್ಬಳನ್ನ ಹುಡುಕುತ್ತಿದ್ದೆ ಮದುವೆಯಾಗಲು. ಈ ಹುಡುಕಾಟದಲ್ಲಿಯೇ ನನ್ನ ಇಡೀ ಆಯುಷ್ಯ ಕಳೆದು ಹೋಯಿತು.”

“ ಇಂಥ ವಿಶಾಲ ಜಗತ್ತಿನಲ್ಲಿ ಲಕ್ಷಾಂತರ ಜನ ಇದ್ದಾರೆ. ಅವರಲ್ಲಿ ಅರ್ಧಕ್ಕರ್ಧ ಜನ ಹೆಂಗಸರು. ಅವರಲ್ಲಿ ನಿನಗೆ ಒಬ್ಬಳೂ ಪರಿಪೂರ್ಣ ಹೆಣ್ಣು ಸಿಗಲಿಲ್ಲವೆ ಮದುವೆಯಾಗಲು?” ಅವನನ್ನು ಮತ್ತೆ ಪ್ರಶ್ನೆ ಮಾಡಲಾಯಿತು.

“ಬಹಳ ಹುಡುಕಾಟದ ನಂತರ ಒಬ್ಬಳು ಸಿಕ್ಕಳು” ಆ ವೃದ್ಧ ವ್ಯಕ್ತಿಯ ಕಣ್ಣಲ್ಲಿ ಕಣ್ಣೀರು ಕಾಣಿಸಿಕೊಂಡಿತು.

“ಮತ್ತೆ ಏನಾಯಿತು? ಯಾಕೆ ನೀನು ಅವಳನ್ನು ಮದುವೆಯಾಗಲಿಲ್ಲ?”

“ ಅವಳೂ ಸಹ ಮದುವೆಗೆ ಒಬ್ಬ ಪರಿಪೂರ್ಣ ಗಂಡಸನ್ನ ಹುಡುಕುತ್ತಿದ್ದಳು”

ಆ ವ್ಯಕ್ತಿ ತಾನು ಮದುವೆ ಆಗದ ಕಾರಣವನ್ನು ನಿರಾಸೆಯಿಂದ ಬಿಚ್ಚಿಟ್ಟ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.